22.08.2018

ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಬುಧವಾರ

ಮೊದಲನೇ ವಾಚನ: ಯೆಜೆಕಿಯೇಲ: 34:1-11 (ಯೆಶಾಯ: 9: 1-6)

ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು. "ನರಪುತ್ರನೇ, ಇಸ್ರಯೇಲೆಂಬ ಮಂದೆಯ ಕುರುಬರಿಗೆ ವಿರುದ್ದ ಈ ದೈವೋಕ್ತಿಯನ್ನು ಪ್ರವಚನ ರೂಪವಾಗಿ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಯ್ಯೋ ಸ್ವಂತ ಹೊಟ್ಟೆ ಹೊರೆದುಕೊಳ್ಳುವ ಇಸ್ರಯೇಲಿನ ಕುರುಬರಿಗೆ ಧಿಕಾರ! ಕುರಿಗಳ ಹೊಟ್ಟೆ ಗಮನಿಸುವುದು ಕುರುಬರ ಧರ್ಮವಲ್ಲವೆ? ನೀವು ಅವುಗಳ ಹಾಲನ್ನು ಕುಡಿಯುತ್ತೀರಿ, ಉಣ್ಣೆಯ ಹೊದಿಕೆಯನ್ನು ಹೊದಿಯುತ್ತೀರಿ; ಕೊಬ್ಬಿದ ಕುರಿಗಳನ್ನು ಕಡಿಯುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ. ಹೌದು, ದುರ್ಬಲವಾದವುಗಳನ್ನು ನೀವು ಬಲಗೊಳಿಸಲಿಲ್ಲ. ರೋಗದವುಗಳನ್ನು ಸ್ವಸ್ಥ ಮಾಡಲಿಲ್ಲ, ಮುರಿದ ಅಂಗಗಳನ್ನು ಕಟ್ಟಲಿಲ್ಲ, ದಾರಿತಪ್ಪಿದವುಗಳನ್ನು ಮಂದೆಗೆ ಸೇರಿಸಲಿಲ್ಲ, ತಪ್ಪಿಸಿಕೊಂಡವುಗಳನ್ನು ಹುಡುಕಲಿಲ್ಲ; ಅವುಗಳನ್ನು ಹಿಂಸೆ, ಬಲತ್ಕಾರಗಳಿಂದ ಆಳುತ್ತಾ ಬಂದಿದ್ದೀರಿ. ಕುರಿಗಾಹಿಗಳು ಇರಲಿಲ್ಲವಾದುದರಿಂದ ಅವು ಚದುರಿಹೋದವು; ದಿಕ್ಕಾಪಾಲಾಗಿ ಕಾಡಿನ ಸಕಲ ಮೃಗಗಳಿಗೆ ತುತ್ತಾದವು; ನನ್ನ ಕುರಿಗಳು ಮಲೆನಾಡಿನಲ್ಲೆಲ್ಲಾ ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೆ ಅಲೆದಾಡಿದವು; ಹೌದು, ನನ್ನ ಕುರಿಗಳು ಭೂಮಂಡಲದಲ್ಲೆಲ್ಲಾ ಚದರಿಹೋದವು; ಯಾರೂ ಅವುಗಳ ಹಿಂದೆ ಹೋಗಿ ಹುಡುಕಲಿಲ್ಲ. "ಕುರುಬರೇ, ಸರ್ವೇಶ್ವರನ ಮಾತನ್ನು ಕೇಳಿರಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು; ಕುರುಬರೇ ಇರಲಿಲ್ಲ. ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ; ಅವರು ಸ್ವಂತ ಹೊಟ್ಟೆಪಾಡನ್ನು ನೋಡಿಕೊಂಡರೇ ಹೊರತು, ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ. ಆದ ಕಾರಣ ಕುರುಬರೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಕಟಾ! ನನ್ನ ಜೀವದಾಣೆ, ನಾನು ಆ ಕುರಿಗಾಹಿಗಳಿಗೆ ವಿರುದ್ದನಾಗಿದ್ದೇನೆ; ಅವರು ನನ್ನ ಕುರಿಗಳ ಲೆಕ್ಕವನ್ನು ನನಗೆ ಒಪ್ಪಿಸಬೇಕು; ನನ್ನ ಕುರಿ ಮೇಯಿಸುವ ಕೆಲಸದಿಂದ ಅವರನ್ನು ತೆಗೆದುಬಿಡುವೆನು; ಆ ಕುರುಬರು ಇನ್ನು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳರು; ನನ್ನ ಕುರಿಗಳು ಆಹಾರವಾಗಿ ಅವರ ಬಾಯಿಗೆ ಬೀಳದಂತೆ ಅವುಗಳನ್ನು ರಕ್ಷಿಸುವೆನು. "ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು."

ಕೀರ್ತನೆ: 23:1-3ಎ, 3ಬಿ-4, 5, 65
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?

ಶುಭಸಂದೇಶ: ಮತ್ತಾಯ: 20: 1-16 (ಲೂಕ 1:26-38)

"ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿ ತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. ಆಳಿಗೆ ಒಂದು ಬೊಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. ಸುಮಾರು ಬೆಳಿಗ್ಗೆ ಒಂಭತ್ತು ಗಂಟಗೆ ಅವನು ಪುನಃ ಸಂತೆ ಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತು ಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. ’ನೀವು ನನ್ನ ದ್ರಾಕ್ಷಿ ತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ.’ ಎಂದ. ಅವರು ಹೋದರು. ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. ಐದು ಗಂಟೆಗೆ ಹೋದಾಗಳು ಬೇರೆ ಕೆಲಸದವರು ಅಲ್ಲಿ ನಿಂತಿರುವುದನ್ನು ಕಂಡು, ’ದಿನವಿಡೀ ಕೆಲಸ ಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲ, ಏಕೆ?’ ಎಂದು ಕೇಳಿದ. ಅದಕ್ಕೆ ಅವರು, ’ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ’ಹಾಗದರೆ ನೀವು ಕೂಡ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ’ ಎಂದು ಹೇಳಿ ಅವರನ್ನೂ ಕಳುಹಿಸಿದ. "ಸಂಜೆಯಾಯಿತು. ತೋಟದ ಯಜಮಾನ ತನ್ನ ಮೇಸ್ತ್ರಿಗೆ, ’ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಬಿಸಿ ಮೊದಲು ಬಂದವರ ತನಕ ಕೂಲಿ ಕೊಡು,’ ಎಂದ. ಅದರಂತೆ ಐದು ಗಂಟೆಗೆ ಗೊತ್ತು ಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. ಮೊತ್ತಮೊದಲು ಗೊತ್ತು ಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿ ನಾಣ್ಯ ದೊರಕಿತು. ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ದ ಗೊಣಗಲಾರಂಬಿಸಿದರು. ’ಕಡೇ ಒತ್ತಿನಲ್ಲಿ ಬಂದ ಇವರು ಒಂದೇಒಂದು ಗಂಟೆ ಕೆಲಸ ಮಾಡಿದ್ದಾರೆ; ಬಿಸಿಲಲ್ಲಿ ಬೆಂದು ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮ ಮಾಡಿದ್ಧಿರಲ್ಲಾ!’ ಎಂದರು. ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ’ಅಯ್ಯಾ, ನಿನಗೆ ನಾನು ಅನ್ಯಾಯ ಮಾಡಿಲ್ಲ. ದಿನಕ್ಕೊಂದು ಬೆಳ್ಳಿ ನಾಣ್ಯದಂತೆ ನೀನು ನನ್ನೊಡನೆ ಒಪ್ಪಂದ ಮಾಡಿಕೊಳ್ಳಲಿಲ್ಲವೇ? ನಿನ್ನ ಕೂಲಿಯೇನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕದೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನದ್ದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೇ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ. ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು," ಎಂದು ಯೇಸು ಬೋಧಿಸಿದರು.

21.08.2018

ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಮಂಗಳವಾರ

ಮೊದಲನೇ ವಾಚನ: ಯೆಜೆಕಿಯೇಲ: 28:1-10


ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು - "ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ’ಆಹಾ, ನಾನೇ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಅಲಂಕರಿಸಿದ್ದೇನೆ’, ಎಂದುಕೊಂಡೆ. ನಿನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ. ನೀನು ದಾನಿಯೇಲನಿಗಿಂತಲೂ ಬುದ್ದಿವಂತನೋ? ಹಾಗಾದರೆ ನಿನಗೆ ಮರೆಯಾದ ರಹಸ್ಯ ಯಾವುದೂ ಇಲ್ಲ! ನಿನ್ನ ಜ್ನಾನ ವಿವೇಕಿಗಳಿಂದ ಐಶ್ವರ್ಯವನ್ನುಗಳಿಸಿ, ನಿನ್ನ ಬೊಕ್ಕಸಗಳಲ್ಲಿ ಬೆಳ್ಳಿ ಬಂಗಾರವನ್ನು ತುಂಬಿಸಿಕೊಂಡಿರುವೆ. ನಿನ್ನ ಅಧಿಕ ಜ್ನಾನದಿಂದ ಹಾಗು ವ್ಯಾಪಾರದಿಂದ ಸಿರಿಸಂಪತ್ತನ್ನು ವೃದ್ದಿಮಾಡಿಕೊಂಡಿರುವೆ. ಆದುದರಿಂದ ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿ ಹೋಗಿದೆ. ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ನಿನ್ನನ್ನೇ ದೇವರಿಗೆ ಸಮನಾಗಿಸಿಕೊಂಡಿರುವೆ. ಆದುದರಿಂದ ನಾನು ಅತೀ ಭಯಂಕರ ಜನಾಂಗದವರಾದ ಮ್ಲೇಚ್ಚರನ್ನು ನಿನ್ನ ಮೇಲೆ ಬೀಳಮಾಡುವೆನು; ಅವರು ನಿನ್ನ ಜ್ನಾನದ ಸೊಬಗಿನ ಮೇಲೆ ಕತ್ತಿ ಹಿರಿದು, ನಿನ್ನ ಹೊಳಪನ್ನು ಹೊಲಸು ಮಾಡುವರು. ನಿನ್ನನ್ನು ಪಾತಾಳಕ್ಕೆ ತಳ್ಳಿ ಬಿಡುವರು. ಸಮುದ್ರ ಮಧ್ಯೆ ಹತರಾದವರ ಗತಿ ನಿನಗೆ ಸಂಭವಿಸುವುದು. ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ’ನಾನು ದೇವರು’ ಎಂದು ಹೇಳಬಲ್ಲೆಯ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ. ನರಪ್ರಾಣಿಯೇ! ನೀನು ಅನ್ಯರ ಕೈಯಿಂದ ಸುನ್ನತಿ ಹೀನರ ಮರಣಕ್ಕೆ ಗುರಿಯಾಗುವೆ; ನಾನೇ ನುಡಿದಿದ್ದೇನೆ, ಇದು ಸರ್ವೇಶ್ವರನಾದ ದೇವರ ಸಂಕಲ್ಪ".


ಧ. ಕಾ.: 32: 26-27ಎಬಿ, 27ಸಿಡಿ - 28, 30, 35ಸಿಡಿ - 36ಎಬಿ
ಶ್ಲೋಕ: ಬದುಕಿಸುವವನು, ಕೊಲ್ಲುವವನು ನಾನೇ.

ಶುಭಸಂದೇಶ: ಮತ್ತಾಯ: 19: 23-30


ಆಗ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಐಶ್ವರ್ಯವಂತನು ಸ್ವರ್ಗ ಸಾಮ್ರಾಜ್ಯವನ್ನು ಪ್ರವೇಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ" ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು. "ಹಾಗಾದರೆ ಯಾರು ತಾನೇ ಜೀವೋದ್ದಾರ ಹೊಂದಲು ಸಾದ್ಯ?" ಎಂದುಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡುತ್ತಾ, "ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ," ಎಂದರು. ಪೇತ್ರನು ಹಾಗ ಮುಂದೆ ಬಂದು, "ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?" ಎಂದು ಕೇಳಿದನು. ಅದಕ್ಕೆ ಯೇಸು, "ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಂದೆತಾಯಿಯರನ್ನಾಗಲಿ, ಮಕ್ಕಳು ಮರಿಗಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರ ಜೀವಕ್ಕೆ ಬಾಧ್ಯಸ್ತನಾಗುವನು. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.

20.08.2018

ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಸೋಮವಾರ


ಮೊದಲನೇ ವಾಚನ: ಯೆಜೆಕಿಯೇಲ: 24: 15-23


ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು - "ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದು ಬಿಡುವೆನು. ಆದರೂ ನೀನು ಗೋಳಾಡಬೇಡ, ಅಳಬೇಡ, ಕಣ್ಣೀರು ಸುರಿಸ ಬೇಡ. ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖ ತೋರಿಸಬೇಡ. ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ." ಹೀಗೆ ಆಜ್ಞೆಯಾಗಲು ನಾನು ಪ್ರಾರ್ತ: ಕಾಲದಲ್ಲಿ ಜನರಿಗೆ ಪ್ರವಾದಿಸಿದೆನು; ಸಾಯಂಕಾಲಕ್ಕೆ ನನ್ನ ಪತ್ನಿ ತೀರಿಹೋದಳು; ಮಾರನೆಯ ಬೆಳಿಗ್ಗೆ ನನಗೆ ಅಪ್ಪಣೆಯಾದಂತೆ ನಡೆದುಕೊಂಡೆನು. ಜನರು, "ನೀನು ಹೀಗೆ ಮಾಡುವುದರಿಂದ ನಾವು ತಿಳಿಯತಕ್ಕದೇನು? ತಿಳಿಸುವುದಿಲ್ಲವೋ?" ಎಂದು ನನ್ನನ್ನು ಕೇಳಿದರು. ಅದಕ್ಕೆ ನಾನು ಹೀಗೆ ಹೇಳಿದೆ: "ಸರ್ವೇಶ್ವರ ಈ ವಾಣಿಯನ್ನು ದಯಪಾಲಿಸಿದ್ದಾರೆ - ಇಸ್ರಯೇಲ್ ವಂಶದವರಿಗೆ ಹೀಗೆ ಸಾರು - ಹಾ, ನಿಮಗೆ ಮುಖ್ಯಬಲ, ನೇತ್ರಾನಂದ ಹಾಗೂ ಪ್ರಾಣಪ್ರಿಯ ಆದ ನನ್ನ ಪವಿತ್ರಾಲಯವನ್ನು ನಾನು ಅಪವಿತ್ರ ಮಾಡಿಸುವೆನು; ನೀವು ಬಿಟ್ಟು ಬಂದಿರುವ ನಿಮ್ಮ ಗಂಡು ಹೆಣ್ಣು ಮಕ್ಕಳು ಖಡ್ಗಕ್ಕೆ ತುತ್ತಾಗುವರು, ಎಂಬುದಾಗಿ ಸರ್ವೇಶ್ವರನಾದ ದೇವರು ನುಡಿದಿದ್ದಾರೆ. ನಾನು ಮಾಡಿದಂತೆ ಆಗ ನೀವು ಮಾಡುವಿರಿ, ಅಂದರೆ ಬಟ್ಟೆಯಿಂದ ಬಾಯಿಯನ್ನು ಮುಚ್ಚಿಕೊಳ್ಳದೆ, ಗಾರಿಗೆಯನ್ನು ತಿನ್ನದೆ, ರುಮಾಲನ್ನು ಸುತ್ತಿಕೊಂಡು, ಕೆರಗಳನ್ನು ಮೆಟ್ಟಿಕೊಂಡು ಇರುವಿರಿ; ನೀವು ಗೋಳಾಡುವುದಿಲ್ಲ, ಅಳುವುದಿಲ್ಲ. ಆದರೆ ನಿಮ್ಮ ಅಧರ್ಮದಿಂದ ಕ್ಷೀಣವಾಗಿ ನರಳುವಿರಿ. ಒಬ್ಬರೆದುರಿಗೆ ಒಬ್ಬರು ನರಳುವಿರಿ".
ದೇವರ ವಾಕ್ಯವಿದು

ಧ. ಕಾ.: 32: 18-21
ಶ್ಲೋಕ: ಸ್ಮರಿಸಲಿಲ್ಲ ನೀವು, ಹೆತ್ತ ತಾಯಂತಿದ್ದಾ ದೇವರನು.


ಶುಭಸಂದೇಶ: ಮತ್ತಾಯ: 19: 16-22


ಒಮ್ಮೆ ಯೇಸುಸ್ವಾಮಿಯ ಬಳಿಗೆ ಒಬ್ಬ ಯುವಕನು ಬಂದು, "ಗುರುದೇವಾ, ಅಮರ ಜೀವವನ್ನು ಪಡೆಯಲು ನಾನು ಒಳ್ಳೆಯದೇನನ್ನು ಮಾಡಬೇಕು?" ಎಂದು ಕೇಳಿದನು. ಅದಕ್ಕೆ ಅವರು, "ಒಳ್ಳೆಯದನ್ನು ಕುರಿತು ನೀನು ನನ್ನನ್ನು ವಿಚಾರಿಸುವುದೇಕೆ? ಒಳ್ಳೆಯವರು ಒಬ್ಬರೇ. ನೀನು ಆ ಜೀವಕ್ಕೆ ಪ್ರವೇಶಿಸ ಬೇಕಾದರೆ ದೈವಾಜ್ಞೆಗಳನ್ನು ಅನುಸರಿಸು," ಎಂದರು. "ಅವು ಯಾವುವು?" ಎಂದು ಮರು ಪ್ರಶ್ನೆ ಹಾಕಿದ. ಅವನಿಗೆ ಯೇಸು, "ನರ ಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು, ನಿನ್ನ ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನ್ನನ್ನೂ ಪ್ರೀತಿಸಬೇಕು," ಎಂದರು. ಅದಕ್ಕೆ ಆ ಯುವಕ, "ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಇನ್ನೇನು ಕೊರತೆಯಿದೆ?" ಎಂದು ಮತ್ತೆ ಕೇಳಿದ. ಆಗ ಯೇಸು, "ನೀನು ಸಂಪೂರ್ಣನಾಗಬೇಕು ಎಂದಿದ್ದರೆ ಹೋಗು, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದರು. ಇದನ್ನು ಕೇಳಿದ್ದೇ ಆ ಯುವಕ ಖಿನ್ನ ಮನಸ್ಕನಾಗಿ ಅಲ್ಲಿಂದ ಹೊರಟೇ ಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು.
ಪ್ರಭುಕ್ರಿಸ್ತರ ಶುಭಸಂದೇಶವಿದು

19.08.2018 - ಸಾಧಾರಣ ಕಾಲದ 20ನೇ ಭಾನುವಾರ


ಸಾಧಾರಣ ಕಾಲದ 20ನೇ ಭಾನುವಾರ

ಮೊದಲನೆಯ ವಾಚನ
ಸ್ವತಃ ದೇವರೇ ಜ್ಞಾನವಾಗಿ ತಮ್ಮ ಭೋಜನಕ್ಕೆ ಆಹ್ವಾನಿಸುವಾಗ ದೀನರು ಮಾತ್ರ ಪ್ರತಿಕ್ರಿಯಿಸಿದ್ದಾರೆ.  ಜ್ಞಾನವನ್ನು ಸವಿಯಲೊಲ್ಲದ ಮೂಢರು ದೇವರ ಆಮಂತ್ರಣವನ್ನು ತಿರಸ್ಕರಿಸುತ್ತಿದ್ದಾರೆ. ವಿವೇಕ ಮಾರ್ಗವನ್ನು ತ್ಯಜಿಸುತ್ತಿದ್ದಾರೆ, ಎನ್ನುತ್ತದೆ ಈ ವಾಚನ.

ಜ್ಞಾನೋಕ್ತಿಗಳ ಗ್ರಂಥದಿಂದ ವಾಚನ   9: 1-6

ಜ್ಞಾನವೆಂಬಾಕೆ ಮನೆಯನ್ನುಕಟ್ಟಿಕೊಂಡಿದ್ದಾಳೆ; ಅದಕ್ಕೆ ಏಳು ಸ್ತಂಭಗಳನ್ನು ಕೆತ್ತಿಸಿದ್ದಾಳೆ. ಪಶುಗಳನ್ನು ಕೊಯ್ಯಿಸಿ ದ್ರಾಕ್ಷಾರಸವನ್ನು ಬೆರೆಸಿ ಔತಣವನ್ನು ಆಕೆ ಸಿದ್ಧ ಪಡಿಸುತ್ತಿದ್ದಾಳೆ. ನಗರದ ರಾಜಬೀದಿಗಳಿಗೆ ತನ್ನ ದಾಸಿಯರನ್ನು ಕಳುಹಿಸುತ್ತಾಳೆ. “ಮುಗ್ಧ ಮನಸ್ಕರು ಯಾರಾದರೂ ಇದ್ದರೆ ಇತ್ತ ಬರಲಿ,” ಎಂದು ಪ್ರಕಟಿಸುತ್ತಾಳೆ. “ಬನ್ನಿ, ನಾ ಬಡಿಸುವ ಆಹಾರವನ್ನು ಉಣಬನ್ನಿ; ನಾ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಬನ್ನಿ. ಮೂಢರೇ, ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕ ಮಾರ್ಗದಲ್ಲಿ ನೆಟ್ಟಗೆ ನಡೆಯಿರಿ,” ಎಂದು ಪ್ರಬೋಧಿಸುತ್ತಾಳೆ.
- ಪ್ರಭುವಿನ ವಾಕ್ಯ

ಎರಡನೆಯ ವಾಚನ
ನಡತೆಯ ವಿಷಯದಲ್ಲಿ ಜಾಗರೂಕತೆ, ಮೂಢತೆಯಲ್ಲಿ ಜಾಣ್ಮೆ, ಬುದ್ದಿಹೀನತೆಯಲ್ಲಿ ಪ್ರಭುವಿನ ಚಿತ್ತ ಗ್ರಹಿಕೆ ಈ ವಾಚನದ ಅಂಶಗಳು. ಇವುಗಳೊಂದಿಗೆ  ದೇವರ ಸಂಕೀರ್ತನೆ ಹಾಗು ಅವರ ಸ್ತುತಿ ಮಾಡಿದರೆ ನಮಗರಿವಿಲ್ಲದೆಯೇ ಭಕ್ತಿಯ ಉತ್ತುಂಗಕ್ಕೆ ಏರಿಸುತ್ತದೆ.

ಸಂತ ಪೌಲ ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ       5: 15-21

ಸಹೋದರರೇ, ನಿಮ್ಮ ನಡತೆಯ ವಿಷಯದಲ್ಲಿ ನೀವು ಅತ್ಯಂತ ಜಾಗರೂಕರಾಗಿರಿ; ಮೂಢರಂತಿರದೆ ಜಾಣರಾಗಿ ಜೀವಿಸಿರಿ. ಈ ದಿನಗಳು ಕೆಟ್ಟ ದಿನಗಳಾಗಿರುವುದರಿಂದ, ನಿಮಗಿರುವ ಸದವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಿರಿ. ಬುದ್ಧಿಹೀನರಾಗಿರದೆ ಪ್ರಭುವಿನ ಚಿತ್ತವೇನೆಂದು ಗ್ರಹಿಸಿಕೊಳ್ಳಿರಿ. ಮದ್ಯಪಾನಮಾಡಿ ಮತ್ತರಾಗಬೇಡಿ. ಅದು ಪಾಪಕೃತ್ಯಗಳಿಗೆ ಎಡೆಮಾಡುತ್ತದೆ. ಬದಲಿಗೆ ಪವಿತ್ರಾತ್ಮ ಭರಿತರಾಗಿರಿ. ಕೀರ್ತನೆ, ಹಾಡು, ಭಕ್ತಿಗೀತೆ ಇವುಗಳಿಂದ ನಿಮ್ಮ ಭಾವಗಳನ್ನು ಪರಸ್ಪರ ವ್ಯಕ್ತಪಡಿಸಿರಿ.
ಹೃದಯಾಂತರಾಳದಿಂದ ಹಾಡಿ ಪ್ರಭುವಿಗೆ ಸ್ತುತಿ ಸಲ್ಲಿಸಿರಿ. ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ಯಾವಾಗಲೂ ಎಲ್ಲ ವರಗಳಿಗಾಗಿಯೂ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ಕ್ರಿಸ್ತ ಯೇಸುವಿನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಿರಿ.
- ಪ್ರಭುವಿನ ವಾಕ್ಯ


ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ! ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ; ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಅಲ್ಲೆಲಯ!

ಶುಭಸಂದೇಶ

ಸಂತ ಯೊವಾನ್ನರು ಬರೆದ ಶುಭಸಂದೇಶದಿಂದ ವಾಚನ       6: 51-58

ಯೇಸುಸ್ವಾಮಿ ಜನಸಮೂಹಕ್ಕೆ ಹೀಗೆಂದರು: “ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ.” ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?” ಎಂದು ಕೇಳತೊಡಗಿದರು. ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯ ಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ. ಜೀವಸ್ವರೂಪಿಯಾದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,” ಎಂದು ಹೇಳಿದರು.

- ಪ್ರಭುಕ್ರಿಸ್ತರ ಶುಭಸಂದೇಶ

18.08.2018

ಸಾಧಾರಣ ಕಾಲದ ಹತ್ತೊಂಭತ್ತನೆಯ ವಾರ - ಶನಿವಾರ


ಮೊದಲನೇ ವಾಚನ: ಯೆಜೆಕಿಯೇಲ: 18: 1-10, 13, 30-32


ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ: "ಹೆತ್ತವರು ತಿಂದರು ಹುಳಿ ದ್ರಾಕ್ಷಿಯನ್ನು; ಚಳಿತು ಹೋದವು ಅವರ ಮಕ್ಕಳ ಹಲ್ಲುಗಳು" ಎಂಬ ಗಾದೆಯನ್ನು ನೀವು ಇಸ್ರಯೇಲ್ ನಾಡನ್ನು ಕುರಿತು ಹೇಳುವುದೇಕೆ? ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಯೇಲಿನಲ್ಲಿ ಇನ್ನು ಎತ್ತ ಬೇಕಾಗುವುದಿಲ್ಲ. ಇಗೋ, ಸಕಲ ನರ ಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ; ಪಾಪ ಮಾಡುವ ಪ್ರಾಣಿಯೇ ಸಾಯುವನು. ಒಬ್ಬನು ಸದ್ಧರ್ಮಿಯಾಗಿಯಾಗಿ ನ್ಯಾಯ ನೀತಿಗಳನ್ನು ನಡೆಸಿ, ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಿನ ಹೆಂಗಸನ್ನು ಕೂಡದೆ, ಯಾರನ್ನೂ ಹಿಂಸಿಸದೆ, ಸಾಲ ಮಾಡಿದವನ ಒತ್ತೆಯನ್ನು ಬಿಗಿಯಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆ ಇರುವವನಿಗೆ ಹೊದಿಕೆಯನ್ನು ಹೊದಿಸಿ; ಸಾಲಕ್ಕೆ ಬಡ್ಡಿ ತೆಗೆಯದೆ, ಲಾಭಕ್ಕೆ ಹಣ ಕೊಡದೆ, ಅನ್ಯಾಯಕ್ಕೆ ಕೈ ಹಾಕದೆ, ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯ ತೀರಿಸಿ, ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು, ಸತ್ಯ ಪರನಾಗಿಯೇ ನಡೆದರೆ, ಇಂಥವನು ಸದ್ದರ್ಮಿ. ಆದುದರಿಂದ ಅವನು ಜೀವಿಸುವುದು ನಿಶ್ಚಯ. ಇದು ಸರ್ವೇಶ್ವರನಾದ ದೇವರ ನುಡಿ: ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ, ಅಸಹ್ಯ ಕಾರ್ಯವನ್ನು ಮಾಡಿ, ಸಾಲಕ್ಕೆ ಬಡ್ಡಿ ತೆಗೆದು, ಲಾಭಕ್ಕೆ ಹಣ ಕೊಟ್ಟು, ಹಿಂಸಾಚಾರಿಯೂ, ರಕ್ತ ಸುರಿಸುವವನೂ ಆಗಿದ್ದರೆ, ಜೀವಿಸುವನೇ? ಖಂಡಿತ ಜೀವಿಸನು; ಈ ದುರಾಚಾರಗಳನ್ನೆಲ್ಲಾ ನಡೆಸಿದನ್ನಲ್ಲವೇ? ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ. ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಸ್ರಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪು ನೀಡುವೆನು; ಅಧರ್ಮವು ನಿಮ್ಮನ್ನು ನಾಶ ಮಾಡದಂತೆ ಪಾಪಕ್ಕೆ ವಿಮುಖರಾಗಿರಿ; ನಿಮ್ಮ ಅಪರಾಧಗಳನ್ನೆಲ್ಲಾ ತೊರೆದುಬಿಡಿ. ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿ ಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿ: ಇಸ್ರಯೇಲ್ ವಂಶದವರೇ ನೀವು ಏಕೆ ಸಾಯಬೇಕು? ಯಾರ ಸಾವಿನಲ್ಲೂ ನನಗೆ ಸಂತೋಷವಿಲ್ಲ; ಪಾಪಕ್ಕೆ ವಿಮುಖರಾಗಿ ಜೀವಿಸಿರಿ; ಇದು ಸರ್ವೇಶ್ವರನಾದ ದೇವರ ನುಡಿ".

ಕೀರ್ತನೆ: 51: 12-13, 14-15, 18-19
ಶ್ಲೋಕ: ವಿಧೇಯನಾಗಿ ನಡೆವ ಸಿದ್ದ ಮನಸ್ಸನು ನೀಡು ಪ್ರಭು.


ಶುಭಸಂದೇಶ: ಮತ್ತಾಯ: 19:13-15



ಅನಂತರ ಕೆಲವರು ಚಿಕ್ಕ ಮಕ್ಕಳನ್ನು ಯೇಸುಸ್ವಾಮಿಯ ಬಳಿಗೆ ತಂದರು. ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಬೇಕೆಂದು ಕೇಳಿಕೊಂಡರು. ಶಿಷ್ಯರು ಅವರನ್ನು ಗದರಿಸಿದರು. ಆಗ ಯೇಸು, "ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ. ಸ್ವರ್ಗಸಾಮ್ರಾಜ್ಯ ಇಂಥವರದೇ," ಎಂದರು. ತರುವಾಯ ಆ ಮಕ್ಕಳ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಬಳಿಕ ಅಲ್ಲಿಂದ ಹೊರಟು ಹೋದರು. 


17.08.2018

ಸಾಧಾರಣ ಕಾಲದ ಹತ್ತೊಂಭತ್ತೆನೆಯ ವಾರ - ಶುಕ್ರವಾರ



ಮೊದಲನೇ ವಾಚನ: ಯೆಜೆಕಿಯೇಲ: 16:1-15, 60,63 (ಯೆಜೆಕಿಯೇಲ: 16: 59-63)

ಆಮೇಲೆ ಸರ್ವೇಶ್ವರ ನನಗೆ ದಯಪಾಲಿದ ವಾಣಿ - "ನರಪುತ್ರನೇ, ನೀನು ಜೆರುಸಲೇಮಿಗೆ ಅದರ ಅಸಹ್ಯ ಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ - ಸರ್ವೇಶ್ವರ ದೇವರು ಜೆರುಸಲೇಮೆಂಬಾಕೆಗೆ ಈ ಮಾತನ್ನು ಹೇಳಿ ಕಳುಹಿಸಿದ್ದಾರೆ. "ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ ಅದೇ ನಿನ್ನ ಜನ್ಮ ಭೂಮಿ. ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು. ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಂದು ಯಾರೂ ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ. ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ. ನಿನಗೆ ಉಪ್ಪನ್ನು ಸ್ವಲ್ಪವೂ ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲಿ ಸುತ್ತಲೇ ಇಲ್ಲ. ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿವಸದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿ ಬಿಟ್ಟರು. "ನಾನು ಹಾದು ಹೋಗುತ್ತಾ, ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ, ’ನೀನು ರಕ್ತದಿಂದ ಅಶುದ್ದವಾಗಿದ್ದರೂ ಬದುಕು’ ಎಂದು ಹೇಳಿದೆ; ಹೌದು, ’ನೀನು ರಕ್ತದಿಂದ ಅಶುದ್ದವಾಗಿದ್ದರೂ ಬದುಕು’ ಎಂದು ಹೇಳಿ ಬದುಕಿಸಿದೆ. ಭೂಮಿಯಲ್ಲಿ ಮೊಳಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಿದೆ; ನೀನು ಬಲಿತು ಪ್ರಾಯ ತುಂಬಿ ಅತೀ ಸುಂದರಿಯಾದೆ; ನಿನಗೆ ಸ್ತನಗಳು ಮೂಡಿದವು. ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದೆ. "ನಾನು ಪುನಃ ಹಾದು ಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ದಳಾಗಿದ್ದೆ; ಆಗ ನಾನು ನನ್ನ ಹೊದಿಕೆಯ ಸೆರಗನ್ನು ನಿನಗೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ. ಇದಲ್ಲದೆ ನಾನು ನಿನಗೆ ಮಾತು ಕೊಟ್ಟು ಒಡಂಬಡಿಕೆ ಮಾಡಿಕೊಂಡೆ. ಆದ್ದರಿಂದ ನೀನು ನನ್ನವಳಾದೆ. ಇದು ಸರ್ವೇಶ್ವರನಾದ ದೇವರ ನುಡಿ. "ಆಗ ನಾನು ನೀರಿನಲ್ಲಿ ಸ್ನಾನ ಮಾಡಿಸಿ, ನಿನ್ನ ಮೇಲಿನ ರಕ್ತವನ್ನು ತೊಳೆದು ಬಿಟ್ಟು, ನಿನಗೆ ತೈಲವನ್ನು ಹಚ್ಚಿದೆ. ಇದಲ್ಲದೆ ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲು ಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರು ಮಡಿಯನ್ನು ನಿನಗೆ ಹುಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆ ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು, ಕೊರಳಿಗೆ ಮಾಲೆಯನ್ನು, ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆ. ನಿನ್ನ ಒಡವೆಗಳು ಬೆಳ್ಳಿ ಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ವಸ್ತ್ರ; ನಿನ್ನ ಆಹಾರವು ಗೋದಿಯಿಟ್ಟು, ಜೇನು ತುಪ್ಪು ಮತ್ತು ಎಣ್ಣೆ; ನಿನ್ನ ಲಾವಣ್ಯವು ಅತೀ ಮನೋಹರ; ನೀನು ಹೀಗೆ ವೃದ್ಧಿಗೊಂಡು ರಾಣಿಯಾದೆ. ನಾನು ನಿನಗೆ ಅನುಗ್ರಹಿಸಿದ ನನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ದವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ. "ಆದರೆ ನೀನು ನಿನ್ನ ಸೌಂದರ್ಯವನ್ನೇ ನೆಚ್ಚಿಕೊಂಡೆ, ’ನಾನು ಪ್ರಸಿದ್ದಳಾದೆ’ ಎಂದು ಉಬ್ಬಿಕೊಂಡು ಸೂಳೆತನ ಮಾಡಿದೆ, ಹಾದುಹೋಗುವ ಪ್ರತಿಯೊಬ್ಬನ ಸಂಗಡ ಹಾದರ ಮಾಡಿದೆ. ಒಬ್ಬೊಬ್ಬನಿಗೂ ಒಳಗಾದೆ. ಆದರೂ ನಾನು ನಿನ್ನ ಯೌವನ ಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನಿನ್ನೊಂದಿಗೆ ಶಾಸ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿ ಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆ ಪಟ್ಟು ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ." ಇದು ಸರ್ವೇಶ್ವರನಾದ ದೇವರ ನುಡಿ.

ಯೆಶಾಯ: 12: 2-3, 4ಬಿಸಿಡಿ, 5-6 
ಶ್ಲೋಕ: ನಿನಗಿತ್ತು ಎನ್ನಮೇಲೆ ಕೋಪ ಮನ; ಆದರೆ  ಅದೀಗ ಆಗಿದೆ ಶಮನ

ಶುಭಸಂದೇಶ: ಮತ್ತಾಯ:19: 3-12

ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, "ಯಾವುದಾರು ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟು ಬಿಡುವುದು ಧರ್ಮ ಸಮ್ಮತವೋ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೃಷ್ಠಿ ಕರ್ತ ಆದಿಯಿಂದಲೇ ಅವರನ್ನು ಗಂಡು ಹೆಣ್ಣಾಗಿ ಉಂಟು ಮಾಡಿದರು ಎಂದೂ, ’ಈ ಕಾರಣದಿಂದಲೇ ಗಂಡನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದು ಹೇಳಿದ್ದಾರೆಂಬುದಾಗಿ ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ ಇನ್ನುಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ," ಎಂದರು. "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?" ಎಂದು ಫರಿಸಾಯರು ಮರು ಪ್ರಶ್ನೆ ಹಾಕಿದರು. "ನಿಮ್ಮ ಹೆಂಡತಿಯನ್ನು ಬಿಟ್ಟು ಬಿಡಬಹುದೆಂದು ಮೋಶೆ ಅನುಮತಿಯಿತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ: ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೇ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ." ಶಿಷ್ಯರು ಹಾಗ, "ಸತಿ ಪತಿಯರ ಸಂಬಂಧ ಈ ರೀತಿ ಇರುವುದಾದರೆ, ಮದುವೆ ಮಾಡಿಕೊಳ್ಳದಿರುವುದೇ ಲೇಸು," ಎಂದರು. ಅದಕ್ಕೆ ಯೇಸು, "ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಧ್ಯವಿಲ್ಲ; ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ. ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ. ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ," ಎಂದರು.

16.08.2018

ಸಾಧಾರಣ ಕಾಲದ ಹತ್ತೊಂಭತ್ತೆನೆಯ ವಾರ - ಗುರುವಾರ


ಮೊದಲನೇ ವಾಚನ: ಯೆಜೆಕಿಯೇಲ: 12: 1-12


ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು: "ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯೆ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು. "ನರಪುತ್ರನೇ, ವಲಸೆ ಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೇ ಹೊರಡು. ಅಂದರೆ, ನಿನ್ನ ವಾಸ ಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು: ಅವರು ದ್ರೋಹಿ ವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು. ನೀನು ನಿನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೊ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮ ಹೊರಟು ಹೋಗು. ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು. ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮೋರೆಯನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಮುಂಗುರುತನ್ನಾಗಿ ಮಾಡಿದ್ದೇನೆ." ಆಗ ನಾನು ನನಗಾದ ಅಪ್ಪಣೆಯನ್ನು ನೆರೆವೇರಿಸಿದೆ: ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಮನೆಯೊಳಗಿನಿಂದ ಆಚೆಗೆ ಹಾಕಿದೆ; ಸಾಯಂಕಲ ನನ್ನ ಕೈಯಿಂದಲೇ ಗೋಡೆಯನ್ನು ಕಿಂಡಿ ಮಾಡಿ, ಕತ್ತಲಲ್ಲಿ ಆ ಸಾಮಗ್ರಿಗಳನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆ. ಬೆಳಗ್ಗೆ ಸರ್ವೇಶ್ವರನಿಂದ ಈ ವಾಣಿ ನನಗೆ ಕೇಳಿಸಿತು: "ನರ ಪುತ್ರನೇ ದ್ರೋಹಿ ವಂಶದವರಾದ ಇಸ್ರಯೇಲರು, ’ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೇ? ನೀನು ಅವರಿಗೆ ಹೀಗೆ ನುಡಿ, ’ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಈ ಹೊರೆ ಜರುಸಲೇಮಿನಲ್ಲಿರುವ ರಾಜನಿಗೂ ಅಲ್ಲಿನ ಇಸ್ರಯೇಲ್ ವಂಶದವರೆಲ್ಲರಿಗೂ ಸಂಬಂಧ ಪಟ್ಟಿದೆ; ಇದನ್ನೂ ನುಡಿ, - ’ನಾನು ನಿಮಗೆ ಮುಂಗುರುತ್ತಾಗಿದ್ದೇನೆ. ನಾನು ಮಾಡಿದಂತೆಯೇ ಅವರಿಗಾಗುವುದು: ಅವರು ವಲಸೆಯಾಗಿ ಸೆರೆ ಹೋಗುವರು. ಅವರಲ್ಲಿನ ರಾಜರು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು: ಅವನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ಸಾಮಗ್ರಿಗಳನ್ನು ಆಚೆಗೆ ಸಾಗಿಸುವನು. ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂಮಿಯು ಅವರ ಕಣ್ಣಿಗೆ ಕಾಣಿಸದು".

ಕೀರ್ತನೆ: 78: 56-57, 58-59, 61-62
ಶ್ಲೋಕ: ಮರೆಯರು ನನ್ನ ಮಹತ್ಕಾರ್ಯಗಳನ್ನು


ಶುಭಸಂದೇಶ: ಮತ್ತಾಯ: 18: 21  - 19:1


ಅನ೦ತರ ಪೇತ್ರನು ಯೇಸುನಿನ ಬಳಿಗೆ ಬ೦ದು, "ಸ್ವಾಮೀ, ನನಗೆ ವಿರುದ್ದ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?" ಎ೦ದು ಕೇಳಿದನು. "ಏಳು ಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎ೦ದು ನಾನು ನಿನಗೆ ಒತ್ತಿ ಹೇಳುತ್ತೇನೆ" ಎ೦ದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮು೦ದುವರಿಸುತ್ತಾ, "ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ; ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿ೦ದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರ೦ಭಿಸಿದಾಗ ಹತ್ತು ಸಾವಿರ ’ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿ೦ದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ. ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವ೦ತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊ೦ಡ: ’ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎ೦ದು ಅ೦ಗಲಾಚಿದ. ರಾಜನಿಗೆ ಕನಿಕರ ಉ೦ಟಾಯಿತ. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. 

"ಆದರೆ ಅದೇ ಸೇವಕ ಹೊರಗೆ ಬ೦ದದ್ದೇ ತನಗೆ ಕೇವಲ ನೂರು ’ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊ೦ಡ. ಅವನನ್ನು ಹಿಡಿದು, ’ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎ೦ದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ’ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,; ಎ೦ದು ಕಾಲಿಗೆ ಬಿದ್ದು ಕೇಳಿಕೊ೦ಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕ೦ಡ ಇತರ ಸೇವಕರು ಬಹಳವಾಗಿ ನೊ೦ದುಕೊ೦ಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ’ಎಲೋ ನೀಚ, ನೀನು ಬೇಡಿಕೊ೦ಡಿದ್ದರಿ೦ದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದ೦ತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?" ಎ೦ದು ಸಿಟ್ಟುಗೊ೦ಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ.  "ನಿಮ್ಮಲ್ಲಿ ಪ್ರತಿ ಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತ೦ದೆ ನಿಮಗೆ ಇದರ೦ತೆಯೇ ಮಾಡುವರು," ಎ೦ದರು. ಈ ವಿಷಯಗಳನ್ನು ಹೇಳಿಯಾದ ಮೇಲೆ, ಯೇಸು ಸ್ವಾಮಿ ಗಲಿಲೇಯವನ್ನು ಬಿಟ್ಟು ಜೋರ್ಡನ್ ನದಿಯ ಆಚೆಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. 

16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

  ಮೊದಲನೆಯ ವಾಚನ: ರೋಮನರಿಗೆ 4:1-8 ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ...