23.01.2019 - "ನಿನ್ನ ಕೈಯನ್ನು ಚಾಚು,"

 ಮೊದಲನೇ ವಾಚನ: ಹಿಬ್ರಿಯರಿಗೆ  7:1-3, 15-17

ಮೆಲ್ಕಿಸದೇಕನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು. ಶತ್ರು ರಾಜರನ್ನು ಗೆದ್ದು ಹಿಂದಿರುಗುತ್ತಿದ್ದ ಅಬ್ರಹಾಮನನ್ನು ಈತನು ಎದುರುಗೊಂಡು ಆಶೀರ್ವದಿಸಿದನು. ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, "ನ್ಯಾಯ ನೀತಿಯ ಅರಸ" ಅಲ್ಲದೆ ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ 'ಶಾಂತಿ ಸಮಾಧಾನದ ಅರಸ ಎಂಬ ಅರ್ಥವೂ  ಉಂಟು. ಆತನಿಗೆ ತಂದೆತಾಯಿಯಾಗಲಿ ವಂಶಾವಳಿಯಾಗಲಿ ಇಲ್ಲ. ಆತನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಆತನು ದೇವಪುತ್ರನನ್ನು ಹೋಲುತ್ತಾನೆ. ಶಾಶ್ವತ ಯಾಜಕನಾಗಿ ಉಳಿಯುತ್ತಾನೆ. ಹೀಗೆ ಕಾಣಿಸಿಕೊಂಡ ಯಾಜಕ ಮೆಲ್ಕಿಸದೇಕನನ್ನು ಹೋಲುವುದರಿಂದ ನಾವು ಹೇಳುವ ವಿಷಯ ಇನ್ನೂ ಸ್ಪಷ್ಟವಾಗುತ್ತದೆ. ಇವರು ಯಾಜಕರಾದುದು ಅಳಿವಿಲ್ಲದ ಜೀವಶಕ್ತಿಯಿಂದ; ಕುಲಗೋತ್ರಗಳ ನೀತಿಯನುಸಾರವಾದ ದೈಹಿಕ ಹುಟ್ಟಿನಿಂದಲ್ಲ. "ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕನು," ಎಂದು ಪವಿತ್ರಗ್ರಂಥ ಸಮರ್ಥಿಸುತ್ತದೆ.

ಕೀರ್ತನೆ: 110:1, 2, 3, 4
ಶ್ಲೋಕ: ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನಿರುತ

ಶುಭಸಂದೇಶ: ಮಾರ್ಕ 3:1-6


ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಪುನಃ ಹೋದರು ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು. ಅವನನ್ನು ಸಬ್ಬತ್ ದಿನದಲ್ಲಿ ಗುಣಪಡಿಸಿದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚು ಹಾಕುತ್ತಿದ್ದರು. ಯೇಸು ಬತ್ತಿದ ಕೈಯುಳ್ಳವನಿಗೆ, "ಎದ್ದು ಮುಂದಕ್ಕೆ ಬಾ," ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ, "ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ," ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ. ಯೇಸು ಸುತ್ತಲೂ  ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, "ನಿನ್ನ ಕೈಯನ್ನು ಚಾಚು," ಎಂದರು. ಅವನು ಚಾಚಿದನು. ಅದು ಸಂಪೂರ್ಣವಾಗಿ ಸ್ವಸ್ಥವಾಯಿತು. ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೂಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...