20.07.2018



ಪ್ರವಾದಿ ಯೆಶಾಯನ ಗ್ರಂಥದಿಂದ ವಾಚನ 38 :1-6

ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ. ಆದುದರಿಂದ ನಿನ್ನ ಸಂಸಾರವನ್ನು ವ್ಯವಸ್ಥೆ ಮಾಡಬೇಕು ಎಂದು ಸರ್ವೇಶ್ವರ ಹೇಳಿದ್ದಾರೆ,” ಎಂದು ತಿಳಿಸಿದನು. ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು, “ಸರ್ವೇಶ್ವರಾ, ನಿಮಗೆ ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ ಸೇವೆ ಮಾಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡಿದ್ದೇನೆ. ಇದನ್ನು ದಯೆಯಿಂದ ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು. ಆಗ ಸರ್ವೇಶ್ವರ ಯೆಶಾಯನಿಗೆ, “ನೀನು ಹೋಗಿ ಹಿಜ್ಕೀಯನಿಗೆ ಹೀಗೆಂದು ತಿಳಿಸು : ‘ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಇನ್ನೂ ಹದಿನೈದು ವರ್ಷಗಳನ್ನು ಸೇರಿಸುತ್ತೇನೆ. ನಿನ್ನನ್ನು ಮತ್ತು ಈ ಪಟ್ಟಣವನ್ನು ಅಸ್ಸೀರಿಯದ ಅರಸರ ಕೈಗೆ ಸಿಕ್ಕದಂತೆ ತಪ್ಪಿಸುತ್ತೇನೆ. ಈ ಪಟ್ಟಣವನ್ನು ಉಳಿಸಿ ಕಾಪಾಡುತ್ತೇನೆ.” ಅದಕ್ಕೆ ಯೆಶಾಯನು ಸರ್ವೇಶ್ವರ ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ : ಇಗೋ, ಆಹಾಜನು ಕಟ್ಟಿಸಿದ ನೆರಳು ಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಬಂದಿತು.

ಕೀರ್ತನೆ ಯೆಶಾಯ 38 : 10,11,12,16

ನನ್ನಾತ್ಮವನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ |

ಸಂತ ಮತ್ತಾಯರು ಬರೆದ ಶುಭಸಂದೇಶದಿಂದ ವಾಚನ 12: 1-8

ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋಧಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋಧಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. ಇದನ್ನು ಕಂಡ ಫರಿಸಾಯರು, “ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ," ಎಂದರು. ಅದಕ್ಕೆ ಯೇಸು, “ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೇ? ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೇ? ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೇ? ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ. ‘ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ. ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ,” ಎಂದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...