ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.06.22 - "ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11

ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು). ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು. ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು. ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು. ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು. ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದುಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.

ಕೀರ್ತನೆ: 34:2-3, 4-5, 6-7, 8-9

ಶ್ಲೋಕ: ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು

ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 17-18

ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮೀಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್.

ಶುಭಸಂದೇಶ: ಮತ್ತಾಯ 16:13-19


ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು. ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,

No comments:

Post a Comment