ಮೊದಲನೇ ವಾಚನ : 1 ತಿಮೋಥಿ 1:15-17
ಕ್ರಿಸ್ತಯೇಸು, ಪಾಪಿಗಳ ಉದ್ಧಾರಕ್ಕಾಗಿ ಈ ಲೋಕಕ್ಕೆ ಬಂದರು ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು. ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ. ಸರ್ವಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೆ ಗೌರವವೂ ಮಹಿಮೆಯೂ ಸಲ್ಲಲಿ! ಆಮೆನ್.
ಕೀರ್ತನೆ: 113: 1-7
ಶ್ಲೋಕ: ಪ್ರಭುವಿನ ಸಿರಿನಾಮವು ಇಂದಿಗೂ ಎಂದೆಂದಿಗೂ ಪೂಜ್ಯ
ಪ್ರಭುವಿನ ನಾಮ ಸ್ತುತಿಯನು ಮಾಡಿ II
ಪ್ರಭುವಿನ ಸಿರಿನಾಮವು ಪೂಜ್ಯ I
ಇಂದಿಗೂ ಎಂದೆಂದಿಗೂ ಪೂಜ್ಯ II
ಪ್ರಭುವಿನಾ ಸಿರಿನಾಮವು ಸ್ತುತ್ಯ I
ಪೂರ್ವ ಪಶ್ಚಿಮದವರೆಗೂ ಸ್ತುತ್ಯ II
ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ I
ಆತನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ II
ನಮ್ಮ ಪ್ರಭು ದೇವನಂತೆ ಯಾರು ಸಮರ್ಥ I
ಉನ್ನತದಲಿ ಆಸನಾರೂಢನು ಆತ I
ಇಹಪರಗಳನು ವೀಕ್ಷಿಸಲಾತ ಶಕ್ತ II
ದೀನರನು ಎಬ್ಬಿಸುವನು ಧೂಳಿನಿಂದ I
ಬಡವರನು ಎತ್ತುವನು ತಿಪ್ಪೆಯಿಂದ II
ಶುಭಸಂದೇಶ: ಲೂಕ 6:43-49
ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ. “ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ? ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನೂ ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ: ಆಳವಾಗಿ ಅಡಿಪಾಯ ತೆಗೆದು, ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ, ಮನೆಕಟ್ಟಿದವನಿಗೆ ಅವನು ಸಮಾನನು; ಹುಚ್ಚು ಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ. ಕಾರಣ - ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು. ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದೆ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಪ್ರವಾಹವು ಅಪ್ಪಳಿಸಿದಾಗ ಒಡನೆಯೇ ಅದು ಕುಸಿದು ಬಿತ್ತು. ಆ ಮನೆಗೆ ಒದಗಿದ ಪತನವೋ ವಿಪರೀತ!” ಎಂದರು.
No comments:
Post a Comment