ಸಂತ ತೋಮಸರ ಮಹೋತ್ಸವ
ಮೊದಲನೇ ವಾಚನ: ಎಫೆಸಿಯರಿಗೆ: 2: 19-22 (ಪ್ರೇಷಿತರ ಕಾರ್ಯಕಲಾಪಗಳು: 10: 24-35)
ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವ ಜನರೊಂದಿಗೆ ಸಹ ಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸು ಕ್ರಿಸ್ತರೇ ಈ ತಳಹದಿಯ ಮುಖ್ಯ ಮೂಲೆಗಲ್ಲು. ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವ ಮಂದಿರ ಆಗುತ್ತದೆ. ಯೇಸು ಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲಾರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.
ಕೀರ್ತನೆ: 117: 1ಬಿಸಿ, 2
ಶ್ಲೋಕ: ಆತನನು ಹೊಗಳಿ ಹಾಡಿ ಸರ್ವ ಜನಾಂಗಗಳೇ
ಎರಡನೆಯ ವಾಚನ: ಹಿಬ್ರಿಯರಿಗೆ: 1: 2-3 (1 ಪೇತ್ರ: 1: 3-9)
ಸಹೋದರರೇ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟು ಮಾಡಿದ್ದು ಇವರ ಮುಖಾಂತರವೇ: ಸಮಸ್ತಕ್ಕೂ ಬಾಧ್ಯಸ್ಥರನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ ಎಂದಿದ್ದಾರೆ.
ಶುಭಸಂದೇಶ: ಯೊವಾನ್ನ: 20: 24-29
ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು "ನಾವು ಪ್ರಭುವನ್ನು ನೋಡಿದೆವು", ಎಂದು ಹೇಳಿದರು. ಅದಕ್ಕೆ ಅವನು, "ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು. ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ," ಎಂದುಬಿಟ್ಟನು. ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನು ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರು ಯೇಸು ಬಂದು ಅವರ ನಡುವೆ ನಿಂತು, "ನಿಮಗೆ ಶಾಂತಿ" ಎಂದರು. ಆಮೇಲೆ ತೋಮನಿಗೆ, "ಇಗೋ ನೋಡು ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು; ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು" ಎಂದು ಹೇಳಿದರು. ಆಗ ತೋಮನು, "ನನ್ನ ಪ್ರಭುವೇ ನನ್ನ ದೇವರೆ" ಎಂದನು. ಯೇಸು ಅವನಿಗೆ "ನನ್ನನ್ನು ಕಂಡುದರಿಂದ ತಾನೇ ನಿನಗೆ ವಿಶ್ವಾಸ ಹುಟ್ಟಿತ್ತು? ಕಾಣದೆ ವಿಶ್ವಾಸಿಸುವವರು ಧನ್ಯರು" ಎಂದು ಹೇಳಿದರು.
No comments:
Post a Comment