ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.07.24 - "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ,"

ಮೊದಲನೇ ವಾಚನ: ಹೊಶೇಯ 2:16, 17-18, 21-22

ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನಗಳಲ್ಲಿ ನೀನು ನನ್ನನ್ನು ‘ಬಾಳ್‍ದೇವತೆ’ ಎಂದು ಕರೆಯದೆ ‘ನನ್ನ ಪತಿ’ ಎಂದು ಕರೆಯುವೆ. ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯಿಂದ ತೊಲಗಿಸುವೆನು; ಇನ್ನೆಂದಿಗೂ ಅವುಗಳನ್ನು ನೀನು ಉಚ್ಚರಿಸದಂತೆ ಮಾಡುವೆನು. ಆ ದಿನಗಳಲ್ಲಿ ನನ್ನ ಜನರಿಗೆ ಹಾನಿ ಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದ ಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು. ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನದಂದು ಪ್ರೀತಿಸುವೆನು ನಿನ್ನನು; ಆಲಿಸುವೆನು ಆಗಸದ ಮೊರೆಯನು. ಆಗಸವು ಆಲಿಸುವುದು ಭೂಮಿಯ ಮೊರೆಯನು ಇವು ಆಲಿಸುವುವು ಇಸ್ರಯೇಲಿನ ಮೊರೆಯನು.

ಕೀರ್ತನೆ: 145:2-3, 4-5, 6-7, 8-9

ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು

ಶುಭಸಂದೇಶ: ಮತ್ತಾಯ 9:18-26


ಯೇಸುಸ್ವಾಮಿ ಹೀಗೆ ಬೋಧಿಸುತ್ತಿರುವಾಗಲೇ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು. ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು. ಹೋಗುತ್ತಿದ್ದಾಗ, ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ. ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು. ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು, "ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು. ಆದರೂ ಜನರ ಗುಂಪನ್ನು ಹೊರಗೆ ಕಳುಹಿಸಿ, ಯೇಸು ಕೊಠಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು. ಆಕೆ ಎದ್ದಳು. ಈ ಸಮಾಚಾರ ಆ ನಾಡಿನಲ್ಲೆಲ್ಲಾ ಹಬ್ಬಿ ಹರಡಿತು. 

07.07.24 - “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,”

ಮೊದಲನೇ ವಾಚನ: ಯೆಜೆಕಿಯೇಲ 2:1-5

ಸರ್ವೇಶ್ವರ ನನಗೆ, “ನರಪುತ್ರನೇ, ಎದ್ದು ನಿಲ್ಲು; ನಿನ್ನ ಸಂಗಡ ಮಾತಾಡಬೇಕು,” ಎಂದು ಹೇಳಿದರು. ಅವರ ಈ ಮಾತನ್ನು ಹೇಳಿದ ಕೂಡಲೆ ದೇವರಾತ್ಮ ನನ್ನೊಳಗೆ ಸೇರಿ ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತಾಡಿದಾತನ ನುಡಿಯನ್ನು ಚೆನ್ನಾಗಿ ಕೇಳಿದೆ. ಆತ ನನಗೆ ಹೀಗೆ ಹೇಳಿದನು, “ನರಪುತ್ರನೇ, ನನಗೆ ವಿಮುಖರಾಗಿ ದ್ರೋಹಮಾಡಿದ ಜನಾಂಗದವರಾದ ಇಸ್ರಯೇಲರ ಬಳಿಗೆ ನಿನ್ನನ್ನು ಕಳುಹಿಸುವೆನು; ಈ ದಿನದವರೆಗೆ ಅವರೂ ಅವರ ಪಿತೃಗಳೂ ನನ್ನನ್ನು ಪ್ರತಿಭಟಿಸುತ್ತಲೇ ಬಂದಿದ್ದಾರೆ. ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ ಹಟಗಾರರೂ ಆಗಿದ್ದಾರೆ; ನೀನು ಅವರಿಗೆ, ‘ಸರ್ವೇಶ್ವರನಾದ ದೇವರೇ ಇಂತೆನ್ನುತ್ತಾರೆ,’ ಎಂದು ನುಡಿ. ಅವರು ದ್ರೋಹಿವಂಶದವರು, ಒಂದು ವೇಳೆ ಕೇಳದೆ ಹೋಗಬಹುದು, ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿ ತಮ್ಮ ಮಧ್ಯೆ ಕಾಣಿಸಿಕೊಂಡಿದ್ದಾನೆಂದು ತಿಳಿದುಕೊಳ್ಳುವರು.

ಕೀರ್ತನೆ: 123:1-2, 3,  4

ಶ್ಲೋಕ: ನನ್ನ ಕಣ್ಣುಗಳನ್ನು ನಿನ್ನ ಕಡೆಗೆ ಎತ್ತಿರುವೆ ಪ್ರಭೂ. 

ಪರಲೋಕದಲ್ಲಿ ಆಸೀನನಾಗಿರುವ ಪ್ರಭುವೇ
ನನ್ನ ಕಣ್ಣುಗಳನ್ನು ನಿನ್ನ ಕಡೆಗೆ ಎತ್ತಿದ್ದೆನೆ

ದಾಸನ ಕಣ್ಣು ಯಾಜಮಾನನತ್ತ
ದಾಸಿಯ ಕಣ್ಣು ಯಾಜಮಾನಿಯತ್ತ
ನನ್ನ ಕಣ್ಣು ಸ್ವಾಮಿ ದೇವನತ್ತ
ಆತನ ಕಟಾಕ್ಷವನ್ನು ನಿರೀಕ್ಷಿಸುತ್ತ

ದಯೇತೋರು ಪ್ರಭು ನಮಗೆ ದಯೇತೋರು
ಅತ್ಯಧಿಕವಾಗಿ ನಾವು ತಿರಸ್ಕೃತರು 

ಬೇಸತ್ತಿದೆ ಮನ ಗರ್ವಿಗಳ ನಿಂದೆಯಿಂದ  
ಸುಖಭೋಗಿಗಳು ಮಾಡುವ ಅಪಹಾಸ್ಯದಿಂದ 

ಎರಡನೆಯ ವಾಚನ: 2 ಕೊರಿಂಥಿಯರಿಗೆ  12:7-10


ನನಗೆ ತಿಳಿಸಲಾದ ಗಹನ ಸತ್ಯಗಳಿಂದ ನಾನು ಉಬ್ಬಿಹೋಗದ ಹಾಗೆ ನನ್ನ ದೇಹದಲ್ಲಿ ಶೂಲದಂತೆ ನಾಟಿರುವ ಬೇನೆಯೊಂದನ್ನು ನನಗೆ ಕೊಡಲಾಯಿತು. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. ಈ ಪೀಡೆ ನನ್ನನ್ನು ಬಿಟ್ಟು ತೊಲಗಲೆಂದು ನಾನು ಮೂರು ಸಾರಿ ಪ್ರಭುವಿನಲ್ಲಿ ಬೇಡಿಕೊಂಡೆ. ಅದಕ್ಕವರು, “ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ,” ಎಂದು ಹೇಳಿದರು. ಕ್ರಿಸ್ತಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಮತ್ತಷ್ಟು ಹೆಮ್ಮೆಪಡುತ್ತೇನೆ. ದುರ್ಬಲತೆಗಳಲ್ಲೂ ದುರವಸ್ಥೆಗಳಲ್ಲೂ ಮಾನನಷ್ಟದಲ್ಲೂ ಕಷ್ಟಹಿಂಸೆಗಳಲ್ಲೂ, ಆಪತ್ತುವಿಪತ್ತುಗಳಲ್ಲೂ ನಾನು ಕ್ರಿಸ್ತ ಯೇಸುವಿನ ನಿಮಿತ್ತ ಸಂತುಷ್ಟನಾಗಿದ್ದೇನೆ. ನಾನು ಬಲಶಾಲಿಯಾಗಿರುವುದು ಬಲಹೀನನಾಗಿರುವಾಗಲೇ.

ಶುಭಸಂದೇಶ: ಮಾರ್ಕ 6:1-6


ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. ಆಗ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,” ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ. ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.

06.07.24 - " ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ"

ಮೊದಲನೆಯ ವಾಚನ: ಆಮೋಸ 9:11-15


ಸರ್ವೇಶ್ವರ ಇಂತೆನ್ನುತ್ತಾರೆ: "ದಿನ ಬರಲಿದೆ, ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು, ಹಾಳಾದುದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು. ಹೀಗೆ ನನ್ನ ಜನರು ಎದೋಮಿನ ಮಿಕ್ಕ ಭಾಗವನ್ನೂ ಸರ್ವೇಶ್ವರನ ಪ್ರಜೆ ಎನ್ನಿಸಿಕೊಂಡ ಸಕಲ ಜನಾಂಗಗಳನ್ನೂ ಸ್ವಾಧೀನಪಡಿಸಿಕೊಳ್ಳುವರು." ಈ ಕಾರ್ಯವನ್ನು ಸಾಧಿಸುವಂಥ ಸರ್ವೇಶ್ವರಸ್ವಾಮಿಯ ನುಡಿಯಿದು: ಕಾಲ ಬರುವುದು. ಆಗ ಹೊಸಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೆ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷೆ ತುಳಿಯುವವನ ಮುಂದೆಯೆ. ಸುರಿಸುವುವು ದ್ರಾಕ್ಷಾರಸವನು ಬೆಟ್ಟಗಳು, ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು. ಸನಾತನ ಸೌಭಾಗ್ಯಕ್ಕೆ ಮರಳಿಸುವೆನು ನನ್ನ ಜನರಾದ ಇಸ್ರಯೇಲರನು. ವಾಸಮಾಡುವರವರು ಪಾಳುಬಿದ್ದ ಪಟ್ಟಣಗಳನು ಮತ್ತೆ ಕಟ್ಟಿಕೊಂಡು. ಕುಡಿಯುವರು ಸಮೃದ್ಧಿಯಾಗಿ ದ್ರಾಕ್ಷಾತೋಟಗಳನು ಮಾಡಿಕೊಂಡು. ತಿನ್ನುವರು ಯಥೇಚ್ಛವಾಗಿ ಫಲವೃಕ್ಷಗಳನು ಬೆಳೆಸಿಕೊಂಡು. ಬೇರೂರಿಸುವೆನು ಅವರನು ಸ್ವಂತನಾಡಿನಲಿ, ಕೀಳರಾರು ಅವರನು ಅಲ್ಲಿಂದ ಮರಳಿ." ಇದು ನಿನ್ನ ದೇವರಾದ ಸರ್ವೇಶ್ವರನ ನುಡಿ.

ಕೀರ್ತನೆ: 85:9, 11-12, 13-14
ಶ್ಲೋಕ: ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ.

ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ|
ಇದರಿಂದ ತನ್ನ ಮಹಿಮೆ ನಾಡಿನಲ್ಲಿರುವುದು ನಿರುತ||

ಸರ್ವ ಜನಾಂಗಗಳೇ, ಚಪ್ಪಾಳೆ ಹೊಡೆಯಿರಿ|
ಸರ್ವೇಶ್ವರನಿಗೆ ಜಯಜಯ ಘೋಷಮಾಡಿರಿ ಮಾಡಿರಿ||
ಪರಾತ್ಪರನಾದ ಪ್ರಭುವು ಘನಗಂಭೀರನು|
ಪ್ರಪಂಚಕ್ಕೆಲ್ಲ ರಾಜಧಿರಾಜನು||

ಏರಿದನು ಪ್ರಭು ಜಯಜಯಕಾರದೊಂದಿಗೆ|
ಆರೋಹಣವಾದನು ತುತೂರಿನಾದ ಜೊತೆಗೆ||
ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ|
ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ||

ದೇವನು ಭೂಮಂಡಲಕ್ಕೆಲ್ಲಾ ಒಡೆಯನು|
ಕೀರ್ತನೆಯಿಂದ ಕೊಂಡಾಡಿರಿ ಆತನನು||
ವಹಿಸಿಕೊಂಡನು ದೇವನು ಸರ್ವಾಧಿಪತ್ಯ|
ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ||

ಶುಭಸಂದೇಶ: ಮತ್ತಾಯ 9:14-17



ಯೊವಾನ್ನನ ಶಿಷ್ಯರು ಯೇಸುವಿನ ಬಳಿಗೆ ಬಂದರು. " ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ? " ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, " ಮದುವಣಿಗನು ಜೊತೆಯಲ್ಲಿರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗರಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು. " ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಏಕೆಂದರೆ ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ತುಂಬಿಡುವುದಿಲ್ಲ. ತುಂಬಿಟ್ಟರೆ ಬುದ್ದಲಿಗಳು ಬಿರಿಯುತ್ತವೆ, ಮದ್ಯವು ಚೆಲ್ಲಿಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ. ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡುತ್ತಾರೆ. ಆಗ ಎರಡೂ ಉಳಿಯುತ್ತವೆ, " ಎಂದರು.

05.07.24

ಮೊದಲನೆಯ ವಾಚನ: ಆಮೋಸ 8:4-6, 9-12


ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ, "ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ ? ಕೊಳಗವನ್ನು ಕಿರಿದುಮಾಡೋಣ, ತೊಲವನ್ನು ಹಿರಿದುಮಾಡೋಣ, ಕಳ್ಳತಕ್ಕಡಿಯನ್ನು ಬೆಳೆಸೋಣ; ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ, " ಎಂದುಕೊಳ್ಳುತ್ತೀರಿ, ಅಲ್ಲವೇ? ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: "ಆ ದಿನದಂದು ನಡುಮಧ್ಯಾಹ್ನದಲ್ಲಿ ಸೂರ್ಯನನ್ನು ಮುಳುಗಿಸುವೆನು. ಹಾಡು ಹಗಲಲ್ಲೇ ಭೂಮಿಯನ್ನು ಕತ್ತಲಾಗಿಸುವೆನು. ನಿಮ್ಮ ಕೊಂಡಾಟದಿನಗಳನ್ನು ಗೋಳಾಟದಿನಗಳನ್ನಾಗಿ ಮಾರ್ಪಡಿಸುವೆನು. ನಿಮ್ಮ ಹರ್ಷಗೀತೆಗಳನ್ನು ಶೋಕಗೀತೆಗಳನ್ನಾಗಿ ಬದಲಾಯಿಸುವೆನು. ನೀವೆಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆ ಬೋಳಿಸಿಕೊಳ್ಳುವಂತೆ ಮಾಡುವೆನು. ಏಕಮಾತ್ರ ಪುತ್ರನನ್ನು ಕಳೆದುಕೊಂಡವರಂತೆ ನೀವು ಅತ್ತು ಪ್ರಲಾಪಿಸುವಿರಿ. ಆ ದಿನವೆಲ್ಲಾ ನಿಮಗೆ ಕರಾಳ ದಿನವಾಗುವುದು." ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ : "ದಿನಗಳು ಬರಲಿವೆ, ಅಂದು ನಾಡಿನಲ್ಲಿ ಕ್ಷಾಮವನ್ನುಂಟುಮಾಡುವೆನು. ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವೂ ಅಲ್ಲ; ಸರ್ವೇಶ್ವರನ ಸಂದೇಶಕ್ಕಾಗಿ ಹಸಿದು ಹಂಬಲಿಸುವ ಕ್ಷಾಮ. ಜನರು ಸಮುದ್ರದಿಂದ ಸಮುದ್ರದವರೆಗೆ ಉತ್ತರದಿಂದ ಪೂರ್ವದವರೆಗೆ ಅತ್ತಿತ್ತ ಹುಡುಕುತ್ತಾ ಬಳಲಿಹೋಗುವರು. ಆದರೂ ಅದು ಸಿಗದು.

ಕೀರ್ತನೆ: 119:2, 10, 20, 30, 40 ಮತ್ತಾಯ 4:4
ಶ್ಲೋಕ: ಮಾನವನು ಜೀವಿಸುವುದು ದೇವರಾಡುವ ಪ್ರತಿಯೊಂದು ನುಡಿಯಿಂದ.

ಆತನ ಕಟ್ಟಳೆಗಳನ್ನು ಕೈಗೊಳ್ಳುವವರು ಧನ್ಯರು|
ಮನಃಪೂರ್ವಕವಾಗಿ ಆತನನ್ನು ಅರಸುವವರು ಧನ್ಯರು||
ತುಂಬುಹೃದಯದಿಂದ ಹಂಬಲಿಸುತ್ತಿರುವೆನಯ್ಯಾ||
ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ||

ನಿನ್ನ ವಿಧಿಗಳನ್ನೇ ಹಂಬಲಿಸುತ್ತಿರುವೆ ಅನುದಿನ,|
ಈ ಕಾರಣ ಕರಗಿಹೋಗುತಿದೆ ಎನ್ನ ಚೇತನ||
ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು|
ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು||

ನಿನ್ನ ನಿಬಂಧನೆಗಳ ಅಭಿಮಾನಿಯು ನಾನು|
ನೀತಿಗನುಸಾರ ಚೇತನಗೊಳಿಸೆನ್ನ ನೀನು||
ಬಾಯ್ದೆರೆದು ಹಾತೊರೆಯುತ್ತಿರುವೆ|
ನಿನ್ನ ಆಜ್ಞೆಗಳನು ಅರಸುತಿರುವೆ||

ಶುಭಸಂದೇಶ: ಮತ್ತಾಯ 9:9-13

ಆ ಕಾಲದಲ್ಲಿ ಯೇಸು ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬವನನ್ನು ಕಂಡರು. ಅವನು ಸುಂಕವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. " ನನ್ನನ್ನು ಹಿಂಬಾಲಿಸು, " ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ' ಸುಂಕದವರೂ ' ' ಪಾಪಿಷ್ಟರೂ ' ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನುದ್ದೇಶಿಸಿ, ನಿಮ್ಮ ಗುರು ಇಂತಹ ಬಹಿಷ್ಕೃತ ಜನರ ಜೊತೆಯಲ್ಲಿ ಊಟಮಾಡುವುದೇ ? " ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, " ವೈದನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, ' ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ ' ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನಲ್ಲ, ಪಾಪಿಷ್ಠರನ್ನು " ಎಂದರು.

04.07.24 - "ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ" ಎನ್ನುವುದು ಸುಲಭವೋ ಅಥವಾ ‘ಎದ್ದು ನಡೆ’ ಎನ್ನುವುದು ಸುಲಭವೋ?"

ಮೊದಲನೇ ವಾಚನ: ಆಮೋಸ 07:10-17

ತರುವಾಯ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಯೇಲಿನ ಅರಸ ಯಾರೊಬ್ಬಾಮನಿಗೆ ಹೀಗೆಂದು ಹೇಳಿಕಳುಹಿಸಿದನು: “ಆಮೋಸನು ನಿನಗೆ ವಿರುದ್ಧವಾಗಿ ಇಸ್ರಯೇಲರಲ್ಲಿ ಒಳಸಂಚು ಹೂಡಿದ್ದಾನೆ. ಅವನ ಮಾತುಗಳನ್ನು ನಾಡು ಸಹಿಸಲಾರದು. ಏಕೆಂದರೆ, “ಯಾರೊಬ್ಬಾಮನು ಖಡ್ಗದಿಂದ ಹತನಾಗುವನು. ಇಸ್ರಯೇಲ್ ಸ್ವಂತ ನಾಡಿನಿಂದ ಪರದೇಶಕ್ಕೆ ಒಯ್ಯಲ್ಪಡುವುದು ಖಂಡಿತ ಎಂದು ಅವನು ನುಡಿದಿದ್ದಾನೆ.” ಆ ಬಳಿಕ ಅಮಚ್ಯನು ಆಮೋಸನಿಗೆ, “ಕಣಿ ಹೇಳುವವನೇ, ತೊಲಗು, ಜುದೇಯ ನಾಡಿಗೆ ಓಡಿ ಹೋಗು; ಅಲ್ಲಿ ಪ್ರವಾದನೆ ಮಾಡಿ ಹೊಟ್ಟೆ ಹೊರೆದುಕೊ. ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜನ ಗರ್ಭಗುಡಿ, ರಾಜ್ಯದ ಪವಿತ್ರಾಲಯ,” ಎಂದನು. ಅದಕ್ಕೆ ಆಮೋಸನು ಪ್ರತ್ಯುತ್ತರವಾಗಿ: “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ನಾನೊಬ್ಬ ಗೊಲ್ಲ, ಅತ್ತಿಹಣ್ಣನ್ನು ಕೀಳುವವನು. ಮಂದೆ ಕಾಯುವುದರಿಂದ ಸರ್ವೇಶ್ವರ ನನ್ನನ್ನು ಬಿಡಿಸಿದರು. ನೀನು ಹೋಗಿ ನನ್ನ ಜನರಾದ ಇಸ್ರಯೇಲರಿಗೆ ಪ್ರವಾದನೆ ಮಾಡು’ ಎಂದು ಹೇಳಿ ಕಳುಹಿಸಿದರು. “ಆದ್ದರಿಂದ ಆ ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಗಮನಿಸು: ‘ಇಸ್ರಯೇಲಿಗೆ ವಿರುದ್ಧ ಪ್ರವಾದನೆ ಮಾಡಬೇಡ; ಇಸಾಕನ ಮನೆತನದ ವಿರುದ್ಧ ಮಾತೆತ್ತಬೇಡ; ಎಂದು ನೀನು ಹೇಳುತ್ತೀಯಲ್ಲವೆ? ನೀನು ಹೀಗೆ ಹೇಳಿದ್ದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: ‘ನಿನ್ನ ಹೆಂಡತಿ ಈ ಪಟ್ಟಣದಲ್ಲಿ ವೇಶ್ಯೆಯಾಗುವಳು. ನಿನ್ನ ಪುತ್ರ ಪುತ್ರಿಯರು ಕತ್ತಿಗೆ ತುತ್ತಾಗುವರು. ನಿನ್ನ ನಾಡನ್ನು ಶತ್ರುಗಳು ವಶಪಡಿಸಿಕೊಂಡು ಹಂಚಿಕೊಳ್ಳುವರು. ನೀನು ಸಹ ಅಪವಿತ್ರವಾದ ನಾಡಿನಲ್ಲಿ ಸಾಯುವೆ. ಇಸ್ರಯೇಲರು ಖಂಡಿತವಾಗಿ ಸ್ವಂತ ನಾಡಿನಿಂದ ಪರದೇಶಕ್ಕೆ ಸೆರೆಯಾಗಿ ಹೋಗುವರು’,” ಎಂದು ಹೇಳಿದನು.

ಕೀರ್ತನೆ: 19:8, 9, 10, 11

ಶ್ಲೋಕ: ಪ್ರಭುವಿನ ತೀರ್ಪು ಯಥಾರ್ಥ, ನ್ಯಾಯಯುತ

ಶುಭಸಂದೇಶ: ಮತ್ತಾಯ 9:1-8


ಯೇಸುಸ್ವಾಮಿ ದೋಣಿ ಹತ್ತಿ ಮರಳಿ ಸರೋವರವನ್ನು ದಾಟಿ ತಮ್ಮ ಸ್ವಂತ ಊರಿಗೆ ಬಂದರು. ಆಗ ಜನರು ಒಬ್ಬ ಪಾಶ್ರ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅವರ ಬಳಿಗೆ ತಂದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ, ಆ ಪಾಶ್ರ್ವವಾಯು ರೋಗಿಗೆ, "ಮಗು ಧೈರ್ಯದಿಂದಿರು. ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು ಆಗ ಅಲ್ಲಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, "ಇವನು ದೇವದೂಷಣೆ ಮಾಡುತ್ತಿದ್ದಾನೆ," ಎಂದುಕೊಂಡರು. ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು, "ನೀವು ಮನಸ್ಸಿನಲ್ಲೇಕೆ ದುರಾಲೋಚನೆ ಮಾಡುತ್ತಿದ್ದೀರಿ? "ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ" ಎನ್ನುವುದು ಸುಲಭವೋ ಅಥವಾ ‘ಎದ್ದು ನಡೆ’ ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಆ ಪಾಶ್ರ್ವವಾಯು ರೋಗಿಯನ್ನು ನೋಡಿ, "ಎದ್ದೇಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು" ಎಂದರು. ಅದರಂತೆಯೇ, ಆ ರೋಗಿ ಎದ್ದು ಮನೆಗೆ ಹೊರಟುಹೋದನು. ಇದನ್ನು ಕಂಡ ಜನರು ತಲ್ಲಣಗೊಂಡರು. ಮಾನವನಿಗೆ ಇಂಥ ಅಧಿಕಾರ ಕೊಟ್ಟ ದೇವರನ್ನು ಕೊಂಡಾಡಿದರು. 

03.07.24 - ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು

ಮೊದಲನೇ ವಾಚನ : ಪ್ರೇಷಿತರ ಕಾರ್ಯಕಲಾಪಗಳು  : 10:24-35 


ಮರುದಿವಸ ಅವನು ಸೆಜರೇಯವನ್ನು ತಲುಪಿದನು. ಇತ್ತ ಕೊರ್ನೇಲಿಯನು ತಾನು ಆಹ್ವಾನಿಸಿದ ನೆಂಟರಿಷ್ಟರೊಡನೆಮತ್ತು ಆಪ್ತಮಿತ್ರರೊಡನೆ ಪೇತ್ರನಿಗಾಗಿ ಕಾಯುತ್ತಿದ್ದನು. ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿನು ಅವನನ್ನು ಎದುರಗೊಂಡುಪಾದಕ್ಕೆರಗಿಸಾಷ್ಟಾಂಗ ನಮಸ್ಕಾರ ಮಾಡಿದನು. ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ,   ಎದ್ದು ನಿಲ್ಲು,  ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು.

ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು. ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಧರ್ಮದವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಅಥವಾ ಅವರಿಗೆ ಭೇಟಿಕೊಡುವುದು ಧರ್ಮನಿಷಿದ್ಧ ಎಂಬುದು ನಿಮಗೆ ತಿಳಿದೇ ಇದೆಆದರೆನಾನು ಯಾರನ್ನೂ ಅಶುದ್ಧ ಅಥವಾ ಅಸ್ಪೃಶ್ಯ ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ. ಆದುದರಿಂದಲೇ ನೀವು ಹೇಳಿಕಳುಹಿಸಿದಾಗ ನಾನು ಯಾವ ಆಕ್ಷೇಪಣೆಮಾಡದೆ ಬಂದಿದ್ದೇನೆಈಗ ನನ್ನನ್ನು ಕರೆದ ಕಾರಣವೇನೆಂದು ತಿಳಿಯಬಯಸುತ್ತೇನೆ,” ಎಂದನು.

ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು. ಅವನು, “ಕೊರ್ನೇಲಿಯಾದೇವರು ನಿನ್ನ ಪ್ರಾರ್ಥನೆಯನ್ನು ಆಲಿಸಿದ್ದಾರೆನಿನ್ನ ದಾನಧರ್ಮಗಳನ್ನು ಮೆಚ್ಚಿದ್ದಾರೆ. ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾದ ಸಿಮೋನನನ್ನು ಬರಮಾಡಿಕೊಅವನು ಸಮುದ್ರತೀರದಲ್ಲಿ ವಾಸಿಸುತ್ತಿರುವಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದನು. ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆತಾವು ಇಲ್ಲಿಗೆ ದಯಮಾಡಿಸಿದಿರಿಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.

ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ ವಿಷಯ ನನಗೆ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

-ಪ್ರಭುವಿನ ವಾಕ್ಯ

ಎರಡನೇ ವಾಚನ  : ಹಿಬ್ರಿಯರಿಗೆ 1:2-3 


ಆದರೆಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸುಇವರೇ ದೈವತ್ವದ ಪಡಿಯಚ್ಚುತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರನಮ್ಮ ಪಾಪಗಳನ್ನು ತೊಡೆದುಹಾಕಿಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ.

-ಪ್ರಭುವಿನ ವಾಕ್ಯ

ಶುಭಸಂದೇಶ: ಯೊವಾನ್ನ20:24-29

ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸು ಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು, “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು. ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು.

ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು. ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು. ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು. ಯೇಸು ಅವನಿಗೆ, “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು.

02.07.24

ಮೊದಲನೆಯ ವಾಚನ: ಆಮೋಸ 3:1-8; 4:11-12

ಇಸ್ರಾಯೇಲಿನ ಜನರೇ, ಕಿವಿಗೊಡಿ. ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡುಗಡೆ ಮಾಡಿ ಕರೆತಂದ ಸರ್ವೇಶ್ವರ ನಿಮ್ಮ ವಿರುದ್ದವಾಗಿ ನುಡಿಯುವ ಮಾತುಗಳನ್ನು ಆಲಿಸಿರಿ: "ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು. ಗೊತ್ತುಗುರಿಯಿಲ್ಲದೆ ಯಾರಾದರಿಬ್ಬರು ಜೊತೆಯಾಗಿ ಪ್ರಯಾಣ ಮಾಡುವುದುಂಟೆ ? ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೇ ಗುರುಗುಟ್ಟುವುದುಂಟೆ ? ಕಾಳಿಲ್ಲದೆ ಪಕ್ಷಿ ಬಲೆಗೆ ಬೀಳುವುದುಂಟೆ ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಏರುವುದುಂಟೆ ? ರಣಕಕಹಳೆ ಮೊಳಗಲು ಬೆದರದೆ ಇರುವುದುಂಟೆ ? ಸರ್ವೇಶ್ವರನಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೆ ? ತನ್ನ ಪರಿಚಾರಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಸ್ವಾಮಿ ಸರ್ವೇಶ್ವರ ಏನೂ ಮಾಡುವುದಿಲ್ಲ. ಸಿಂಹದ ಗರ್ಜನೆಯನ್ನು ಕೇಳಿ ಹೆದರದಿರುವವರು ಯಾರು ? ಸ್ವಾಮಿ ಸರ್ವೇಶ್ವರನ ನುಡಿಯನ್ನು ಕೇಳಿ ಪ್ರವಾದನೆ ಮಾಡದಿರುವವರು ಯಾರು? "ಒಮ್ಮೆ ಸೊದೋಮ್ ಮತ್ತು ಗೊಮೋರಾ ಪಟ್ಟಣಗಳನ್ನು ಕೆಡವಿದಂತೆ ನಾನು ನಿಮ್ಮ ಪಟ್ಟಣ ಪಾಳೆಯಗಳನ್ನು ಕೆಡವಿದೆನು. ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಂತೆ ನೀವು ಇದ್ದಿರಿ. ಆದರೂ ನೀವು ನನ್ನ ಬಳಿಗೆ ಹಿಂದಿರುಗಲಿಲ್ಲ. ನ್ಯಾಯತೀರ್ಪನ್ನು ಕೊಡಲು ಬರಲಿರುವ ನಿಮ್ಮ ದೇವರನ್ನು ಎದುರುಗೊಳ್ಳಲು ಸಿದ್ಧಮಾಡಿಕೊಳ್ಳಿ, " ಎನ್ನುತ್ತಾರೆ ಸರ್ವೇಶ್ವರ.

ಕೀರ್ತನೆ 5:4-5, 6, 7
ಶ್ಲೋಕ: ಪ್ರಭೂ, ಸತ್ಯಪಥದಲಿ ನಡೆಸೆನ್ನನು.

ದುಷ್ಟತನ ದೇವಾ, ನಿನಗಿಲ್ಲ ಒಲವು|
ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು||
ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು|
ನಿನಗೆ ವೈರಿಗಳಾಗುವರು ಅಧರ್ಮಿಗಳು||

ಹುಸಿನುಡಿದವರನು ಪ್ರಭೂ, ನೀ ನಾಶಮಾಡುವೆ|
ಹಿಂಸಕರನು, ವಂಚಕರನು ನೀ ಹೇಸಿಬಿಡುವೆ||
ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ|
ಭಕುತಿಯಿಂದ ಅಡ್ಡಬೀಳುವೆ ನಿನ್ನ ಪವಿತ್ರಾಲಯದತ್ತ||

ಘೋಷಣೆ ಯೊವಾನ್ನ 15:15

ಅಲ್ಲೆಲೂಯ, ಅಲ್ಲೆಲೂಯ!
ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ.
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 8:23-27

ಆ ಮೇಲೆ ಯೇಸು ದೋಣಿಯನ್ನು ಹತ್ತಿದರು. ಶಿಷ್ಟರೂ ಹತ್ತಿ ಅವರ ಸಂಗಡ ಹೋದರು. ಇದ್ದಕ್ಕಿದ್ದ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತ್ತು. ದೋಣಿ ಅಲೆಗಳಿಂದ ಮುಳುಗಿ ಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು. ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, " ಪ್ರಭೂ, ಕಾಪಾಡಿ. ನಾವು ನೀರುಪಾಲಾಗುತ್ತಿದ್ದೇವೆ, " ಎಂದರು. ಅದಕ್ಕೆ ಯೇಸು, " ಅಲ್ಪ ವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ? " ಎಂದರು. ಅನಂತರ ಎದ್ದುನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. " ಗಾಳಿಯೂ ಸರೋವರವೂ ಇವರು ಹೇಳಿದಂತೆ ಕೇಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು ! " ಎಂದುಕೊಂಡರು.

01.07.24 - ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನು ಬಂದು ನನ್ನನ್ನು ಹಿಂಬಾಲಿಸು,

ಮೊದಲನೆಯ ವಾಚನ: ಆಮೋಸ 2:6-10, 13-16


ಸರ್ವೇಶ್ವರ ಇಂತೆನ್ನುತ್ತಾರೆ: "ಇಸ್ರಾಯೇಲಿನ ಜನರು ಪದೇ ಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಬೆಳ್ಳಿಬಂಗಾರಕ್ಕಾಗಿ ಸಜ್ಜನರನ್ನು ಮಾರಿಬಿಡುತ್ತಾರೆ. ಒಂದುಜೊತೆ ಜೋಡುಗಳ ಸಾಲವನ್ನು ಸಹ ತೀರಿಸಲಾಗದ ಬಡಬಗ್ಗರನ್ನು ವಿಕ್ರಯಿಸುತ್ತಾರೆ. ದಿಕ್ಕಿಲ್ಲದವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದುಬಿಡುತ್ತಾರೆ. ದೀನದಲಿತರಿಗೆ ನ್ಯಾಯದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ. ಪ್ರತಿಯೊಂದು ಪ್ರಾರ್ಥನಾಲಯದಲ್ಲಿಯೂ ಮಲಗುತ್ತಾರೆ. ಬಡವರಿಂದ ಅಡವಾಗಿ ಇಟ್ಟುಕೊಂಡ ಬಟ್ಟೆಗಳ ಮೇಲೆಯೇ ಬಿದ್ದಿರುತ್ತಾರೆ. ವಿಧಿಯಿಲ್ಲದೆ ದಂಡ ತೆರಬೇಕಾದವರಿಂದ ಹೆಂಡವನ್ನು ತಂದು ದೇವರ ಮಂದಿರದಲ್ಲೇ ಕುಡಿಯುತ್ತಾರೆ. "ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲ ಮಾಡುವೆನು. ಈಜಿಪ್ಟಿನಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ಕಾಲ ಅರಣ್ಯದ ಮಾರ್ಗವಾಗಿ ನಿಮ್ಮನ್ನು ನಡೆಸಿ ಕರೆತಂದು, ಅಮೋರ್ಯದವರ ನಾಡನ್ನು ನಿಮಗೆ ದೊರಕಿಸಿಕೊಟ್ಟವನು ನಾನೇ. ಆದ್ದರಿಂದ ಧಾನ್ಯ ತುಂಬಿದ ಬಂಡೆ ನಸುಕುವಂತೆ ನಿಮ್ಮನ್ನು ಇದ್ದಲ್ಲಿಯೇ ನಸುಕಿಬಿಡುವೆನು. ನಿಮ್ಮಲ್ಲಿ ದೌಡೋಡುವವನು ಕೂಡ ತಲೆತಪ್ಪಿಸಿಕೊಳ್ಳಲಾರನು. ಬಲಿಷ್ಠನೂ ಬಲಹೀನನಾಗುವನು. ಓಟಗಾರನೂ ಸಿಕ್ಕಿಬೀಳುವನು. ರಾಹುತನೂ ರಕ್ಷಣೆ ಪಡೆಯಲಾರನು. ಪ್ರಬಲವಾಗಿದ್ದವರಲ್ಲಿ ಧೀರನಾದವನೂ ಸಹ ನಗ್ನನಾಗಿ ಪಲಾಯನ ಮಾಡುವನು, " ಇದು ಸರ್ವೇಶ್ವರ ಸ್ವಾಮಿಯ ನುಡಿ.

ಕೀರ್ತನೆ: 50:17, 16, 18-19, 20-21, 22-23
ಶ್ಲೋಕ: ದೇವರ ನೆನೆಯದವರೇ, ನೀಡಿರಿ ಗಮನವನು !

ನನ್ನ ಮಾತುಗಳನು ನೀವು ತಾತ್ಸಾರಮಾಡುತ್ತೀರಿ|
ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ||
ದುರ್ಜನರಿಗೆ ದೇವ ಹೇಳುವನು ಇಂತೆಂದು|
ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?|
ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?||

ಕಂಡೊಡನೆ ಬೇಕು ನಿಮಗೆ ಚೋರರ ಕೂಟ|
ಸಾಕಾಗಿಲ್ಲ ನಿಮಗೆ ಜಾರರ ಒಡನಾಟ||
ನಿಮ್ಮ ಬಾಯನ್ನಾಳುತ್ತದೆ ಕೆಡುಕುತನ|
ನಿಮ್ಮ ನಾಲಿಗೆ ನೇಯುತ್ತದೆ ಕಪಟತನ||

ಸೋದರನಿಗೆ ವಿರುದ್ಧ ಸುಳ್ಳಾಡಲು ಕೂರುತ್ತೀರಿ|
ಒಡಹುಟ್ಟಿದವರಿಗೆ ಎದುರಾಗಿ ಚಾಡಿಹೇಳುತ್ತೀರಿ||
ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ?|
ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?||

ದೇವರ ನೆನೆಯದವರೇ, ನೀಡಿರಿ ಗಮನವನು|
ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನ್ನು?||
ಧನ್ಯವಾದದ ಬಲಿಯರ್ಪಿಸುವವನೇ ನನಗೆ ಸನ್ಮಾನಿತನು|
ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು||

ಶುಭಸಂದೇಶ: ಮತ್ತಾಯ 8:18-22


ಆ ಕಾಲದಲ್ಲಿ ದೊಡ್ಡ ಜನಸಮೂಹ ತಮ್ಮ ಸುತ್ತಲೂ ನಿಂತಿರುವುದನ್ನು ಯೇಸು ನೋಡಿದರು. ಸರೋವರದ ಆಚೆಯ ದಡಕ್ಕೆ ಹೋಗಲು ತಮ್ಮ ಶಿಷ್ಯರಿಗೆ ಅಪ್ಪಣೆ ಮಾಡಿದರು. ಆಗ ಒಬ್ಬ ಧರ್ಮಶಾಸ್ತ್ರಿ ಬಂದು, " ಗುರುವೇ, ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ, " ಎಂದನು. ಅದಕ್ಕೆ ಯೇಸು, " ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ, " ಎಂದರು. ಶಿಷ್ಯರಲ್ಲಿ ಮತ್ತೊಬ್ಬನು ಮುಂದೆ ಬಂದು, " ಸ್ವಾಮಿ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸಲು ಸಮಯ ಕೊಡಿ, " ಎಂದು ಕೇಳಿದನು. ಅವನಿಗೆ ಯೇಸು, " ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನು ಬಂದು ನನ್ನನ್ನು ಹಿಂಬಾಲಿಸು, " ಎಂದರು.

30.06.24 - “ತಲಿಥಾಕೂಮ್” (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ )

ಮೊದಲನೇ ವಾಚನ: ಸುಜ್ಞಾನ ಗ್ರಂಥ 1:13-15; 2:23-24


ದೇವರು ಉಂಟುಮಾಡಿಲ್ಲ ಮರಣವನ್ನು ಆತ ನೋಡಿ ಹಿಗ್ಗುವವನಲ್ಲ ಜೀವಿಗಳ ಸಾವನ್ನು. ಅಸ್ತಿತ್ವದಲ್ಲಿರಲೆಂದೇ ದೇವ ಸೃಷ್ಟಿಸಿದನು ಸಮಸ್ತವನ್ನು ಸೃಷ್ಟಿಗಳಲ್ಲಿದೆ ಆರೋಗ್ಯ, ಅವುಗಳಲಿಲ್ಲ ಮಾರಕ ವಿಷಯ ಅಧೋಲೋಕಕ್ಕೆ ಈ ಲೋಕದ ಮೇಲಿಲ್ಲ ಅಧಿಕಾರವು. ಅಂತ್ಯವೆಂಬುದಿಲ್ಲ ನ್ಯಾಯನೀತಿಗೆ. ದೇವರು ಮಾನವನನ್ನು ಸೃಷ್ಟಿಸಿದ್ದು ಅಮರತ್ವಕ್ಕಾಗಿ ಅವನನ್ನು ರಚಿಸಿದ್ದು ತಮ್ಮ ಸ್ವರೂಪಕ್ಕನುಗುಣವಾಗಿ. ಸೈತಾನನ ಮತ್ಸರದಿಂದಲೆ ಮರಣ ಪ್ರವೇಶಿಸಿತು ಲೋಕವನು ಅವನ ಪಕ್ಷಕೆ ಸೇರಿದವರೆಲ್ಲರು ಅನುಭವಿಸುವರು ಅದನು.

ಕೀರ್ತನೆ: 30:1, 3, 4-5, 10-12
ಶ್ಲೋಕ: ನಿನಗೆನ್ನ ವಂದನೆ ಪ್ರಭು, ನನ್ನನುದ್ಧರಿಸಿದೆ. 

ಹೇ ಪ್ರಭು, ಎನ್ನ ದೇವಾ ‘ ಎಂದೆ I
ಹೇ ಪ್ರಭು, ಎನ್ನ ದೇವಾ ‘ ಎಂದೆ I
ನಾ ಮೊರೆಯಿಡೆ, ನೀ ಗುಣಪಡಿಸಿದೆ II

ಭಕ್ತರೇ, ಸಂಕೀರ್ತಿಸಿರಿ ಪ್ರಭುವನು I
ಮಾಡಿರಿ ಆತನ ನಾಮಸ್ಮರಣೆಯನು II
ಆತನ ಕೋಪ ಕ್ಷಣಮಾತ್ರ I
ಆತನ ಕೃಪೆ ಜೀವನ ಪರಿಯಂತ II

ಇರುಳು ಬರಲು ಇರಬಹುದು ಅಳಲು I
ನಲಿವು ಉಲಿವುದು ಹಗಲು ಹರಿಯಲು II
ನಾನಾದರೋ ಉಲ್ಲಾಸದಿಂದಿರುವಾಗಲೂ I
ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ II

ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ I
ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ II
ಎಂದೇ ಮೌನವಿರದೆ ಎನ್ನ ಮನವು ನಿನಗೆ ಹಾಡಲಿ ಕೀರ್ತನೆ I
ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ ಧನ್ಯ ವಂದನೆ I

ಎರಡನೆಯ ವಾಚನ: 2 ಕೊರಿಂಥಿಯರಿಗೆ  8:7, 9, 13-15

ವಿಶ್ವಾಸ, ವಾಕ್ಚಾತುರ್ಯ, ಜ್ಞಾನ, ಶ್ರದ್ಧೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ಧರಾಗಿದ್ದೀರಿ. ಹಾಗೆಯೇ ಈ ಸೇವಾಕಾರ್ಯದಲ್ಲೂ ಸಮೃದ್ಧರಾಗಿರಿ. ಪ್ರಭು ಯೇಸುಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ: ಒಂದು ವರ್ಷಕ್ಕೆ ಹಿಂದೆ ನೀವು ಪ್ರಾರಂಭಿಸಿದ ಈ ಸೇವಾಕಾರ್ಯವನ್ನು ಪೂರೈಸುವುದು ಲೇಸು. ಈ ಕಾರ್ಯವನ್ನು ಮೊದಲು ಆರಂಭಿಸಿದವರು ನೀವೇ. ಆರಂಭಿಸಬೇಕೆಂದು ಸೂಚಿಸಿದವರೂ ನೀವೇ. ಆದ್ದರಿಂದ ಆರಂಭಿಸುವುದರಲ್ಲಿ ಎಷ್ಟು ಆಸಕ್ತರಾಗಿದ್ದಿರೋ, ಅಷ್ಟೇ ಆಸಕ್ತಿಯಿಂದ ನಿಮ್ಮ ನಿಮ್ಮ ಶಕ್ತಿಗನುಸಾರವಾಗಿ ನೀಡಿ ಈ ಯೋಜನೆಯನ್ನು ಪೂರೈಸಿರಿ. ನಿಮ್ಮ ಕೊಡುಗೆಯಿಂದ ಇತರರ ಕಷ್ಟ ಪರಿಹಾರವಾಗಬೇಕು; ಅದರಿಂದ ನಿಮಗೆ ನಷ್ಟವುಂಟಾಗಬೇಕು ಎಂದು ಸಮಾನತೆ ಇರಬೇಕು. ಈ ಕಾಲದಲ್ಲಿ ನಿಮಗೆ ಸಮೃದ್ಧಿಯಾಗಿರುವುದರಿಂದ ಅವರ ಕೊರತೆಯನ್ನು ನೀವು ನೀಗಿಸಬೇಕು. ಮುಂದಕ್ಕೆ ಅವರು ಸಮೃದ್ಧಿಯಿಂದಿರುವಾಗ, ನಿಮ್ಮ ಕೊರತೆಯನ್ನು ಅವರು ನೀಗಿಸುವರು. ಹೀಗೆ ನಿಮ್ಮಲ್ಲಿ ಸಮಾನತೆ ಉಂಟಾಗುವುದು. “ಅತಿಯಾಗಿ ಶೇಖರಿಸಿದವನಿಗೆ ಅಧಿಕವಾಗಲಿಲ್ಲ ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ.” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.

ಶುಭಸಂದೇಶ: ಮಾರ್ಕ 5:21-43


ಆ ಕಾಲದಲ್ಲಿ ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, “ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು,” ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು. ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. “ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು” ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಿಸಿ, “ನನ್ನ ಉಡುಪನ್ನು ಮುಟ್ಟಿದವರಾರು?” ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, “ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು?’ ಎಂದು ಕೇಳುತ್ತೀರಲ್ಲಾ” ಎಂದರು. ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು,” ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, “ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?” ಎಂದರು. ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯಿರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು,” ಎಂದರು. ಅನಂತರ ಪೇತ್ರ, ಯಕೋಬ ಹಾಗೂ ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, “ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನು ಹಿಡಿದು, “ತಲಿಥಾಕೂಮ್” ಎಂದರು. (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ) ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು.

29.06.24 - "ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11

ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು). ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು. ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು. ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು. ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು. ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದುಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.

ಕೀರ್ತನೆ: 34:2-3, 4-5, 6-7, 8-9

ಶ್ಲೋಕ: ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು

ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 17-18

ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮೀಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್.

ಶುಭಸಂದೇಶ: ಮತ್ತಾಯ 16:13-19


ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು. ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,

28.06.24 - “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,”

ಮೊದಲನೇ ವಾಚನ: 2 ಅರಸುಗಳು 25:1-12

ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು. ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು. ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು. ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿಹೋಗಿದ್ದರು. ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು. ಇವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು. ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು. ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು. ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತುಗೋಡೆಗಳನ್ನೆಲ್ಲ ಕೆಡವಿದರು. ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು. ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.

ಕೀರ್ತನೆ: 137:1-2, 3, 4-5, 6

ಶ್ಲೋಕ: ಜೆರುಸಲೇಮನು ನಾ ಸ್ಮರಣೆಮಾಡದಿದ್ದಲಿ, ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ

ಶುಭಸಂದೇಶ: ಮತ್ತಾಯ 8:1-4


ಯೇಸುಸ್ವಾಮಿ ಬೆಟ್ಟದಿಂದ ಇಳಿದುಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, “ಸ್ವಾಮೀ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ,” ಎಂದು ಬೇಡಿದನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು.

27.06.24 - "ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆ"

ಮೊದಲನೇ ವಾಚನ: ೨ ಅರಸುಗಳು 24:8-17

ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆ ಇವನ ತಾಯಿ. ಇವನು ತನ್ನ ತಂದೆಯಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ಅವನ ಕಾಲದಲ್ಲಿ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು. ಅಷ್ಟರಲ್ಲಿ ನೆಬೂಕದ್ನೆಚ್ಚರನೂ ಬಂದನು. ಆಗ ಜುದೇಯದ ಅರಸ ಯೆಹೋಯಾಖೀನನು, ತನ್ನ ತಾಯಿ, ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು. ಅವನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು. ಇದಲ್ಲದೆ, ಸರ್ವೇಶ್ವರ ಮುಂತಿಳಿಸಿದ ಪ್ರಕಾರ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ದ್ರವ್ಯವನ್ನೆಲ್ಲಾ ದೋಚಿಕೊಂಡು ಹೋದನು. ಇಸ್ರಯೇಲರ ಅರಸನಾದ ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಆಭರಣಗಳನ್ನು ಮುರಿದುಬಿಟ್ಟನು. ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತು ಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ. ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾನ ಪುರುಷರು ಇವರನ್ನೂ, ಏಳು ಸಾವಿರ ಮಂದಿ ಯೋಧರನ್ನೂ ಸಾವಿರ ಮಂದಿ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಜೆರುಸಲೇಮಿನಿಂದ ಬಾಬಿಲೋನಿಗೆ ಒಯ್ದನು. ಅವರೆಲ್ಲರು ಪುಷ್ಟರೂ ರಣವೀರರೂ ಆಗಿದ್ದರು. ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ‘ಚಿದ್ಕೀಯ’ ಎಂಬ ಹೆಸರಿಟ್ಟನು.

ಕೀರ್ತನೆ: 79:1-2, 3-5, 8, 9

ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ

ಶುಭಸಂದೇಶ: ಮತ್ತಾಯ 7:21-29

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ‘ಸ್ವಾಮೀ, ಸ್ವಾಮೀ,’ ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ತೀರ್ಪಿನ ದಿನದಂದು, ‘ಸ್ವಾಮೀ, ಸ್ವಾಮೀ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೆ? ನಿಮ್ಮ ಹೆಸರಿನಲ್ಲಿ ಹಲವಾರು ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಅನೇಕರು ನನಗೆ ಹೇಳುವರು. ಆಗ ನಾನು ಅವರಿಗೆ ‘ಇಂದಿಗೂ ನಿಮ್ಮ ಗುರುತೇ ನನಗಿಲ್ಲ. ಅಧರ್ಮಿಗಳೇ, ನನ್ನಿಂದ ತೊಲಗಿರಿ,’ ಎಂದು ಬಹಿರಂಗವಾಗಿ ಹೇಳಿಬಿಡುವೆನು.” “ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ಧಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!” ಯೇಸುಸ್ವಾಮಿ ಇದೆಲ್ಲವನ್ನು ಹೇಳಿ ಮುಗಿಸಿದರು. ಅವರ ಬೋಧನೆ ಜನರಲ್ಲಿ ಅಮೋಘ ಪ್ರಭಾವವನ್ನು ಬೀರಿತು. ಏಕೆಂದರೆ, ಅವರ ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಯೇಸು ಅಧಿಕಾರ ವಾಣಿಯಿಂದ ಪ್ರಬೋಧಿಸುತ್ತಿದ್ದರು.

26.06.24 - "ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು"

ಮೊದಲನೆಯ ವಾಚನ: 2 ಅರಸರು 22:8-13, 23:1-3


ಪ್ರಧಾನಯಾಜಕ ಹಿಲ್ಕೀಯನು ಲೇಖಕ ಶಾಫಾನನಿಗೆ, " ಸರ್ವೇಶ್ವರನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ " ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು; ಶಾಫಾನನು ಓದಿದನು. ಅನಂತರ ಅವನು ಅರಸನ ಬಳಿಗೆ ಹೋಗಿ, " ನಿಮ್ಮ ಸೇವಕರು ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮೇಸ್ತ್ರಿಗಳಿಗೆ ಒಪ್ಪಿಸಿದರು; ಇದಲ್ಲದೆ ಯಾಜಕ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ, " ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು. ಅರಸನು ಧರ್ಮೋಪದೇಶ ಗ್ರಂಥವಾಕ್ಯಗಳನ್ನು ಕೇಳಿದಾಗ ದು:ಖಾವೇಶದಿಂದ ಬಟ್ಟೆಗಳನ್ನು ಹರಿದುಕೊಂಡು, ಯಾಜಕ ಹಿಲ್ಕೀಯನು, ಶಾಫಾನನ ಮಗ ಅಹೀಕಾಮ್, ಮೀಕಾಯನ ಮಗ ಅಕ್ಬೋರ್, ಲೇಖಕ ಶಾಫಾನ್ ಹಾಗು ತನ್ನ ಹಸ್ತಕನಾದ ಅಸಾಯ ಎಂಬುವವರಿಗೆ, " ನಮ್ಮ ಪೂರ್ವಜರು ನಮಗೆ ಸಿಕ್ಕಿರುವ ಈ ಗ್ರಂಥ ವಾಕ್ಯಗಳಿಗೆ ಕಿವಿಗೊಡದೆ ಹಾಗು ಅವುಗಳನ್ನು ಕೈಗೊಳ್ಳದೆ ಹೋದುದರಿಂದ ಸರ್ವೇಶ್ವರನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿ, ಜನರಿಗಾಗಿ ಹಾಗು ಎಲ್ಲಾ ಯೆಹೂದ್ಯರಿಗಾಗಿ, ಸರ್ವೇಶ್ವರನ ಬಳಿಗೆ ಹೋಗಿ ಈ ಗ್ರಂಥವಾಕ್ಯಗಳ ವಿಷಯವಾಗಿ ವಿಚಾರಿಸಿರಿ, " ಎಂದು ಆಜ್ಞಾಪಿಸಿದನು. ಅನಂತರ ಅರಸನು ದೂತರ ಮುಖಾಂತರ ಜೆರುಸಲೇಮಿನ ಮತ್ತು ಜುದೇಯ ಪ್ರಾಂತ್ಯದ ಬೇರೆ ಎಲ್ಲಾ ಯೆಹೂದ್ಯರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಕರೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋದನು. ಚಿಕ್ಕವರೂ ದೊಡ್ಡವರೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಸರ್ವೇಶ್ವರನ ಆಲಯದಲ್ಲಿ ಸಿಕ್ಕಿದ ನಿಬಂಧನ ಗ್ರಂಥವನ್ನು ಸಂಪೂರ್ಣವಾಗಿ ಓದಿದನು. ಕಂಬದ ಬಳಿಯಲ್ಲಿ ನಿಂತು ತಾನು ಸರ್ವೇಶ್ವರನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞಾನಿಯಮವಿಧಿಗಳನ್ನು ಪೂರ್ಣಮನಸ್ಸಿನಿಂದಲೂ. ಪೂರ್ಮಪ್ರಾಣದಿಂದಲೂ ಕೈಕೊಳ್ಳುವುದಾಗಿಯೂ ಮತ್ತು ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಸರ್ವೇಶ್ವರನಿಗೆ ಪ್ರಮಾಣಮಾಡಿದನು. ಎಲ್ಲಾ ಜನರೂ ಹಾಗೆಯೇ ಪ್ರಮಾಣಮಾಡಿದರು.

ಕೀರ್ತನೆ: 119:33-34, 35, 36, 37, 40
ಶ್ಲೋಕ: ನಿನ್ನ ನಿಬಂಧನೆಯನು, ಪ್ರಭೂ, ಕಲಿಸೆನಗೆ.

ನಿನ್ನ ನಿಬಂಧನೆಯನು, ಪ್ರಭೂ, ಕಲಿಸೆನಗೆ|
ಅದರಂತೆಯೇ ನಡೆಯುವೆನು ಕಡೆಯವರೆಗೆ||
ನೀಡೆನಗೆ ನಿನ್ನ ಶಾಸ್ತ್ರದ ಅರಿವನು|
ಪೂರ್ಣ ಮನದಿಂದ ಆಚರಿಸುವೆನದನು||

ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ|
ಪಡೆಯುವೆ ಹರ್ಷಾನಂದವನು ಅದರಲಿ||
ತಿರುಗಿಸೆನ್ನ ಮನವ ನಿನ್ನ ಕಟ್ಟಳೆಯ ಕಡೆ|
ಲಾಭಲೋಭದತ್ತ ಅದು ಸರಿಯದಂತೆ ತಡೆ|

ವ್ಯರ್ಥವಾದವುಗಳು ನಾಟದಿರಲಿ ಕಣ್ಗೆ|
ಚೇತನ ನೀಡು ನಿನ್ನ ಮಾರ್ಗದಲಿ ನನಗೆ||
ನಿನ್ನ ನಿಬಂಧನೆಗಳ ಅಭಿಮಾನಿಯು ನಾನು|
ನೀತಿಗನುಸಾರ ಚೇತನಗೊಳಿಸೆನ್ನ ನೀನು||

ಶುಭಸಂದೇಶ: ಮತ್ತಾಯ 7:15-20



ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತು ತಿನ್ನುವ ತೋಳುಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತುಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತುಹಚ್ಚುವಿರಿ."

25.06.24 - “ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿಬಿಟ್ಟಾವು"

ಮೊದಲನೇ ವಾಚನ: 2 ಅರಸುಗಳು 19:9-11, 14-21, 31-35, 36

ಸುಡಾನಿನ ರಾಜ ತಿರ್ಹಾಕನು ತನಗೆ ವಿರುದ್ಧವಾಗಿ ಹೊರಟಿದ್ದಾನೆ ಎಂಬ ಸುದ್ದಿ ಅಸ್ಸೀರಿಯದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸನಾದ ಹಿಜ್ಕೀಯನಿಗೆ, “ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ನಿನಗೆ ಹೇಳಿ ನಿನ್ನನ್ನು ಮೋಸಗೊಳಿಸಬಹುದು. ಅಸ್ಸೀರಿಯದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು, ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವಿಯೋ?  ಹಿಜ್ಕೀಯನು, ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರ ಸ್ವಾಮಿಯ ಮುಂದೆ ತೆರೆದಿಟ್ಟು, ಹೀಗೆಂದು ಪ್ರಾರ್ಥನೆ ಮಾಡಿದನು: “ಇಸ್ರಯೇಲಿನ ದೇವರೇ, ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಢರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟುಮಾಡಿದವರು ನೀವೇ. ಸರ್ವೇಶ್ವರಾ, ಕಿವಿಗೊಟ್ಟು ಕೇಳಿ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ: ಸನ್ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕಾಗಿ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ. ಸರ್ವೇಶ್ವರಾ, ಅಸ್ಸೀರಿಯದ ರಾಜರು ಸಕಲ ರಾಷ್ಟ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ. ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು. ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ದೇವರು ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಈ ಅಸ್ಸೀರಿಯನ ಕೈಯಿಂದ ಬಿಡಿಸಿರಿ.” ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ:” ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಈ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ರಾಜನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನನ್ನು ಕುರಿತು ಹೀಗೆಂದಿದ್ದಾರೆ: ‘ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು; ನಿನ್ನ ಹಿಂದೆ ತಲೆಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಆ ಕುವರಿಯು. ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು; ಸಿಯೋನ್ ಪರ್ವತದಲ್ಲಿ ಅಭಿವೃದ್ಧಿಯಾಗುವರು. ಸರ್ವೇಶ್ವರಸ್ವಾಮಿಯ ಆಗ್ರಹವೇ ಇದನ್ನು ಸಾಧಿಸುವುದು. “ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು: ‘ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ. ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಕಾಲಿಡನು. ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು,’ ಎಂದಿದ್ದಾರೆ". ಅದೇ ರೀತಿಯಲ್ಲಿ ಸರ್ವೇಶ್ವರಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಅಸ್ಸೀರಿಯರು ಬೆಳಿಗ್ಗೆ ಎದ್ದು ನೋಡುವಾಗ ಪಾಳೆಯ ತುಂಬ ಹೆಣಗಳು ಇದ್ದವು. ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು. ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲೆ ವಾಸಿಸಿದನು.

ಕೀರ್ತನೆ: 48:2-4, 10-11
ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು

ಸರ್ವ ಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ|
ದೇವನಖರದಲ್ಲಿ ಆತನ ಪವಿತ್ರ ಪರ್ವತ||
ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ|
ಆನಂದದಾಯಕ ರಾಜಾಧಿರಾಜನ ಆ ನಗರ||

ಅದರ ಕೋಟೆಕೊತ್ತಲಗಳ ನಡುವೆ ದೇವನು|
ತಾನೇ ಸುಭದ್ರ ದುರ್ಗವೆಂದು ತೋರಿಹನು||

ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು|
ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು||
ನಿನ್ನ ನಾಮದಂತೆ ನಿನ್ನಾ ಹೊಗಳಿಕೆ|
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ ||

ಘೋಷಣೆ ಯೊವಾನ್ನ 17:17
ಅಲ್ಲೆಲೂಯ, ಅಲ್ಲೆಲೂಯ!

ಪಿತನೇ, ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ.
ಅಲ್ಲೆಲೂಯ!


ಶುಭಸಂದೇಶ: ಮತ್ತಾಯ 7:6, 12-14

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿಬಿಟ್ಟಾವು; ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿ - ಅವು ಆ ಮುತ್ತುಗಳನ್ನು ಕಾಲಿನಿಂದ ತುಳಿದು ಹಾಕಿಯಾವು.” “ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ, ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ.” “ಕಿರಿದಾದ ಬಾಗಿಲಿನಿಂದಲೇ ಒಳಕ್ಕೆ ಹೋಗಿರಿ. ಏಕೆಂದರೆ ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅದನ್ನು ಹಿಡಿಯುವವರು ಅನೇಕರು. ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ, ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು.”