ಮೊದಲನೇ ವಾಚನ: 1 ಅರಸುಗಳು 18:20-39

ಅಹಾಬನು ಇಸ್ರಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು. ಎಲೀಯನು ಜನರೆಲ್ಲರ ಬಳಿಗೆ ಹೋಗಿ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಸರ್ವೇಶ್ವರಸ್ವಾಮಿ ನಿಮಗೆ ದೇವರಾಗಿದ್ದರೆ ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ,” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡು, ಅವನು ಮತ್ತೆ ಅವರಿಗೆ, “ಸರ್ವೇಶ್ವರನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ; ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತುಮಂದಿ ಇದ್ದಾರೆ. ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ; ಅವುಗಳಲ್ಲೊಂದನ್ನು ಆರಿಸಿಕೊಂಡು, ಕಡಿದು ತುಂಡುಮಾಡಿ ಕಟ್ಟಿಗೆಯ ಮೇಲಿಡಲಿ; ಆದರೆ ಬೆಂಕಿ ಹೊತ್ತಿಸಬಾರದು. ನಾನೂ ಇನ್ನೊಂದು ಹೋರಿಯನ್ನು ಹಾಗೆಯೇ ಕಡಿದು ಬೆಂಕಿ ಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು. ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಅನಂತರ ನಾನು ಸರ್ವೇಶ್ವರನ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದು ನಿಶ್ಚಯಿಸೋಣ,” ಎಂದನು. ಜನರೆಲ್ಲರು, “ಸರಿ, ನೀನು ಹೇಳಿದಂತೆಯೇ ಆಗಲಿ,” ಎಂದು ಉತ್ತರಕೊಟ್ಟರು. ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚುಮಂದಿ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು, ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಆದರೆ ಬೆಂಕಿಯನ್ನು ಹೊತ್ತಿಸಕೂಡದು,” ಎಂದನು. ಅಂತೆಯೇ ತರಲಾದ ಹೋರಿಗಳಲ್ಲಿ ಒಂದನ್ನು ಅವರು ತೆಗೆದುಕೊಂಡು ಸಿದ್ಧಪಡಿಸಿದರು. ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ, ನಮಗೆ ಕಿವಿಗೊಡು,” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರು. ಆದರೆ ಯಾವ ವಾಣಿಯೂ ಕೇಳಿಸಲಿಲ್ಲ; ಅವರು ಪೀಠದ ಸುತ್ತಲೂ ಕುಣಿದಾಡಿದರು. ಆದರೂ ಯಾರೂ ಉತ್ತರಕೊಡಲಿಲ್ಲ. ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿದನು: “ಗಟ್ಟಿಯಾಗಿ ಕೂಗಿರಿ; ಅವನು ದೇವರಲ್ಲವೆ? ಈಗ ಒಂದು ವೇಳೆ ಅವನು ಧ್ಯಾನದಲ್ಲಿ ಇರಬಹುದು; ಇಲ್ಲವೇ, ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು; ಇಲ್ಲದಿದ್ದರೆ, ನಿದ್ರೆಮಾಡುತ್ತಿರಬೇಕು; ಎಚ್ಚರವಾಗಲಿ,” ಎಂದು ಹೇಳಿದನು. ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು. ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಿದ್ದರು. ಆದರೂ ಯಾವ ವಾಣಿಯೂ ಕೇಳಿಸಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ; ಅವರನ್ನು ಯಾವನೂ ಲಕ್ಷಿಸಲೂ ಇಲ್ಲ. ಅನಂತರ ಎಲೀಯನು ಜನರೆಲ್ಲರನ್ನು ಹತ್ತಿರಕ್ಕೆ ಕರೆದನು; ಅವರು ಬಂದರು. ಹಾಳಾಗಿದ್ದ ಅಲ್ಲಿನ ಸರ್ವೇಶ್ವರನ ಪೀಠವನ್ನು ದುರಸ್ತು ಮಾಡಿಸಿದನು. ಸರ್ವೇಶ್ವರನಿಂದ ‘ಇಸ್ರಯೇಲ್’ ಎಂಬ ಹೆಸರು ಹೊಂದಿದ ಯಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಸರ್ವೇಶ್ವರನ ಹೆಸರಿಗಾಗಿ ಒಂದು ಪೀಠವನ್ನು ಕಟ್ಟಿಸಿದನು. ಅದರ ಸುತ್ತಲೂ ಇಪ್ಪತ್ತು ಸೇರು ಬೀಜವರೀ ನೆಲವನ್ನು ಅಗಿಸಿ ಕಾಲುವೆ ಮಾಡಿಸಿದನು. ಕಟ್ಟಿಗೆಯನ್ನು ಪೀಠದ ಮೇಲೆ ಪೇರಿಸಿ, ಹೋರಿಯನ್ನು ವಧಿಸಿ ತುಂಡುಮಾಡಿ, ಅದರ ಮೇಲೆ ಇಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಬಲಿಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಹೊಯ್ಯಿರಿ,” ಎಂದು ಆಜ್ಞಾಪಿಸಿದನು. ಅವರು ಅಂತೆಯೇ ತೆಗೆದುಕೊಂಡು ಬಂದರು. “ಇನ್ನೊಂದು ಸಾರಿ ತನ್ನಿ,” ಎಂದು ಹೇಳಿದನು. ಅವರು ಇನ್ನೊಮ್ಮೆ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರ ಆಜ್ಞಾಪಿಸಲು ಅವರು ಮತ್ತೊಮ್ಮೆ ತಂದು ಸುರಿದರು. ನೀರು ವೇದಿಯ ಸುತ್ತಲೂ ಹರಿಯಿತು. ಇದಲ್ಲದೆ, ಅವನು ಕಾಲುವೆಯನ್ನೂ ನೀರಿನಿಂದ ತುಂಬಿಸಿದನು. ಸಂಧ್ಯಾನೈವೇದ್ಯದ ಹೊತ್ತಿಗೆ, ಪ್ರವಾದಿ ಎಲೀಯನು ಪೀಠದ ಹತ್ತಿರ ಬಂದು, “ಅಬ್ರಹಾಮ್, ಇಸಾಕ್, ಇಸ್ರಯೇಲರ ದೇವರೇ, ಸರ್ವೇಶ್ವರಾ, ನೀವೊಬ್ಬರೇ ಇಸ್ರಯೇಲರ ದೇವರಾಗಿರುತ್ತೀರಿ ಎಂಬುದನ್ನು, ನಾನು ನಿನ್ನ ದಾಸನಾಗಿರುತ್ತೇನೆಂಬುದನ್ನು ಹಾಗು ಇದನ್ನೆಲ್ಲಾ ನಿಮ್ಮ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನು ಈ ದಿನ ತೋರಿಸಿಕೊಡಿ. ನಮಗೆ ಕಿವಿಗೊಡಿ; ಸರ್ವೇಶ್ವರಾ ನಮಗೆ ಕಿವಿಗೊಡಿ; ಸರ್ವೇಶ್ವರನಾದ ನೀವೊಬ್ಬರೇ ದೇವರು ಹಾಗು ಈ ಜನರ ಮನಸ್ಸನ್ನು ನಿಮ್ಮಕಡೆಗೆ ತಿರುಗಿಸಿಕೊಳ್ಳುವವರು ಆಗಿರುತ್ತೀರಿ ಎಂಬುದನ್ನು ಇವರಿಗೆ ತಿಳಿಯಪಡಿಸಿ,” ಎಂದು ಪ್ರಾರ್ಥಿಸಿದನು. ಕೂಡಲೆ ಸರ್ವೇಶ್ವರನ ಕಡೆಯಿಂದ ಬೆಂಕಿ ಇಳಿದುಬಂದು ಬಲಿಮಾಂಸವನ್ನೂ ಕಟ್ಟಿಗೆ ಕಲ್ಲುಮಣ್ಣುಗಳನ್ನೂ ದಹಿಸಿಬಿಟ್ಟಿತು. ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಬೋರಲಬಿದ್ದರು; “ಸರ್ವೇಶ್ವರನೇ ದೇವರು, ಸರ್ವೇಶ್ವರನೇ ದೇವರು,” ಎಂದು ಕೂಗಿದರು
ಕೀರ್ತನೆ: 4:2-3, 4-5, 7-8
ಶ್ಲೋಕ: ನೀಡು ದೇವಾ, ರಕ್ಷಣೆಯನು, ನಾ ನಿನಗೆ ಶರಣಾಗತನು
ಶುಭಸಂದೇಶ: ಮತ್ತಾಯ 5:17-19
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು."
No comments:
Post a Comment