ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

11.09.23 -"ನಿನ್ನ ಕೈಯನ್ನು ಚಾಚು"

 ಮೊದಲನೇ ವಾಚನ: ಕೊಲೊಸ್ಸೆಯರಿಗೆ: 1:24-2:3


ಸಹೋದರರೇ, ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು. ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತ ಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ. ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ. ಯುಗಯುಗಾಂತರಗಳಿಂದಲೂ ತಲತಲಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯವನ್ನು, ಅಂದರೆ ತಮ್ಮ ವಾಕ್ಯವನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ. ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತ ಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ. ನಾವು ಸಾರುತ್ತಲಿರುವುದೂ  ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಬುದ್ಧಿ ಹೇಳುತ್ತಾ ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ದೇವರ ಮುಂದೆ ಎಲ್ಲರನ್ನು ಕ್ರಿಸ್ತ ಯೇಸುವಿನಲ್ಲಿ ಪರಿಣತರನ್ನಾಗಿ ಊರ್ಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನನ್ನನ್ನು ಚೇತನಗೊಳಿಸುತ್ತಿರುವ ಯೇಸುಕ್ರಿಸ್ತರ ಶಕ್ತಿಯಿಂದ ಈ ಗುರಿಯನ್ನು ಸಾಧಿಸಲು ಶ್ರಮವಹಿಸಿ ಹೋರಾಡುತ್ತಿದ್ದೇನೆ. ನಿಮಗಾಗಿಯೂ ಲವೊದಿಕೀಯರಿಗಾಗಿಯೂ ಹಾಗೂ ನನ್ನ ನೇರ ಪರಿಚಯ ಇಲ್ಲದವರಿಗಾಗಿಯೂ ನಾನು ಎಷ್ಟು ಶ್ರಮಿಸುತ್ತಿದ್ದೇನೆಂಬುದನ್ನು ತಿಳಿಯಬಯಸುತ್ತೇನೆ. ಇದರಿಂದ ಅವರು ಅಂತರಂಗದಲ್ಲಿ ಉತ್ತೇಜನಗೊಂಡು ಪ್ರೀತಿಯಲ್ಲಿ ಒಂದಾಗಬೇಕು; ನೈಜ ಅರಿವಿನಿಂದ ಅವರಿಗೆ ಪೂರ್ಣಜ್ಞಾನ ಲಭಿಸಬೇಕು ಎಂಬುದೇ ನನ್ನ ಆಶಯ. ಆಗ ಅವರು ದೇವರ ರಹಸ್ಯವನ್ನು, ಅಂದರೆ ಕ್ರಿಸ್ತ ಯೇಸುವನ್ನು ಅರಿತುಕೊಳ್ಳಲು ಸಾಧ್ಯ. ಕ್ರಿಸ್ತ ಯೇಸುವಿನಲ್ಲಿಯೇ ಜ್ಞಾನ, ವಿವೇಕ ಎಂಬ ಸಿರಿಸಂಪತ್ತು ಅಡಗಿದೆ.

ಕೀರ್ತನೆ: 62:6-7,9
ಶ್ಲೋಕ: ಭದ್ರವಾದ ಬಂಡೆ, ನನಗಾಶ್ರಯ ದೇವನೇ

ಆತನೆನಗೆ ದುರ್ಗ, ರಕ್ಷಕ, ಶರಣು I
ನಾನೆಂದಿಗೂ ಕದಲಿ ಬೀಳೆನು II
ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ I
ಭದ್ರವಾದ ಬಂಡೆ, ನನಗಾಶ್ರಯ ಆತನೆ II

ನರಮಾನವರೆಲ್ಲರು ಬರೇ ಉಸಿರು I
ನರಾಧಿಪತಿಗಳು ತೀರಾ ಹುಸಿಯು I
ತ್ರಾಸಿನಲಿ ತೂಗಲು ಅವರೆಲ್ಲರು I
ಉಸಿರಿಗಿಂತಲೂ ಅತ್ಯಂತ ಹಗುರು II


ಶುಭಸಂದೇಶ: ಲೂಕ 6:6-11


ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶ ಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿಹೋಗಿದ್ದ ಒಬ್ಬಾತ ಇದ್ದನು. ಅವನನ್ನು  ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈಯುಳ್ಳವನಿಗೆ, "ಬಂದು ಇಲ್ಲಿ ನಿಲ್ಲು," ಎಂದರು. ಅವನು ಎದ್ದು ಬಂದು ನಿಂತನು. ಆಗ ಯೇಸು ಅವರಿಗೆ, "ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?" ಎಂದರು. ಆನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆ ತಿರುಗಿ, "ನಿನ್ನ ಕೈಯನ್ನು ಚಾಚು," ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು.

7 comments: