ಮೊದಲನೇ ವಾಚನ: 1ತಿಮೊಥೇಯನಿಗೆ 6:2-12

ಅತಿ ಪ್ರಿಯನೆ, ಈ ವಿಷಯಗಳ ಬಗ್ಗೆ ಆಜ್ಞಾಪೂರ್ವಕವಾಗಿ ಬೋಧಿಸು. ಯಾರಾದರೂ ನಮ್ಮ ಧಾರ್ಮಿಕ ಉಪದೇಶವನ್ನು ಅನುಸರಿಸದೆ, ಪ್ರಭು ಯೇಸುಕ್ರಿಸ್ತರ ನೈಜ ಬೋಧನೆಯನ್ನು ಒಪ್ಪಿಕೊಳ್ಳದೆ, ಭಿನ್ನ ಬೋಧನೆಯನ್ನು ಮಾಡುವುದಾದರೆ, ಅಂಥವನು ಆಹಂಭಾವಿ ಹಾಗೂ ಅಜ್ಞಾನಿಯೇ ಸರಿ. ಅಂಥವನಿಗೆ ಒಣ ವಾಗ್ವಾದಗಳಲ್ಲಿ ಮತ್ತು ಬರಡು ಮಾತುಗಳಲ್ಲಿ ಬಲು ಹಂಬಲ. ಇವುಗಳು ಅಸೂಯೆ, ಕಲಹ, ದೂಷಣೆ, ಅನುಮಾನ ಮತ್ತು ಕಚ್ಚಾಟಗಳಿಗೆ ಎಡೆಕೊಡುತ್ತವೆ. ಮತಿಗೆಟ್ಟ ಅಂಥವರಲ್ಲಿ ಸತ್ಯವೆಂಬುದು ಇರದು. ಧಾರ್ಮಿಕ ಸೇವೆಯು ಧನಗಳಿಕೆಯ ಸಾಧನವೆಂದೇ ಇವರ ನಂಬಿಕೆ. ಇರುವುದರಲ್ಲೇ ಸಂತೃಪ್ತನಾಗಿರುವವನು ಭಕ್ತಿಯಲ್ಲಿ ನಿಜಕ್ಕೂ ಶ್ರೀಮಂತನಾಗಿರುತ್ತಾನೆ. ಹುಟ್ಟಿದಾಗ ನಾವು ಈ ಲೋಕಕ್ಕೆ ಏನನ್ನೂ ತರಲಿಲ್ಲ; ಸಾಯುವಾಗ ಏನನ್ನೂ ಕೊಂಡೊಯ್ಯುವುದಿಲ್ಲ. ನಮಗೆ ಊಟ, ಬಟ್ಟೆ ಇದ್ದರೆ ಅಷ್ಟೇ ಸಾಕು. ಐಶ್ವರ್ಯವಂತರಾಗಬೇಕೆಂದು ಆಶಿಸುವವರು ಅನೇಕ ಪ್ರಲೋಭನೆಗಳಿಗೆ ಒಳಗಾಗುತ್ತಾರೆ. ನಿರರ್ಥಕವೂ ಹಾನಿಕರವೂ ಆದ ಆಶಾಪಾಶಾಗಳಲ್ಲಿ ಸಿಕ್ಕಿಬೀಳುತ್ತಾರೆ. ಇಂಥ ದುರಾಶೆಗಳು ಮನುಷ್ಯರನ್ನು ಕೇಡಿಗೂ ವಿನಾಶಕ್ಕೂ ಒಯ್ಯುತ್ತವೆ. ಹಣದ ವ್ಯಾಮೋಹವೇ ಎಲ್ಲಾ ಕೇಡುಗಳಿಗೂ ಮೂಲ. ಹಣದ ವ್ಯಾಮೋಹದಿಂದಲೇ ಹಲವರು ವಿಶ್ವಾಸದಿಂದ ದೂರ ಸರಿದು, ತಮ್ಮ ಹೃದಯಗಳನ್ನು ಹಲತರದ ತಿವಿತಗಳಿಗೆ ಗುರಿಮಾಡುತ್ತಾರೆ. ದೇವರ ಭಕ್ತನಾದ ನೀನು ಈ ಎಲ್ಲಾ ಕೇಡುಗಳಿಂದ ದೂರವಿರು. ದೇವರೊಡನೆ ಸತ್ಸಂಬಂದ, ಭಕ್ತಿ, ವಿಶ್ವಾಸ, ಪ್ರೀತಿ, ಸ್ಥಿರಚಿತ್ತ, ಸಾತ್ವಿಕತೆ - ಇವೇ ಮೊದಲಾದ ಸದ್ಗುಣಗಳನ್ನು ಸಂಪಾದಿಸಲು ಪ್ರಯತ್ನಿಸು. ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ವಿಶ್ವಾಸವೆಂಬ ಪಂದ್ಯದಲ್ಲಿ ಉತ್ತಮ ಓಟಗಾರನಾಗಿ ಓಡು. ಇದಕ್ಕಾಗಿಯೇ ದೇವರು ನಿನ್ನನ್ನು ಆರಿಸಿಕೊಂಡರೆಂಬುದನ್ನು ಮರೆಯಬೇಡ. ಈ ಗುರಿಯನ್ನು ಮುಂದಿಟ್ಟುಕೊಂಡೇ ನೀನು ಅನೇಕರ ಮುಂದೆ ವಿಶ್ವಾಸಪ್ರಮಾಣ ಮಾಡಿರುವೆ.
ಕೀರ್ತನೆ: 49:6-7, 8-10, 17-18, 19-20
ಶ್ಲೋಕ: ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು
ಅವರ ಭರವಸೆ ಸಿರಿಸಂಪತ್ತಿನಲಿ I
ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ II
ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ I
ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ II
ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ I
ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ II
ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ I
ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ II
ಬುದ್ಧಿಜೀವಿಗಳೂ ಸಾಯುವುದು ಖಂಡಿತ I
ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ I
ಅವರ ಸೊತ್ತು ಪರರ ಪಾಲು, ಇದೂ ಖಚಿತ II
ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ I
ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ II
ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ I
ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ II
ಸೇರದಿರನಾತ ಪಿತೃಗಳಧೋಗತಿಯನು I
ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು II
ನೆಲೆಯಾಗಿರನು ಪಟ್ಟಪದವಿಯಲಿ I
ನಾಶವಾಗುವನು ಪಶುಪ್ರಾಣಿಗಳ ಪರಿ II
ಶುಭಸಂದೇಶ: ಲೂಕ 8:1-3
ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರ ಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು. ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು, ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು.
No comments:
Post a Comment