ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.01.2019 - ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ.

ಮೊದಲನೇ ವಾಚನ: ಹಿಬ್ರಿಯರಿಗೆ 10:19-25

ಪ್ರಿಯ ಸಹೋದರರೇ, ಯೇಸುಸ್ವಾಮಿ ತಮ್ಮ ದೇಹವೆಂಬ ತೆರೆಯ ಮೂಲಕ ನಮಗೆ ಹೊಸದಾದ ಸಜೀವ ಮಾರ್ಗವನ್ನು ತೆರೆದಿಟ್ಟಿದ್ದಾರೆ. ಅದರ ಮೂಲಕ ಗರ್ಭಗುಡಿಯನ್ನು ಧೈರ್ಯದಿಂದ ಪ್ರವೇಶಿಸುವ ಹಕ್ಕು ಅವರ ರಕ್ತಧಾರೆಯಿಂದಲೇ ನಮಗೆ ದೊರೆತಿದೆ. ದೇವರ ಮನೆತನದ ಮೇಲೆ ಅಧಿಕಾರವಿರುವ  ಶ್ರೇಷ್ಟ ಯಾಜಕ ನಮಗಿದ್ದಾರೆ. ಆದಕಾರಣ, ನಾವು ಕೆಟ್ಟ ಮನಸ್ಸಾಕ್ಷಿಯನ್ನು ತೊರೆದ ಹೃದಯದಿಂದಲೂ ಪುಣ್ಯ ಜಲದಿಂದ ತೊಳೆದ ದೇಹದಿಂದಲೂ ಕೂಡಿದವರಾಗಿ ಶುದ್ದ ಅಂತರಂಗದಿಂದಲೂ ಪೂರ್ಣವಿಶ್ವಾಸದಿಂದಲೂ ದೇವರ ಬಳಿಗೆ ಸಾಗೋಣ. ಕೊಟ್ಟ ಮಾತನ್ನು ದೇವರು ಮೀರುವುದಿಲ್ಲ. ಆದ್ದರಿಂದ ನಾವು ನಿವೇದಿಸುವ ನಂಬಿಕೆ ನಿರೀಕ್ಷೆಯಲ್ಲಿ ಚಂಚಲರಾಗದೆ ಸದೃಢರಾಗಿರೋಣ; ಪರಸ್ಪರ ಹಿತಚಿಂತಕರಾಗಿರೋಣ; ಪ್ರೀತಿಸಬೇಕು, ಒಳಿತನ್ನು ಮಾಡಬೇಕು ಎಂದು ಒಬ್ಬರನ್ನೊಬ್ಬರು ಹುರಿದುಂಬಿಸೋಣ. ಸಭೆ ಸೇರುವ ರೂಢಿಯನ್ನು ಕೆಲವರು ಕೈಬಿಟ್ಟಿದ್ದಾರೆ. ನಾವು ಹಾಗೆ ಮಾಡದಿರೋಣ. ನಿಮಗೆ ತಿಳಿದಿರುವಂತೆ ಪ್ರಭು ಪ್ರತ್ಯಕ್ಷರಾಗುವ ದಿನವು ಸಮೀಪಿಸುತ್ತಿರುವುದರಿಂದ ಮತ್ತಷ್ಟು ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ.

ಕೀರ್ತನೆ: 24:1-2, 3-4, 5-6
ಶ್ಲೋಕ: ಇಂಥವರೇ ದೇವರ ದರ್ಶನಾಭ್ಯರ್ಥಿಗಳು

ಶುಭಸಂದೇಶ: ಮಾರ್ಕ 4:21-25



ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, "ಯಾರಾದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ನಿಶ್ಚಯವಾಗಿಯೂ ಇಲ್ಲ. ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಬೆಳಕಿಗೆ ಬಾರದ ಮುಚ್ಚುಮರೆಯಿಲ್ಲ. ರಟ್ಟಾಗದ ಗುಟ್ಟಿಲ್ಲ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ. ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು; ಇನ್ನೂ ಅಧಿಕವಾಗಿ ಕೊಡುವರು. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ," ಎಂದರು

ಮನಸಿಗೊಂದಿಷ್ಟು  -  ಧರ್ಮಶಾಸ್ತ್ರಜ್ಞ ವಿಲಿಯಮ್ ನಿಲ್ ಹೀಗೆನ್ನುತ್ತಾನೆ  "ನಮ್ಮ  ಮನಃಸಾಕ್ಷಿಯು ಮೊಂಡಾಗುತ್ತಾ ಹೋಗುತ್ತದೆ, ದೇವರನ್ನು ನೋಡುವ ದೃಷ್ಟಿ ಮಂಕಾಗುತ್ತದೆ, ನಮ್ಮ ಕರುಣೆ, ಅನುಕಂಪ ಕ್ಷೀಣಿಸುತ್ತದೆ. ನಮ್ಮ ಪ್ರೀತಿ ತಣ್ಣಗಾಗುತ್ತದೆ. ಇದು ದೇವರು ನಮ್ಮ ಮೇಲೆ ಸುರಿಸಿದ್ದಲ್ಲ. ನಮ್ಮಷ್ಟಕ್ಕೆ ನಾವೇ ತಂದುಕೊಂಡಿದ್ದು. ಕ್ರಿಸ್ತ ನಮಗೆ ಆಯ್ಕೆಗಳನ್ನು ನೀಡುತ್ತಾರೆ. ಜೀವದ ಮಾರ್ಗ ಅಥವಾ ಸಾವಿನ ಮಾರ್ಗ.  ಇದು ಒಂದೇ ಬಾರಿಗೆ ನಾವು   ನಿರ್ಧರಿಸಬೇಕಾದ  ಆಯ್ಕೆಯಲ್ಲ, ಮಾರ್ಗವಲ್ಲ. ನಮ್ಮ ಪ್ರತಿದಿನ ಬಾಳಿನಲ್ಲಿ ಕ್ರಿಸ್ತನ ವಾಕ್ಯಗಳಿಗೆ, ಕರೆಗೆ ನಾವು ಸ್ಪಂದಿಸುವ , ಸ್ಪಂದಿಸದೆ ಹೋಗುವ ಮೂಲಕ ನಾವು ಆಯ್ಕೆ ಮಾಡಬಹುದಾದ ಮಾರ್ಗ".

ಪ್ರಶ್ನೆ - ನಮ್ಮ ಆಯ್ಕೆ ಎತ್ತ ಸಾಗಿದೆ? ನಮಗೆ ಸಿಕ್ಕಿದ್ದನ್ನು ನಾವು ಹಂಚಿಕೊಂಡಿದ್ದೇವೆಯೇ? ನಮ್ಮ ಕ್ರಿಸ್ತನಿಂದ ಸಿಕ್ಕ ಬೆಳಕು ಹರಡುತ್ತಿದೆಯೇ ಅಥವಾ ಬಟ್ಟಲ ಕೆಳಗೆ ಬಚ್ಚಿಟ್ಟುಕೊಂಡಿದ್ದೇವೆಯೇ?



No comments:

Post a Comment