ಮೊದಲನೆಯ ವಾಚನ: ಹಗ್ಗಾಯ 1:1-8
ಪರ್ಷಿಯಾದ ಚಕ್ರವರ್ತಿಯಾದ ಡೇರಿಯಸ್ ಅವನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳ ಮೊದಲನೆಯ ದಿನದಂದು ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರಸ್ವಾಮಿ ನೀಡಿದ ದೈವೋಕ್ತಿ: ಅದು ಶೆಯಲ್ತಿಯೇಲನ ಮಗನೂ ಜುದೇಯ ನಾಡಿನ ದೇಶಾಧಿಪತಿಯೂ ಆದ ಜೆರುಬ್ಬಾಬೆಲನನ್ನು ಮತ್ತು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನನ್ನು ಉದ್ದೇಶಿಸಿ ಕೊಡಲಾದ ಸಂದೇಶವಾಗಿತ್ತು. ಸೇನಾಧೀಶ್ವರರಾದ ಸರ್ವೇಶ್ವರ ಇಂತೆನ್ನುತ್ತಾರೆ : "ಮಹಾದೇವಾಲಮವನ್ನು ಪುನಃ ಕಟ್ಟುವುದಕ್ಕೆ ಸಮಯ ಇನ್ನೂ ಬಂದಿಲ್ಲ ಎಂದುಕೊಳ್ಳುತ್ತಾರೆ ಈ ಜನರು. " ಆಗ ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರ ಕೊಟ್ಟ ಸಂದೇಶವೇನೆಂದರೆ : " ನನ್ನ ಆಲಯ ಹಾಳುಬಿದ್ದಿರುವಾಗ ನೀವು ಸೊಗಸಾದ ಹಲಗೆ ಹೊದಿಸಿದ ಮನೆಗಳಲ್ಲಿ ವಾಸಿಸುವುದು ಸರಿಯೋ ? ನಮಗೆ ಒದಗಿರುವ ಪರಿಸ್ಥಿತಿಯನ್ನು ಆಲೋಚಿಸಿ ನೋಡಿ. ನೀವು ಬಿತ್ತಿದ ಬೀಜ ಬಹಳ, ಪಡೆದ ಫಲ ವಿರಳ, ತಿನ್ನುತ್ತೀರಿ, ಆದರೆ ತೃಪ್ಪಿಯಿಲ್ಲ, ಕುಡಿಯುತ್ತೀರಿ, ಆದರೆ ದಾಹ ನೀಗುವುದಿಲ್ಲ. ಹೊದೆಯುತ್ತೀರಿ, ಆದರೆ ಚಳಿ ಹೋಗುವುದಿಲ್ಲ. ದುಡಿಮೆಗಾರನ ದುಡ್ಡಿನ ಚೀಲ ತೂತಿನ ಚೀಲ, " ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ : " ನಿಮಗೆ ಒದಗಿರುವ ಪರಿಸ್ಥಿತಿಯನ್ನು ಕುರಿತು ಆಲೋಚಿಸಿ ನೋಡಿ. ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ. ಆಗ ನಾನು ಪ್ರಸನ್ನನಾಗುವೆನು. ನನ್ನ ಮಹಿಮೆಯನ್ನು ಪ್ರಕಟಿಸುವೆನು, " ಎಂದು ನುಡಿಯುತ್ತಾರೆ ಸ್ವಾಮಿ.
ಕೀರ್ತನೆ 149:1-2, 3-4, 5-6, 9
ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು.
ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು|
ಭಕ್ತರ ಸಭೆಯಲಿ ಸ್ತುತಿ ಮಾಡಿರಿ ಆತನನು||
ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು|
ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು||
ಆತನ ನಾಮವನು ಕೀರ್ತಿಸಲಿ ಕುಣಿತದಿಂದ|
ಆತನನು ಭಜಿಸಲಿ ತಮಟೆ ಕಿನ್ನರಿಗಳಿಂದ||
ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು|
ಜಯಶೀಲರನ್ನಾಗಿಸುತ್ತಾನೆ ದೀನದಲಿತರನು||
ಹಿಗ್ಗಲಿ ಭಕ್ತಾದಿಗಳು ದೂರೆತ ವಿಜಯದಲಿ|
ಜಯಕಾರ ಮಾಡಲಿ ತಮ್ಮತಮ್ಮ ಶಿಬಿರಗಳಲಿ||
ಇರಲಿ ಪ್ರಭುವಿನ ಸ್ತೋತ್ರ ಅವರ ಬಾಯಲಿ|
ಇದು ತರಲಿ ಭಕ್ತರೆಲ್ಲರಿಗೆ ಗೌರವವನು||
ಶುಭಸಂದೇಶ: ಲೂಕ 9:7-9
ಆ ಕಾಲದಲ್ಲಿ, ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತ ರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ' ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ ' ಎಂದು ಕೆಲವರೂ, ' ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ ' ಎಂದು ಕೆಲವರೂ, ' ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ ' ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು. ಹೆರೋದನಾದರೋ, ' ಯೊವಾನ್ನನೇ ? ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ ! ಮತ್ತೆ ಇವನಾರು ? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲ ಕೇಳುತ್ತಾ ಇರುವೆನಲ್ಲಾ ! ' ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು.
No comments:
Post a Comment