ಮೊದಲನೇ ವಾಚನ: ಕೊಲೊಸ್ಸೆಯರಿಗೆ 2:6-15
ನೀವು ಯೇಸುಕ್ರಿಸ್ತರನ್ನು ಪ್ರಭುವಾಗಿ ಸ್ವೀಕರಿಸಿರುವುದರಿಂದ, ಅವರೊಡನೆ ಐಕ್ಯೆತೆಯಿಂದ ಬಾಳಿರಿ. ಅವರಲ್ಲಿ ಸ್ಥಿರವಾಗಿರಿ. ಅವರನ್ನೇ ಅವಲಂಬಿಸಿ ನಿಮ್ಮ ಬಾಳೆಂಬ ಸೌಧವನ್ನು ನಿರ್ಮಿಸಿರಿ. ನೀವು ಕಲಿತುಕೊಂಡಿರುವಂತೆ ನಿಮ್ಮ ವಿಶ್ವಾಸ ಅವರಲ್ಲಿ ದೃಢವಾಗಿರಲಿ. ಕೃತಜ್ಞತೆಯು ನಿಮ್ಮಲ್ಲಿ ಉಕ್ಕೇರಲಿ, ಪ್ರಪಂಚದ ಪ್ರಬಲ ಶಕ್ತಿಗಳಿಂದಲೂ ಮಾನವ ವಿವೇಚನೆಯ ಶುಷ್ಕತರ್ಕ ಸಿದ್ಧಾಂತಗಳಿಂದಲೂ ಯಾರೂ ನಿಮ್ಮನ್ನು ಮೋಸಗೊಳಿಸಿ ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಇವುಗಳು ಪ್ರಾಪಂಚಿಕ ಪಾರಂಪರ್ಯಕ್ಕೆ ಮತ್ತು ವಿಶ್ವದ ಮೂಲಭೂತ ಶಕ್ತಿಗಳಿಗೆ ಸಂಬಂಧಿಸಿದವುಗಳೇ ಹೊರತು ಯೇಸುಕ್ರಿಸ್ತರಿಗಲ್ಲ. ದೈವತ್ವದ ಸಂಪೂರ್ಣತೆ ಸಶರೀರವಾಗಿ ಯೇಸುಕ್ರಿಸ್ತರಲ್ಲಿ ನೆಲೆಗೊಂಡಿದೆ. ಸಕಲ ಅಧಿಪತ್ಯಕ್ಕೂ ಅಧಿಕಾರಕ್ಕೂ ಶಿರಸ್ಸು ಅವರೇ. ಅವರಲ್ಲಿ ಮಾತ್ರ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ಕ್ರಿಸ್ತಯೇಸುವಿನಲ್ಲಿಯೇ ನೀವು ಸುನ್ನತಿಯನ್ನು ಪಡೆದಿದ್ದೀರಿ. ಇದು ಶಾರೀರಕ ಸುನ್ನತಿಯಲ್ಲ, ಪಾಪಮಯ ಸ್ವಭಾವವನ್ನು ಕಿತ್ತೊಗೆಯುವ ಸುನ್ನತಿ. ಸ್ವಯಂ ಕ್ರಿಸ್ತಯೇಸುವೇ ಯೋಜಿಸಿದ ಸುನ್ನತಿ. ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ ಸಮಾಧಿಯಾದಿರಿ. ಕ್ರಿಸ್ತ ಯೇಸುವನ್ನು ಮೃತರ ಮಧ್ಯದಿಂದ ದೈವರು ತಾವೇ ಎಬ್ಬಿಸಿದರು. ಈ ದೇವರ ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ ಎಬ್ಬಿಸಲಾಯಿತು. ನಿಮ್ಮ ಪಾಪಮಯ ಜೀವನದಿಂದಲೂ ಸುನ್ನತಿ ರಹಿತವಾದ ಸ್ವಭಾವದಿಂದಲೂ ಒಮ್ಮೆ ನೀವು ಮೃತರಾಗಿದ್ದಿರಿ. ಆದರೆ ಈಗ ದೇವರು ಕ್ರಿಸ್ತ ಯೇಸುವಿನೊಂದಿಗೆ ನಿಮ್ಮನ್ನು ಜೀವಂತಗೊಳಿಸಿದ್ದಾರೆ. ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂದಿಸಿದ್ದ ಧರ್ಮಶಾಸ್ತ್ರದ ವಿಧಿ ನಿಯಮಗಳನ್ನು ಕ್ರಿಸ್ತಯೇಸು ತೊಡೆದುಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ. ಬಲಾಢ್ಯ ಒಡೆಯರನ್ನೂ ಅಧಿಕಾರಿಗಳನ್ನೂ ನಿರಾಯುಧರನ್ನಾಗಿ ಮಾಡಿ, ತಾವು ಗಳಿಸಿದ ಜಯದ ನಿಮಿತ್ತ ಜನರೆಲ್ಲರ ಮುಂದೆ ಶಿಲುಬೆಯ ವಿಜಯೋತ್ಸವದಲ್ಲಿ ಅವರನ್ನು ಸೆರೆಯಾಳುಗಳನ್ನಾಗಿ ಪ್ರದರ್ಶಿಸಿದ್ದಾರೆ.
ಕೀರ್ತನೆ: 145:1-2, 8-9, 10-11
ಶ್ಲೋಕ: ಪ್ರಭುವಿನ ಕರುಣೆ ಎಲ್ಲರ ಮೇಲೆ
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ I
ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ II
ಹೊಗಳುವೆನು ನಾ ದಿನದಿನವೂ ನಿನ್ನನು I
ಭಜಿಸುವೆನೆಂದೆಂದಿಗೂ ನಿನ್ನ ಹೆಸರನು II
ಪ್ರಭು ದಯಾನಿಧಿ, ಕೃಪಾಸಾಗರನು I
ಸಹನಶೀಲನು, ಪ್ರೀತಿಪೂರ್ಣನು II
ಪ್ರಭುವಿನ ಕರುಣೆ ಎಲ್ಲರ ಮೇಲೆ I
ಆತನ ಕೃಪೆಯು ಸೃಷ್ಟಿಯ ಮೇಲೆ II
ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I
ಕೊಂಡಾಡುವುದು ನಿನ್ನನು ಭಕ್ತ ಸಮೂಹವು II
ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II
ಘೋಷಣೆ ಯೊವಾನ್ನ 6:63,68
ಅಲ್ಲೆಲೂಯ, ಅಲ್ಲೆಲೂಯ!
ಸಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ | ನಿತ್ಯ ಜೀವವನ್ನೀಯುವ ನುಡಿ ಇರುವುದು ತಮ್ಮಲ್ಲೇ ||
ಅಲ್ಲೆಲೂಯ!
ಶುಭಸಂದೇಶ: ಲೂಕ 6:12-19
ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು, ಅವರಿಗೆ "ಪ್ರೇಷಿತರು" ಎಂದು ಹೆಸರಿಟ್ಟರು. ಹೀಗೆ ಆಯ್ಕೆ ಆದವರು; ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಆಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೋಲೊಮಾಯ, ಮತ್ತಾಯ ಮತ್ತು ತೋಮ, ಆಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಆನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರ ತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.
No comments:
Post a Comment