ಮೊದಲನೆಯ ವಾಚನ: ಎಜ್ರ 1:1-6
ಸೈರಸನು ಪರ್ಷಿಯ ದೇಶದ ಅರಸ. ಆತನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸಿದರು. ಅದಕ್ಕಾಗಿಯೇ ಅರಸ ಸೈರಸನನ್ನು ಪ್ರೇರೇಪಿಸಿ ಅವನ ರಾಜ್ಯದಲ್ಲೆಲ್ಲಾ ಡಂಗುರ ಹಾಗು ಪತ್ರಗಳ ಮೂಲಕ ಹೀಗೆ ಪ್ರಕಟಿಸುವಂತೆ ಮಾಡಿದರು: " ಪರ್ಷಿಯ ರಾಜನಾದ ಸೈರಸೆಂಬ ನನ್ನ ಮಾತನ್ನು ಕೇಳಿರಿ: ಪರಲೋಕ ದೇವರಾದ ಸರ್ವೇಶ್ವರ ಭೂಲೋಕದ ಎಲ್ಲ ರಾಜ್ಯಗಳನ್ನು ನನಗೆ ಕೊಟ್ಟಿದ್ದಾರೆ, ' ನನಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟಿಸಬೇಕು ' ಎಂದು ಅವರು ಆಜ್ಞಾಪಿಸಿದ್ದಾರೆ. ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅಂಥವರು ಜುದೇಯ ನಾಡಿನ ಜೆರುಸಲೇಮಿನಲ್ಲಿ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ, ಒಂದು ದೇವಾಲಯವನ್ನು ಕಟ್ಟಲಿ, ಅವರ ಸಂಗಡ ಅವರ ದೇವರಿರಲಿ! ಸೆರೆಯಾಳುಗಳಾಗಿ ಅಳಿದುಳಿದವರು ಯಾವ ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರಿನ ಜನರು ಜೆರುಸಲೇಮಿನ ದೇವಾಲಯಕ್ಕಾಗಿ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕುಸಾಮಗ್ರಿ, ಪ್ರಾಣಿಪಶು, ಇವುಗಳನ್ನು ಕೊಟ್ಟು ಅವರಿಗೆ ಸಹಾಯ ಮಾಡಲಿ, " ಎಂದು ಪ್ರಚುರಪಡಿಸಿದನು. ಈ ಪ್ರಕಟನೆಯನ್ನು ಕೇಳಿ, ಯೆಹೂದ ಮತ್ತು ಬೆನ್ಯಾಮಿನ್ ಗೋತ್ರಕ್ಕೆ ಸೇರಿದ ಮುಖ್ಯಸ್ಥರು, ಯಾಜಕರು, ಲೇವಿಯರು ಹಾಗು ದೈವಪ್ರೇರಿತರಾದ ಎಲ್ಲರೂ ಜೆರುಸಲೇಮಿನಲ್ಲಿ ಸರ್ವೇಶ್ವರನಿಗೆ ಪುನಃ ಆಲಯಕಟ್ಟುವುದಕ್ಕಾಗಿ ಹೊರಟರು. ಅವರ ನೆರೆಯವರೆಲ್ಲರು ಕೊಡುಗೆಗಳನ್ನು ಕೊಟ್ಟರು, ಬೆಳ್ಳಿ ಸಾಮಾನುಗಳು, ಬಂಗಾರದ ಆಭರಣಗಳು, ಪಶುಪ್ರಾಣಿಗಳು, ಶ್ರೇಷ್ಠವಸ್ತುಗಳು, ಇತ್ಯಾದಿಗಳನ್ನು ನೀಡಿ ಸಹಕರಿಸಿದರು.
ಕೀರ್ತನೆ 126:1-3, 5-6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ ||
ಸೆರೆಯಿಂದೆಮ್ಮನು ಪ್ರಭು ಸಿಯೋನಿಗೆ ಮರಳಿಸಿದಾಗ|
ಅದೊಂದು ಕನಸು ಕಂಡಂಡಿತ್ತು ನಮಗೆ ಆವಾಗ|
ಉಕ್ಕಿತಾಗ ಮುಖತುಂಬ ನಗು, ಬಾಯ್ತುಂಬ ಹರ್ಷಗೀತೆ||
ಎಂಥ ಮಹತ್ಕಾರ್ಯವೆಸಗಿದನಾ ಪ್ರಭು ಇವರ ಪರತೆ|
ಇಂತೆಂದು ಆಡಿಕೊಂಡರು ತಂತಮ್ಮೊಳಗೆ ಅನ್ಯಜನತೆ||
ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ|
ಎಂತಲೇ ನಾವಾನಂದಭರಿತರಾಗುವುದು ಉಚಿತ||
ಅಳುತಳುತಾ ಬಿತ್ತುವವರು|
ನಲಿನಲಿಯುತ್ತಾ ಕೊಯ್ಯುವರು||
ದುಃಖಿಸುತ್ತಾ ಬೀಜಬಿತ್ತಲು ಹೋದವನು|
ಹರ್ಷಿಸುತ್ತಾ ಕೊಯ್ದುತರುವನು ತೆನೆಗಳನು||
ಶುಭಸಂದೇಶ: ಲೂಕ 8:16-18
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: " ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ, ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ. ಬಟ್ಟಬಯಲಾಗದ ಮುಚ್ಚುಮರೆಯಿಲ್ಲ, ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ. ಆದ್ದರಿಂದ ನೀವು ಕಿವಿಗೊಡುವಾಗ ಎಚ್ಚರಿಕೆಯಿಂದಿರಿ, ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ."
No comments:
Post a Comment