ಮೊದಲನೆಯ ವಾಚನ : ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ 5:1-7
ಹಾಡುವೆ ನಾನೆನ್ನ ಪ್ರಿಯನಿಗೆ ಗೀತೆಯೊಂದನು
ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು:
ಪ್ರಿಯತಮನಿಗೆ ಮತ್ತೊಂದು ದ್ರಾಕ್ಷಿಯ ತೋಟ
ಫಲವತ್ತಾಗಿಹ ಗುಡ್ಡದ ಮೇಲಿನ ತೋಟ.
ಆರಿಸಿ ಎಸೆದನು ಕಲ್ಲುಮುಳ್ಳುಗಳನು
ಅಗೆದು ಹದಮಾಡಿದನಾತ ಗುಡ್ಡವನು.
ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು
ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು
ಕಟ್ಟಿದನು ಅದರೊಳಗೆ ಆಲೆಯೊಂದನು.
ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು,
ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು!
ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ:
"ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ. ನನ್ನ ತೋಟಕ್ಕಾಗಿ ನಾನು ಮಾಡಿದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ:
ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ.
ಕೆಡವಿ ಹಾಕುವೆನು ಅದರ ಗೋಡೆಯನು; ಈಡಾಗುದದು ಪರರ ತುಳಿದಾಟಕ್ಕೆ. ಬಂಜರು ಭೂಮಿಯಾಗಿಸುವೆನು ಅದನ್ನು;
ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ. ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ.
ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ.
ನ್ಯಾಯನೀತಿಯನು ನಿರೀಕ್ಷಿಸಿದನಾತ, ಆದರೆ ಸಿಕ್ಕಿತವನಿಗೆ ರಕ್ತಪಾತ!
ಸತ್ಸಂಬಂಧವನು ಎದುರುನೋಡಿದನಾತ, ಇಗೋ ದಕ್ಕಿತವನಿಗೆ ದುಃಖಿತರ ಆರ್ತನಾದ!
ಕೀರ್ತನೆ
ಶ್ಲೋಕ: ಅನುಗ್ರಹಿಸಿದನು ಪ್ರಭು ಸ್ವರ್ಗದ ದವಸಧಾನ್ಯವನು|
1. ಈಜಿಪ್ಟಿನಿಂದ ದ್ರಾಕ್ಷಾಲತೆಯೊಂದನು ನೀ ತಂದೆ|
ಅನ್ಯಜನತೆಯನು ಹೊರದೂಡಿ ಅದನು ನಾಟಿಮಾಡಿದೆ||
ಹರಡಿವೆ ಅದರ ಕೊಂಬೆಗಳು ಸಮುದ್ರದವರೆಗೆ|
ಬೆಳೆದಿವೆ ಆ ರೆಂಬೆಗಳು ಮಹಾನದಿಯವರೆಗೆ||
ಶ್ಲೋಕ
2. ಕಿತ್ತು ಹಾಕಿದೆಯೇಕೆ ಅದರ ಬೇಲಿಯನು?|
ತರಿದು ಬಿಡುವವರಲ್ಲವೆ ದಾರಿಗರು ಅದನು?||
ನಾಶಮಾಡುವುವು ಅದನು ಕಾಡಹಂದಿಗಳು|
ತಿಂದುಹಾಕುವುವು ಅದನು ಅರಣ್ಯ ಮೃಗಗಳು||
ಶ್ಲೋಕ
3. ಸರ್ವಶಕ್ತನಾದ ದೇವರೇ, ಮರಳಿ ಮುಖತೋರಿಸು|
ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು ಪರಾಮರಿಸು||
ಕಾಪಾಡು, ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು|
ಕಾದಿರಿಸು, ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು||
ಶ್ಲೋಕ
4. ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು ನಿನ್ನನು|
ಪನರ್ಜೀವಗೊಳಿಸು, ಮಾಳ್ಪೆವು ನಿನ್ನ ನಾಮಸ್ಮರಣೆಯನು||
ಸರ್ವಶಕ್ತನಾದ ದೇವನೇ, ಉದ್ಧರಿಸು ನಮ್ಮನು|
ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು||
ಶ್ಲೋಕ
ಎರಡನೆಯ ವಾಚನ : ಪೌಲನು ಫಿಲಿಪ್ಪಿಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 4:6-9
ಸಹೋದರರೇ, ಯಾವ ವಿಷಯದಲ್ಲಿ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾಭಾವ ಇರಲಿ. ಆಗ ಮನುಷ್ಯಗೃಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು. ಕಡೆಯದಾಗಿ ಸಹೋದರರೇ, ಯಾವುದು ಸತ್ಯವು - ಮಾನ್ಯವು, ನ್ಯಾಯವು - ಶುದ್ಧವು, ಪ್ರೀತಿಕರವು - ಮನೋಹರವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ. ನೀವು ನನ್ನಿಂದ ಕಲಿತವು ಹಾಗು ಅರಿತವುಗಳನ್ನು, ಕೇಳಿದೆವು ಹಾಗು ಕಂಡವುಗಳನ್ನು ನಿಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ತನ್ನಿರಿ. ಆಗ ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು.
ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ
ಘೋಷಣೆ
(ಯೊವಾನ್ನ 17:17)
ಅಲ್ಲೆಲೂಯ ಅಲ್ಲೆಲೂಯ!
ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ | ನಿಮ್ಮ ಮಾತೆ ಸತ್ಯ ||
ಶ್ಲೋಕ
ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 21:33-43
"ಇನ್ನೊಂದು ಸಾಮತಿಗೆ ಕಿವಿಗೊಡಿ: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು. ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿಯಾಯಿತು. ಕಟ್ಟಕಡೆಗೆ ಯಜಮಾನ, 'ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು' ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. ಆದರೆ ಗೇಣಿದಾರರು ಮಗನನ್ನು ಕಂಡೊಡನೇ, 'ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ, 'ಎಂದು ತಮ್ಮತಮ್ಮಲ್ಲೇ ಒಳಸಂಚು ಮಾಡಿಕೊಂಡರು. ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ, ಕೊಂದುಹಾಕಿದರು.
ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರಿಗೆ ಏನು ಮಾಡುವನು? "ಎಂದು ಯೇಸು ಕೇಳಿದರು. "ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು, "ಎಂದು ಅಲ್ಲಿದ್ದವರು ಉತ್ತರ ಕೊಟ್ಟರು. ಬಳಿಕ ಯೇಸು ಇಂತೆಂದರು: " 'ಮನೆಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ ! 'ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೆ? ಆದುದರಿಂದ ನಾನು ನಿಮಗೆ ಹೇಳುತ್ತೇನೆ, 'ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು."
No comments:
Post a Comment