ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.06.22 - "ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು"

ಮೊದಲನೇ ವಾಚನ: 1 ಅರಸುಗಳು 21:1-16


ಜೆಸ್ರೀಲಿನಲ್ಲಿ, ಸಮಾರಿಯದ ಅರಸ ಅಹಾಬನ ಅರಮನೆಯ ಹತ್ತಿರ ಜೆಸ್ರೀಲಿನವನಾದ ನಾಬೋತನೆಂಬ ವ್ಯಕ್ತಿಗೆ ಒಂದು ದ್ರಾಕ್ಷೀತೋಟವಿತ್ತು. ಅಹಾಬನು ಆ ನಾಬೋತನಿಗೆ, “ನಿನ್ನ ದ್ರಾಕ್ಷೀತೋಟವನ್ನು ನನಗೆ ಕೊಡು; ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುತ್ತೇನೆ; ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ; ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ,” ಎಂದು ಹೇಳಿದನು. ಅದಕ್ಕೆ ನಾಬೋತನು, “ಪಿತ್ರಾರ್ಜಿತ ಸೊತ್ತನ್ನು ನಿಮಗೆ ಮಾರದಂತೆ ಸರ್ವೇಶ್ವರ ನನ್ನನ್ನು ತಡೆಯಲಿ!” ಎಂದು ಉತ್ತರಕೊಟ್ಟನು. ಪಿತ್ರಾರ್ಜಿತ ಸೊತ್ತನ್ನು ನಿನಗೆ ಕೊಡುವುದಿಲ್ಲವೆಂದು ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟುಗೊಂಡನು; ಗಂಟುಮೋರೆ ಮಾಡಿಕೊಂಡು ಮನೆಗೆ ಹೋಗಿ, ಊಟಮಾಡಲೊಲ್ಲದೆ ಮಂಚದ ಮೇಲೆ ಮಲಗಿ, ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು. ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು, “ನೀವೇಕೆ ಊಟಮಾಡುವುದಿಲ್ಲ? ನಿಮಗೆ ಯಾವ ಚಿಂತೆ?” ಎಂದು ಕೇಳಿದಳು. ಅವನು, “ನಾನು ಜೆಸ್ರೀಲಿನವನಾದ ನಾಬೋತನಿಗೆ, ‘ನಿನ್ನ ದ್ರಾಕ್ಷೀತೋಟವನ್ನು ನನಗೆ ಮಾರಿಬಿಡು; ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷೀತೋಟವನ್ನು ಕೊಡುತ್ತೇನೆ ಎಂದು ಹೇಳಿದೆ; ಆದರೆ ಅವನು ಕೊಡುವುದಿಲ್ಲ ಎಂದುಬಿಟ್ಟ,” ಎಂದು ಉತ್ತರಕೊಟ್ಟನು. ಆಗ ಅವನ ಹೆಂಡತಿ ಈಜೆಬೆಲಳು, “ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸಂತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷೀತೋಟವನ್ನು ಕೊಡುತ್ತೇನೆ,” ಎಂದು ನುಡಿದಳು. ಅಂತೆಯೇ ಅಹಾಬನ ಹೆಸರಿನಲ್ಲಿ ಒಂದು ಪತ್ರವನ್ನು ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನಪುರುಷರಿಗೂ ಹಿರಿಯರಿಗೂ ಕಳುಹಿಸಿದಳು. ಅದರಲ್ಲಿ, “ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ: ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿರಿ; ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟಮನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು, ಕಲ್ಲೆಸೆದು ಕೊಲ್ಲಿರಿ,” ಎಂದು ಬರೆದಿದ್ದಳು. ಅವನ ಊರಿನ ಹಿರಿಯರೂ ಪ್ರಧಾನಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು. ಉಪವಾಸವನ್ನು ಪ್ರಕಟಿಸಿದರು, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು; ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು. ನಾಬೋತನು ಕಲ್ಲೆಸೆತದಿಂದ ಸತ್ತ ಸಮಾಚಾರವನ್ನು ಆ ಹಿರಿಯರು ಈಜೆಬೆಲಳಿಗೆ ಮುಟ್ಟಿಸಿದರು. ಆಕೆ ಇದನ್ನು ಕೇಳಿ ಅಹಾಬನಿಗೆ, “ನೀವು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳಿ. ಅವನು ಜೀವದಿಂದಿಲ್ಲ, ಸತ್ತನು,” ಎಂದು ಹೇಳಿದಳು. ಜೆಸ್ರೀಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ, ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋದನು.

ಕೀರ್ತನೆ: 5:2-3, 4-6, 6-7

ಶ್ಲೋಕ: ಕಿವಿಗೊಡು ಪ್ರಭೂ, ಎನ್ನ ನುಡಿಗೆ 

ಶುಭಸಂದೇಶ: ಮತ್ತಾಯ 5:38-42

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ ‘ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧೆ ಇದು; ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು. ಯಾರಾದರೂ ಒಂದು ಕಿಲೊಮೀಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊಮೀಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ.”

No comments:

Post a Comment