ಪ್ರವಾದಿ ಮೀಕನ ಗ್ರಂಥದಿಂದ ವಾಚನ 6: 1-4, 6-8
ಸರ್ವೇಶ್ವರ ಹೇಳುವುದನ್ನು ಕೇಳಿರಿ : “ಎದ್ದೇಳು; ಬೆಟ್ಟಗಳ
ಸಮ್ಮುಖದಲ್ಲಿ ನಿನ್ನ ವ್ಯಾಜ್ಯ ನಡೆಯಲಿ; ನಿನ್ನ ಧ್ವನಿ ಗುಡ್ಡಗಳಿಗೆ
ಕೇಳಿಸಲಿ. ಬೆಟ್ಟಗಳೇ, ಸರ್ವೇಶ್ವರಸ್ವಾಮಿಯ
ಆಪಾದನೆಯನ್ನು ಕೇಳಿರಿ. ಭೂಮಿಯ ಸ್ಥಿರವಾದ ಅಸ್ತಿಭಾರಗಳೇ, ಕಿವಿಗೊಡಿ. ಆ ಸ್ವಾಮಿಗೆ ತನ್ನ ಪ್ರಜೆಯ ಮೇಲೆ ವ್ಯಾಜ್ಯವಿದೆ;
ಅವರು ಇಸ್ರಯೇಲಿನ ವಿರುದ್ಧ ವಾದಿಸುವುದನ್ನು ಗಮನಿಸಿರಿ. ಸರ್ವೇಶ್ವರ ಇಂತೆನ್ನುತ್ತಾರೆ; ‘ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆ? ಯಾವ ವಿಷಯದಲ್ಲಿ ನಿನಗೆ
ಬೇಸರವನ್ನುಂಟುಮಾಡಿದೆ ಪ್ರಮಾಣವಾಗಿ ಹೇಳು. ಈಜಿಪ್ಟ್ ದೇಶದಿಂದ ನಾನು
ನಿನ್ನನ್ನು ಕರೆತಂದೆ; ದಾಸತ್ವದ ಬಂಧನದಿಂದ ನಿನ್ನನ್ನು ಬಿಡುಗಡೆ
ಮಾಡಿದೆ. ನಿನಗೆ ಮೋಶೆ, ಆರೋನ್ ಮತ್ತು ಮಿರ‍್ಯಾಮಳನ್ನು
ನಾಯಕರನ್ನಾಗಿ ಕಳುಹಿಸಿದೆ,’’ ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ
ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡು ಹೋಗಲೇ? ಸಾವಿರಾರು
ಟಗರುಗಳನ್ನೂ ಧಾರಾಕಾರವಾಗಿ ಹರಿಯುವ ತೈಲ ಪ್ರವಾಹಗಳನ್ನೂ ನೋಡಿ ಸರ್ವೇಶ್ವರ ಮೆಚ್ಚುವುದುಂಟೇ?
ನಾನು ಮಾಡಿದ ದ್ರೋಹಕ್ಕಾಗಿ ನನ್ನ ಚೊಚ್ಚಲುಮಗನನ್ನೇ ಅರ್ಪಿಸಲೇ? ನನ್ನ ಪಾಪಕ್ಕಾಗಿ ನನ್ನ ಕರುಳ ಕುಡಿಯನ್ನೇ ಬಲಿಕೊಡಲೇ? ಇಲ್ಲ
ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ
ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು.
ಕೀರ್ತನೆ 50 : 5-9, 16-17, 21,23
ಶ್ಲೋಕ : ಸನ್ಮಾರ್ಗಿಗೆ ತೋರುವೆ ಪರಮ ಜೀವೋದ್ಧಾರವನು |
ಸಂತ ಮತ್ತಾಯನು
ಬರೆದ ಶುಭಸಂದೇಶದಿಂದ ವಾಚನ 12: 38-42
ಕೆಲವು ಮಂದಿ
ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, “ಬೋಧಕರೇ, ನೀವು ಒಂದು ಸೂಚಕ ಕಾರ್ಯ ಮಾಡುವುದನ್ನು
ನೋಡಬೇಕೆಂದಿದ್ದೇವೆ,’’ ಎಂದರು. ಅದಕ್ಕೆ ಪ್ರತ್ಯತ್ತರವಾಗಿ ಯೇಸು ಇಂತೆಂದರು : “ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ
ಸೂಚಕ ಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ
ಸಂಕೇತವೂ ಇದಕ್ಕೆ ದೊರಕದು. ಯೋನನು ಮೂರು ದಿನ ಹಗಲು ರಾತ್ರಿ ದೊಡ್ಡ
ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರು ದಿನ ಹಗಲು ರಾತ್ರಿ
ಭೂಗರ್ಭದಲ್ಲಿರುವನು. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ
ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ,
ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು
ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು
ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ
ಮೇಲಾದವನು ಇಗೋ, ಇಲ್ಲಿದ್ದಾನೆ.
No comments:
Post a Comment