ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.01.2019 - "ಕೆಲವರು ನೂರರಷ್ಟು ಫಲ ಕೊಡುತ್ತಾರೆ"

ಮೊದಲನೇ ವಾಚನ: ಹಿಬ್ರಿಯರಿಗೆ 10:11-18

ಪ್ರತಿಯೊಬ್ಬ ಯಾಜಕನು ಅನುದಿನವೂ ತನ್ನ ಸೇವೆಯನ್ನು ನಿರ್ವಹಿಸುತ್ತಾನೆ. ಆದರೆ ಅವುಗಳಿಂದ ಎಂದಿಗೂ ಪಾಪ ನಿವಾರಣೆ ಆಗದು . ಕ್ರಿಸ್ತ ಯೇಸು ಪಾಪ ನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾರ್ಶವದಲ್ಲಿ ಆಸೀನರಾಗಿದ್ದಾರೆ. ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವತನಕ ಅಲ್ಲೇ ಕಾದಿರುತ್ತಾರೆ. ತಾವು ಪುನೀತಗೊಳಿಸಿದವರನ್ನು ಒಂದೇ ಒಂದು ಬಲಿಯರ್ಪಣೆಯಿಂದ ಯೇಸು ನಿರಂತರ ಸಿದ್ಧಿಗೆ ತಂದಿದ್ದಾರೆ. ಇದನ್ನು ಕುರಿತು ಪವಿತ್ರಾತ್ಮರು ಕೂಡ ನಮಗೆ ಸಾಕ್ಷಿಕೊಡುತ್ತಾರೆ. "ಆ ದಿನಗಳು ಬಂದ ಮೇಲೆ ನಾನು ಅವರೊಡನೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು: ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ನಾಟಿಸುವೆನು; ಅವರ ಮನದಲ್ಲಿ ಬರೆಯುವೆನು," ಎಂದು ಹೇಳಿದ ನಂತರವೇ, " ಅವರ ಪಾಪಗಳನ್ನೂ ತಪ್ಪುನೆಪ್ಪುಗಳನ್ನೂ ನೆನಪಿಗೆ ತಂದುಕೊಳ್ಳೆನು," ಎಂದಿದ್ದಾರೆ. ಪಾಪಗಳ ಕ್ಷಮಾಪಣೆಯಾದ ಬಳಿಕ  ಪಾಪ ಪರಿಹಾರಕ ಬಲಿಯ ಅವಶ್ಯಕತೆ ಇಲ್ಲ.

ಕೀರ್ತನೆ: 110:1, 2, 3, 4
ಶ್ಲೋಕ: ಮೆಲ್ಕಿಸದೆಕ್ ಪರಂಪರೆಯ ಯಾಜಕ ನೀ ನಿರುತ

 ಶುಭಸಂದೇಶ: ಮಾರ್ಕ 4:1-20

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ಮತ್ತೆ ಬೋಧಿಸಲಾರಂಬಿಸಿದರು. ಜನರು ಕಿಕ್ಕಿರಿದು ಸುತ್ತಲೂ ನೆರೆದುಬಂದಿದ್ದರು. ಆದುದರಿಂದ ಅವರು ಸರೋವರದಲ್ಲಿದ್ದ ದೋಣಿಯೊಂದನ್ನು ಹತ್ತಿ  ಕುಳಿತರು. ಜನರು ದಡದಲ್ಲೇ ಉಳಿದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಗಳ ಮೂಲಕ ಬೋಧಿಸುತ್ತಾ ಹೀಗೆಂದರು: "ಕೇಳಿ, ಒಬ್ಬ ರೈತ ಬಿತ್ತುವುದಕ್ಕೆ ಹೊರಟ. ಬಿತ್ತನೆ ಮಾಡುತ್ತಾ ಇದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದುದೇ ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ಬಹಳ ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು; ಬಿಸಿಲೇರಿದಾಗ ಬಾಡಿದವು; ಆಳವಾಗಿ  ಬೇರೂರಲು ಆಗದ ಕಾರಣ ಅವು ಒಣಗಿಹೋದವು. ಇನ್ನು ಕೆಲವು ಬೀಜಗಳು ಮುಳ್ಳು ಪೊದೆಗಳ ನಡುವೆ ಬಿದ್ದವು. ಮುಳ್ಳು ಪೊದೆಗಳು ಸಸ್ಯಗಳ ಸಮೇತ ಅವುಗಳನ್ನು ಅದುಮಿ ಬಿಟ್ಟವು. ಆದುದರಿಂದ ಅವು ಫಲ ಕೊಡಲಿಲ್ಲ. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು ತೆನೆ ಬಿಟ್ಟವು. ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರವತ್ತರಷ್ಟು ಮತ್ತೆ ಕೆಲವು ನೂರರಷ್ಟು ಫಲವನ್ನು ಕೊಟ್ಟವು." ಈ ಸಾಮತಿಯನ್ನು ಹೇಳಿದ ಬಳಿಕ ಯೇಸು, "ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದರು. ಈ ಉಪದೇಶವನ್ನು ಕೇಳಿದವರಲ್ಲಿ ಕೆಲವರು, ಯೇಸುಸ್ವಾಮಿ ಒಬ್ಬರೇ ಇದ್ದಾಗ, ಹನ್ನೆರಡು ಮಂದಿ  ಶಿಷ್ಯರೊಡನೆ ಬಂದು ಅವರು ಹೇಳಿದ  ಸಾಮತಿಗಳನ್ನು ವಿವರಿಸಬೇಕೆಂದು ಕೇಳಿಕೊಂಡರು. ಅದಕ್ಕೆ ಯೇಸು, "ದೇವರ ಸಾಮ್ರಾಜ್ಯದ ರಹಸ್ಯವನ್ನು ನಿಮಗೆ ತಿಳಿಸಲಾಗಿದೆ. ಏಕೆಂದರೆ, "ಕಣ್ಣಾರೆ ನೋಡಿಯೂ ಅವರು ಕಾಣರು; ಕಿವಿಯಾರೆ ಕೇಳಿಯೂ ಅವರು ಗ್ರಹಿಸರು. ಕಂಡು ಗ್ರಹಿಸಿದರೆ ಅವರು ದೇವರತ್ತ ತಿರುಗಿಯಾರು; ಪಾಪಕ್ಷಮೆ ಹೊಂದಿಯಾರು," ಎಂದರು. ಆನಂತರ ಯೇಸುಸ್ವಾಮಿ ಅವರಿಗೆ, "ಈ ಸಾಮತಿಯನ್ನು ನೀವು ಅರ್ಥಮಾಡಿಕೊಳ್ಳಲಿಲ್ಲವೇ? ಹಾಗಾದರೆ ಬೇರೆಲ್ಲಾ ಸಾಮತಿಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ? ಈ ಸಾಮತಿಯಲ್ಲಿ, ಬಿತ್ತುವವನು "ದೇವರ ಸಂದೇಶ" ಎಂಬ ಬೀಜವನ್ನು ಬಿತ್ತುತ್ತಾನೆ.

ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ; ಸೈತಾನನು ತಕ್ಷಣವೇ ಬಂದು ಆ ಸಂದೇಶವನ್ನು ತೆಗೆದುಬಿಡುತ್ತಾನೆ. ಕಾಲ್ದಾರಿಯಲ್ಲಿ ಬಿದ್ದ ಬೀಜಕ್ಕೆ ಹೋಲಿಕೆಯಾಗಿರುವವರು ಇವರೇ. ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳಿದ ಕೂಡಲೆ ಅದನ್ನು ಸಂತಸದಿಂದ ಸ್ವೀಕರಿಸುತ್ತಾರೆ. ಆದರೆ ಅವರಲ್ಲಿ ಅದು ಆಳವಾಗಿ ಬೇರೂರದ ಕಾರಣ ಕೊಂಚ ಕಾಲ ಮಾತ್ರ ಉಳಿಯುತ್ತದೆ. ದೇವರ ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿಬೀಳುತ್ತಾರೆ. ಇವರೇ ಕಲ್ಲು ನೆಲದ ಮೇಲೆ ಬಿದ್ದ ಬೀಜಕ್ಕೆ ಸಮಾನರಾದವರು. ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ. ಆದರೆ ಅವರೊಳಗೆ ಇರುವ ಪ್ರಾಪಂಚಿಕ ಚಿಂತನೆಗಳೂ ಐಶ್ವರ್ಯದ ವ್ಯಾಮೋಹಗಳೂ ಇನ್ನಿತರ ಅಭಿಲಾಷೆಗಳೂ ದೇವರ ಸಂದೇಶವನ್ನು ಅದುಮಿ, ಅದು ಫಲಬಿಡದಂತೆ ಮಾಡುತ್ತವೆ. ಇವರೇ ಮುಳ್ಳುಪೊದೆಗಳ ನಡುವೆ ಬಿದ್ದ ಬೀಜಕ್ಕೆ ಅನುರೂಪ ಆದವರು. ಮತ್ತೆ ಕೆಲವರಾದರೋ ದೇವರ ಸಂದೇಶವನ್ನು ಕೇಳಿ ಅದನ್ನು ಸ್ವಾಗತಿಸುತ್ತಾರೆ. ಅಂಥವರಲ್ಲಿ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಇನ್ನು ಕೆಲವರು ನೂರರಷ್ಟು ಫಲಕೊಡುತ್ತಾರೆ. ಇವರೆ ಹದವಾದ ಭೂಮಿಯಲ್ಲಿ ಬಿದ್ದ ಬೀಜಕ್ಕೆ ಸಮಾನರು," ಎಂದರು.

3 comments: