ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.01.2019 - ದೇವರ ವಾಕ್ಯ ಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದು.

ಮೊದಲನೇ ವಾಚನ: ಹಿಬ್ರಿಯರಿಗೆ  4:12-16


ದೇವರ ವಾಕ್ಯ ಜೀವಂತವಾದುದು, ಕ್ರಿಯಾತ್ಮಕವಾದುದು; ಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದು. ಪ್ರಾಣ ಮತ್ತು ಆತ್ಮಗಳ, ಕೀಲು ಮತ್ತು ಮಜ್ಜೆಗಳ ಭೇದವನ್ನು ಛೇದಿಸುವಂತಾದ್ದು; ಹೃದಯದ ಆಶೆ ಆಲೋಚನೆಗಳನ್ನು ವಿವೇಚಿಸುವಂತಾದ್ದು. ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ,  ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ. ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು. ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಟ ಹಾಗೂ ಪ್ರದಾನ ಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರದಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.

ಕೀರ್ತನೆ: 19:7-9, 14

ಶ್ಲೋಕ: ಪ್ರಭುವೇ, ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ

ಶುಭಸಂದೇಶ: ಮಾರ್ಕ:  2:13-17

ಯೇಸುಸ್ವಾಮಿ ಪುನಃ ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಬೋಧಿಸಿದರು. ಅಲ್ಲಿಂದ ಹೊರಟುಹೋಗುತ್ತಿರುವಾಗ, ಆಲ್ಫಯನ ಮಗನಾದ ಲೇವಿಯು ಸುಂಕವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿರುವುದನ್ನು ಯೇಸು ಕಂಡರು. "ನನ್ನನ್ನು ಹಿಂಬಾಲಿಸು," ಎಂದು ಹೇಳಿ ಕರೆದರು. ಲೇವಿ ಎದ್ದು ಅವರನ್ನು ಹಿಂಬಾಲಿಸಿದನು. ತದನಂತರ ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ಸುಂಕದವರು, ಪಾಪಿಷ್ಠರು, ಅಲ್ಲಿಗೆ ಬಂದರು. ಇವರೆಲ್ಲರೂ ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು. ಇಂಥವರು ಬಹುಮಂದಿ  ಯೇಸುವನ್ನು  ಹಿಂಬಾಲಿಸುತ್ತಿದ್ದರು. ಫರಿಸಾಯ ಪಂಥಕ್ಕೆ ಸೇರಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಸುಂಕದವರ ಮತ್ತು ಇತರ ಪಾಪಿಗಳ ಪಂಕ್ತಿಯಲ್ಲಿ ಯೇಸು ಊಟಮಾಡುತ್ತಿರುವುದನ್ನು ಕಂಡು, "ಈತನು ಇಂಥಾ ಬಹಿಷ್ಕ್ರತ ಜನರ ಜೊತೆಯಲ್ಲಿ ಊಟ ಮಾಡೂವುದೇಕೆ?" ಎಂದು ಯೇಸುವಿನ ಶಿಷ್ಯರೊಡನೆ ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು ಅವರಿಗೆ, "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು," ಎಂದರು.

1 comment:

  1. ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ. ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು.

    ReplyDelete