ಪಂಚಾಶತ್ತಮ ಮಹೋತ್ಸವ
ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:1-11

ಪಂಚಾಶತ್ತಮ ಹಬ್ಬದ ದಿನ ಭಕ್ತವಿಶ್ವಾಸಿಗಳೆಲ್ಲರೂ ಒಂದು ಸ್ಥಳದಲ್ಲಿ ಸಭೆಸೇರಿದ್ದರು. ಫಕ್ಕನೆ ಬಲವಾದ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಶಬ್ದವೊಂದು ಆಕಾಶದಿಂದ ಕೇಳಿಬಂತು. ಅದು ಅವರು ಕುಳಿತಿದ್ದ ಮನೆಯಲ್ಲೆಲ್ಲಾ ಮಾರ್ದನಿಸಿತು. ಅಲ್ಲದೆ ಅಗ್ನಿಜ್ವಾಲೆಗಳು ಕೆನ್ನಾಲಿಗೆಯಂತೆ ಕಾಣಿಸಿಕೊಂಡವು. ಅವು ವಿಂಗಡ ವಿಂಗಡವಾಗಿ ಪ್ರತಿಯೊಬ್ಬರ ಮೇಲೂ ನೆಲೆಸಿದವು. ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಆ ಆತ್ಮಪ್ರೇರಣೆಯಿಂದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡತೊಡಗಿದರು. ಅದೇ ಸಮಯದಲ್ಲಿ ವಿಶ್ವದ ಎಲ್ಲಾ ದೇಶಗಳಿಂದ ಧರ್ಮನಿಷ್ಠ ಯೆಹೂದ್ಯರು ಜೆರುಸಲೇಮಿಗೆ ಬಂದು ತಂಗಿದರು. ಆ ಶಬ್ದವನ್ನು ಕೇಳಿದ್ದೇ, ಜನರ ದೊಡ್ಡ ಗುಂಪು ಸೇರಿತು. ಭಕ್ತಾದಿಗಳು ಮಾತನಾಡುತ್ತಿದ್ದುದನ್ನು ತಮ್ಮ ತಮ್ಮ ಭಾಷೆಗಳಲ್ಲೇ ಕೇಳಿದ ಜನರು ದಿಗ್ಭ್ರಮೆಗೊಂಡರು. ಅವರೆಲ್ಲರೂ ವಿಸ್ಮಿತರಾಗಿ, “ಹೀಗೆ ಮಾತನಾಡುವ ಇವರೆಲ್ಲಾ ಗಲಿಲೇಯದವರಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನೂ ಇವರು ಮಾತನಾಡುತ್ತಿರುವುದನ್ನು ತನ್ನ ತನ್ನ ಮಾತೃಭಾಷೆಯಲ್ಲೇ ಕೇಳುತ್ತಿರುವುದು ಹೇಗೆ? ನಮ್ಮಲ್ಲಿ ಪಾರ್ಥಿಯರು, ಮೀಡಿಯರು ಮತ್ತು ಎಲಾಮಿನವರೂ, ಮೆಸಪೊಟೇಮಿಯ, ಜುದೇಯ ಮತ್ತು ಕಪ್ಪದೋಸಿಯದವರೂ ಇದ್ದಾರೆ. ಪೊಂತ ಮತ್ತು ಏಷ್ಯದವರೂ, ಫ್ರಿಜಿಯ ಮತ್ತು ಪಾಂಫಿಲಿಯದವರೂ ಇದ್ದಾರೆ. ಈಜಿಪ್ಟ್ ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರೂ ಸೇರಿದ್ದಾರೆ. ಅದಲ್ಲದೆ ನಮ್ಮಲ್ಲಿ ಕೆಲವರು ರೋಮ್ನಿಂದ ಬಂದಿದ್ದಾರೆ. ಯೆಹೂದ್ಯರೂ ಯೆಹೂದ್ಯ ಧರ್ಮಾವಲಂಬಿಗಳೂ ಆದ ಅನ್ಯರೂ, ಕ್ರೇಟ್ ಮತ್ತು ಅರೇಬಿಯದವರೂ ಇಲ್ಲಿದ್ದಾರೆ. ದೇವರ ಮಹತ್ಕಾರ್ಯಗಳನ್ನು ಕುರಿತು ಇವರು ಮಾತನಾಡುತ್ತಿರುವುದನ್ನು ನಾವೆಲ್ಲರೂ ನಮ್ಮ ನಮ್ಮ ಭಾಷೆಗಳಲ್ಲೇ ಕೇಳುತ್ತಿದ್ದೇವಲ್ಲಾ!” ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.
ಕೀರ್ತನೆ: 104:1, 24, 29-30, 31, 34
ಶ್ಲೋಕ: ನೀ ಉಸಿರನ್ನೂದಲು ಹೊಸದಾಗುವುವು, ಪುನಶ್ಚೇತನಗೊಳುವುದು ಜಗವೆಲ್ಲವು
ಎರಡನೇ ವಾಚನ: 1 ಕೊರಿಂಥಿಯರಿಗೆ 12:3-7, 12-13
ಸಹೊದರರೇ, ಇಷ್ಟುಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು. ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ. ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ. ಶಕ್ತಿಸಾಮರ್ಥ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ. ಪ್ರತಿಯೊಬ್ಬನಲ್ಲಿ ಕಂಡುಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ. ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು. ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ-ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.
ಶುಭಸಂದೇಶ ಯೊವಾನ್ನ 20:19-23
ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು. “ನಿಮಗೆ ಶಾಂತಿ” ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು. ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೇ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು.
No comments:
Post a Comment