ಮೊದಲನೆಯ ವಾಚನ :ಪ್ರವಾದಿ ಆಮೋಸನ ಗ್ರಂಥದಿಂದ ವಾಚನ 7: 12-15
ಆ ಬಳಿಕ ಅಮಚ್ಯನು ಆಮೋಸನಿಗೆ, “ಕಣಿ ಹೇಳುವವನೇ, ತೊಲಗು, ಜುದೇಯ ನಾಡಿಗೆ ಓಡಿಹೋಗು; ಅಲ್ಲಿ ಪ್ರವಾದನೆ ಮಾಡಿ ಹೊಟ್ಟೆ ಹೊರೆದುಕೋ ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜನ ಗರ್ಭಗುಡಿ, ರಾಜ್ಯದ ಪವಿತ್ರಾಲಯ,” ಎಂದನು. ಅದಕ್ಕೆ ಆಮೋಸನು ಪ್ರತ್ಯುತ್ತರವಾಗಿ: “ನಾನು ಪ್ರವಾದಿಯಲ್ಲ, ಪ್ರವಾದಿಯ
ಮಗನೂ ಅಲ್ಲ. ನಾನೊಬ್ಬ ಗೊಲ್ಲ, ಅತ್ತಿಹಣ್ಣನ್ನು ಕೀಳುವವನು. ಮಂದೆ ಕಾಯುವುದರಿಂದ
ಸರ್ವೇಶ್ವರ ನನ್ನನ್ನು ಬಿಡಿಸಿದರು. ನೀನು ಹೋಗಿ ನನ್ನ ಜನರಾದ ಇಸ್ರಯೇಲರಿಗೆ ಪ್ರವಾದನೆ ಮಾಡು ಎಂದು
ಹೇಳಿಕಳುಹಿಸಿದರು,” ಎಂದನು.
ಕೀರ್ತನೆ :
ತೋರಿಸೆಮಗೆ ಹೇ ಪ್ರಭೂ ಕರುಣೆಯನ್ನು
ನಾ ಕೇಳುತ್ತಿರುವೆನು
ಪ್ರಭು ಹೇಳುವುದನ್ನು
ತನ್ನ ಜನರಿಗಾತ ನುಡಿವುದು ಶಾಂತಿಯ ನ್ನು
ಭಯ ಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ
ಇದರಿಂದಾತನ
ಮಹಿಮೆ ನಾಡಿನಲ್ಲಿರುವುದು ನಿರುತ
ಎರಡನೆಯ ವಾಚನ : ಸಂತ ಪೌಲ ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ 1: 3-14
ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ.
ಪಿತ ದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತಯೇಸುವಿನಲ್ಲಿ
ನಮಗೆ ಅನುಗ್ರಹಿಸಿದ್ದಾರೆ. ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು
ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು
ಇಚ್ಛಿಸಿದರು. ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು
ಆಗಲೇ ನಿರ್ಧರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು. ತಮ್ಮ ಪ್ರೀತಿಯ ಪುತ್ರನಲ್ಲೇ
ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿ ಸಲ್ಲಿಸೋಣ. ಯೇಸುಕ್ರಿಸ್ತರು
ಸುರಿಸಿದ ರಕ್ತಧಾರೆಯ ಮೂಲಕ ನಮಗೆ ಪಾಪಕ್ಷಮೆ ದೊರಕಿತು; ವಿಮೋಚನೆಯೂ
ಲಭಿಸಿತು. ಇದು ದೇವರ ಅನುಗ್ರಹದ ಶ್ರೀಮಂತಿಕೆಯೇ ಸರಿ. ಇದನ್ನು ನಮ್ಮ ಮೇಲೆ ಅವರು ಯಥೇಚ್ಛವಾಗಿ ಸುರಿಸಿದ್ದಾರೆ.
ದೇವರು ಸಮಗ್ರ ಜ್ಞಾನ-ವಿವೇಕಗಳಿಂದ ತಮ್ಮ ರಹಸ್ಯ ಯೋಜನೆಯನ್ನು ನಮಗೆ ತಿಳಿಯಪಡಿಸಿದ್ದಾರೆ. ಮೊದಲೇ
ನಿರ್ಧರಿಸಿದ್ದಂತೆ ಅದನ್ನು ಯೇಸುಕ್ರಿಸ್ತರ ಮೂಲಕ ಪರಿಪೂರ್ಣಗೊಳಿಸಬೇಕೆಂಬುದು ಅವರ ಸಂಕಲ್ಪವಾಗಿತ್ತು.
ಕಾಲವು ಸಂಪೂರ್ಣಗೊಂಡಾಗ ಇಹಪರಗಳಲ್ಲಿರುವ ಸಮಸ್ತವನ್ನು ಕ್ರಿಸ್ತ ಯೇಸುವಿನಲ್ಲಿ ಒಂದುಗೂಡಿಸುವುದೇ
ಈ ಯೋಜನೆಯ ಇಂಗಿತ. ದೈವ ಯೋಜನೆ ಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ
ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು.
ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ
ಹಾಡಬೇಕು. ನೀವು ಸಹ ಸತ್ಯವಾಕ್ಯವನ್ನು ಅಂದರೆ, ನಿಮಗೆ ಜೀವೋದ್ಧಾರವನ್ನೀಯುವ
ಶುಭಸಂದೇಶವನ್ನು ಕೇಳಿ ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಟ್ಟಿರಿ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ
ಅವರಿಂದ ಮುದ್ರಿತರಾದಿರಿ. ಹೀಗೆ ದೇವರಿಗೆ ಸೇರಿದವರು ವಿಮೋಚನೆ ಹೊಂದಿ ಸ್ವರ್ಗೀಯ ಸ್ವಾಸ್ಥ ಕ್ಕೆ
ಬಾಧ್ಯರಾಗಲು ಆ ಪವಿತ್ರಾತ್ಮರೇ ಆಧಾರ. ಈ ಕಾರಣ ದೇವರಿಗೆ ಮಹಿಮೆ ಸಲ್ಲಲಿ.
ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ! ನನ್ನ ಕುರಿಗಳು ನನ್ನ ಸ್ವರವನ್ನು ಗುರುತಿಸುತ್ತವೆ, ನಾನು ಅವನ್ನು ಬಲ್ಲೆನು; ಅವು ನನ್ನನ್ನು ಹಿಂಬಾಲಿಸುತ್ತವೆ. ಅಲ್ಲೆಲೂಯ!
ಶುಭಸಂದೇಶ : ಸಂತ ಮಾರ್ಕ ಬರೆದ ಶುಭಸಂದೇಶದಿಂದ ವಾಚನ 6: 7-13
ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ
ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆ ಮಾಡಿದರು. ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ
ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೊಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ
ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ
ಅದು ಸಾಕ್ಷಿಯಾಗಿರಲಿ,” ಎಂದರು. ಶಿಷ್ಯರು ಹೊರಟುಹೋಗಿ, “ಪಶ್ಚಾತ್ಥಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು. ದೆವ್ವ ಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು.
ತೈಲ ಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.
No comments:
Post a Comment