ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.06.22 - "ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು"

ಮೊದಲನೇ ವಾಚನ: ಯೆಜೆಕಿಯೇಲ 34:11-16

ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. ಮಂದೆಯ ಕುರುಬನು ಸುತ್ತಮುತ್ತಲು ಚದುರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲ ಸ್ಥಳಗಳಿಂದ ಬಿಡಿಸಿ, ಜನಾಂಗಗಳ ವಶದಿಂದ ತಪ್ಪಿಸಿ, ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ ಇಸ್ರಯೇಲಿನ ಬೆಟ್ಟಗಳಲ್ಲೂ, ತೊರೆಗಳ ಬಳಿಯಲ್ಲೂ ನಾಡಿನ ಎಲ್ಲಹಕ್ಕೆಗಳಲ್ಲೂ ಮೇಯಿಸುವೆನು; ಅವುಗಳಿಗೆ ಒಳ್ಳೆಯ ಮೇವನ್ನು ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅಲ್ಲಿ ಒಳ್ಳೆಯ ತೆವರಿನಲ್ಲಿ ಮಲಗುವುವು;  ಇಸ್ರಯೇಲಿನ ಬೆಟ್ಟಗಳಲ್ಲಿ ಹಸಿಹುಲ್ಲನ್ನು ಮೇಯುವುವು. ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ. "ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ದ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.

ಕೀರ್ತನೆ: 23:1-3, 4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ಎನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?

ಎರಡನೇ ವಾಚನ: ರೋಮನರಿಗೆ 5:5-11

ಸಹೋದರರೇ, ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ  ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ. ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ  ನಾವಿನ್ನೂ  ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ. ಕ್ರಿಸ್ತಯೇಸುವಿನ  ರಕ್ತಧಾರೆಯಿಂದ ನಾವೀಗ ದೇವರೊಡನೆ ಸತ್ಸಂಬಂಧದಲ್ಲಿದ್ದೇವೆ. ಹೀಗಿರಲಾಗಿ, ಬರಲಿರುವ ದೈವಕೋಪಾಗ್ನಿಯಿಂದ ಯೇಸುಕ್ರಿಸ್ತರ ಮುಖಾಂತರವೇ ಪಾರಾಗುತ್ತೇವೆ ಎಂಬುದು ಮತ್ತಷ್ಟು ನಿಶ್ಚಯವಲ್ಲವೆ? ನಾವು ದೇವರಿಗೆ ಶತ್ರುಗಳಾಗಿದ್ದರೂ ಅವರು ತಮ್ಮ ಮಗನ ಮರಣದ ಮೂಲಕ ನಮ್ಮನ್ನು ತಮ್ಮೊಡನೆ ಸಂಧಾನಗೊಳಿಸಿ ಮಿತ್ರರನ್ನಾಗಿ ಮಾಡಿಕೊಂಡರು. ನಾವೀಗ ದೇವರ ಮಿತ್ರರಾಗಿರುವುದರಿಂದ, ಕ್ರಿಸ್ತಯೇಸುವಿನ ಜೀವದ ಮೂಲಕ ಉದ್ದಾರ ಹೊಂದುತ್ತೇವೆ ಎಂಬುದು ಮತ್ತಷ್ಟು ಖಚಿತವಲ್ಲವೆ? ಅಷ್ಟೆ ಅಲ್ಲದೆ, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರು ನಮ್ಮನ್ನು ಮಿತ್ರರನ್ನಾಗಿಸಿರುವುದರಿಂದ ಅವರ ಮೂಲಕವೇ ನಾವು ದೇವರಲ್ಲಿ ಹೆಮ್ಮೆಪಡುತ್ತೇವೆ.

ಶುಭಸಂದೇಶ: ಲೂಕ  15:3-7


ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳಿವೆಯೆನ್ನೋಣ.  ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. "ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ, ಅಲ್ಲವೇ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ  ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

No comments:

Post a Comment