ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.06.22 - “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,”

ಮೊದಲನೇ ವಾಚನ: 2 ಅರಸುಗಳು 25:1-12

ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು. ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು. ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು. ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿಹೋಗಿದ್ದರು. ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು. ಇವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು. ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು. ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು. ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತುಗೋಡೆಗಳನ್ನೆಲ್ಲ ಕೆಡವಿದರು. ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು. ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.

ಕೀರ್ತನೆ: 137:1-2, 3, 4-5, 6

ಶ್ಲೋಕ: ಜೆರುಸಲೇಮನು ನಾ ಸ್ಮರಣೆಮಾಡದಿದ್ದಲಿ, ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ

ಶುಭಸಂದೇಶ: ಮತ್ತಾಯ 8:1-4


ಯೇಸುಸ್ವಾಮಿ ಬೆಟ್ಟದಿಂದ ಇಳಿದುಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, “ಸ್ವಾಮೀ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ,” ಎಂದು ಬೇಡಿದನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು.

No comments:

Post a Comment