ಮೊದಲನೆಯ ವಾಚನ: ಜೆಕರ್ಯ 8:1-8
ಸೇನಾಧೀಶ್ವರ ಸರ್ವೇಶ್ವರ ಜೆಕರ್ಯನಿಗೆ ಪುನಃ ಕೊಟ್ಟ ಸಂದೇಶವಿದು : " ಸಿಯೋನಿನ ವಿಷಯದಲ್ಲಿ ನನಗೆ ತುಂಬಾ ಅಭಿಮಾನವಿದೆ. ಅದರ ಶತ್ರುಗಳ ವಿಷಯದಲ್ಲಿ ಅಧಿಕ ರೋಷವಿದೆ. " ಸರ್ವೇಶ್ವರ ಇಂತೆನ್ನುತ್ತಾರೆ : " ಸಿಯೋನಿಗೆ ಹಿಂದಿರುಗುವೆನು. ಜೆರುಸಲೇಮಿನ ನಡುವೆ ವಾಸಮಾಡುವೆನು. ಆಗ ಜೆರುಸಲೇಮ್ ' ನಿಷ್ಠಾವಂತ ನಗರ ' ಎನಿಸಿಕೊಳ್ಳುವುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರನ ಪರ್ವತ, ಪವಿತ್ರ ಪರ್ವತ ಎಂಬ ಹೆಸರು ಬರುವುದು. ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ : " ಮುದುಕರು, ಮುದುಕಿಯರು ಮತ್ತೆ ಜೆರುಸಲೇಮಿನ ಚೌಕಗಳಲ್ಲಿ ಕುಳಿತುಕೊಳ್ಳುವರು. ವೃದ್ಧಾಪ್ಯದ ಪ್ರಯುಕ್ತ ಒಬ್ಬೊಬ್ಬರ ಕೈಯಲ್ಲಿ ಊರುಗೋಲು ಇರುವುದು. ಪಟ್ಟಣದ ಹಾದಿಬೀದಿಗಳಲ್ಲಿ ಮಕ್ಕಳು ತುಂಬಿಕೊಂಡಿರುವರು. " ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ : ಅಳಿದುಳಿದಿರುವ ಜನರಿಗೆ ಇಂಥ ಪರಿಸ್ಥಿತಿ ಅತಿಶಯವಾಗಿ ಕಾಣಬಹುದು. ಆದರೆ ನನಗೆ ಅದೇನೂ ಅತಿಶಯವಲ್ಲ. " ಇದು ಸರ್ವೇಶ್ವರನ ನುಡಿ. ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ. " ಇಗೋ, ನಾನು ನನ್ನ ಜನರನ್ನು ಪೂರ್ವ ಪಶ್ಚಿಮ ನಾಡುಗಳಿಂದ ಬಿಡುಗಡೆಮಾಡಿ, ಇಲ್ಲಿಗೆ ಬರಮಾಡುವೆನು. ಅವರು ಜೆರುಸಲೇಮಿನಲ್ಲೇ ವಾಸವಾಗಿರುವರು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಸತ್ಸಂಬಂಧವುಳ್ಳ, ಸದ್ಧರ್ಮದ ಪ್ರಜೆಗಳಾಗಿರುವರು."
ಕೀರ್ತನೆ 102:15-17, 18-20, 21, 22, 28
ಶ್ಲೋಕ: ಪುನರುದ್ಧರಿಸುವನು ಪ್ರಭು ಸಿಯೋನನು.
ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು|
ಭಯಪಡುವರು ನಿನ್ನ ಪ್ರತಾಪಕೆ ಭೂ ರಾಜರುಗಳು||
ಏಕೆನೆ ಪುನರುದ್ಧರಿಸುವನು ಸಿಯೋನನು|
ಪ್ರತ್ಯಕ್ಷ ಮಾಡುವನಾತ ತನ್ನ ಮಹಿಮೆಯನು||
ತಿರಸ್ಕರಿಸನಾತ ನಿರ್ಗತಿಕರ ಮೊರೆಯನು|
ನೆರವೇರಿಸದೆ ಬಿಡನು ಅವರ ಕೋರಿಕೆಯನು||
ಮುಂದಣ ಸಂತತಿಗದು ಶಾಸನವಾಗಿರಲಿ|
ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ||
ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ|
ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ||
ಆಲಿಸಿದಾತನು ಬಂಧಿತರ ಗೋಳಾಟವನು|
ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು||
ಬಾಳುವರು ನಿನ್ನ ದಾಸರ ಮಕ್ಕಳು ಸುರಕ್ಷಿತವಾಗಿ|
ಇರುವುದವರ ಸಂತತಿ ನಿನ್ನ ಸಮ್ಮುಖದಲಿ ಸ್ಥಿರವಾಗಿ||
ಹೀಗೆ ಪ್ರಭುವಿನಾರಾಧನೆ ಸಲ್ಲಿಸಲು|
ಜನಾಂಗಗಳೂ ರಾಜ್ಯಗಳೂ ಕೂಡಿರಲು||
ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ|
ಆತನ ಗುಣಗಾನವಿರುವುದು ಜೆರುಸಲೇಮಿನನಲಿ||
ಶುಭಸಂದೇಶ: ಲೂಕ 9:46-50
ಆ ಕಾಲದಲ್ಲಿ ತಮ್ಮಲ್ಲಿ ಅತಿ ಶ್ರೇಷ್ಠನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು. ಅವರ ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದು ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು, " ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ, ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು, " ಎಂದರು. ಆಗ ಯೊವಾನ್ನನು ಯೇಸುವಿಗೆ, " ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು, " ಎಂದನು. ಅದಕ್ಕೆ ಯೇಸು, " ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾದಿ, " ಎಂದು ಉತ್ತರ ಕೊಟ್ಟರು.
No comments:
Post a Comment