ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.06.22 - " ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ."

ಮೊದಲನೆಯ ವಾಚನ: 2 ಅರಸುಗಳು 11:1-4, 9-18, 20

ಅಹಜ್ಯನು ಮರಣಹೊಂದಿದನೆಂಬುದನ್ನು ಅವನ ತಾಯಿ ಅತಲ್ಯಳು ಕೇಳಿದಾಗ ರಾಜಸಂತಾನದವರನ್ನೆಲ್ಲಾ ಬೇಗನೆ ಸಂಹರಿಸಿಬಿಟ್ಟಳು. ಆದರೆ ಅರಸ ಯೆಹೋರಾಮನ ಮಗಳೂ ಅಹಜ್ಯನ ತಂಗಿಯೂ ಆದ ಯೆಹೋಷೆಬ ಎಂಬಾಕೆ, ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗ ಯೆಹೋವಾಷನನ್ನು, ಹತವಾಗುವುದಕ್ಕಿಂತ ರಾಜಪುತ್ರರ ಮಧ್ಯೆಯಿಂದ, ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಬಿಟ್ಟಳು. ಹೀಗೆ ಅವನು ಅತಲ್ಯಳಿಂದ ಹತವಾಗದೆ ತಪ್ಪಿಸಿಕೊಂಡು, ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಸರ್ವೇಶ್ವರನ ಆಲಯದಲ್ಲಿದ್ದನು. ಈ ಆರು ವರ್ಷಗಳಲ್ಲಿ ಅತಲ್ಯಳೇ ನಾಡನ್ನು ಆಳುತ್ತಿದ್ದಳು. ಏಳನೆಯ ವರ್ಷದಲ್ಲಿ ಯಾಜಕನಾದ ಯೆಹೋಯಾದಾವನು ' ಕಾರಿ ' ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಸರ್ವೇಶ್ವರನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಪ್ರಮಾಣಪೂರ್ವಕವಾದ ಒಪ್ಪಂದವನ್ನು ಮಾಡಿಕೊಂಡ ನಂತರ ರಾಜಕುಮಾರನನ್ನು ತೋರಿಸಿದನು. ಯೆಹೋಯಾದಾವನು. ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ಅವನ ಬಳಿಗೆ ಬಂದರು. ಅವನು ಆ ಶತಾಧಿಪತಿಗಳಿಗೆ ಸರ್ವೇಶ್ವರನ ಆಲಯದಲ್ಲಿ ಇಡಲಾಗಿದ್ದ ದಾವೀದನ ಬರ್ಜಿಯನ್ನೂ ಗುರಾಣಿಗಳನ್ನೂ ಕೊಟ್ಟನು. ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕಾಗಿ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಬಲಿಪೀಠದವರೆಗು, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗು, ಸಾಲಾಗಿ ನಿಂತರು. ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆಹೊಡೆದು ' ಅರಸನು ಚಿರಂಜೀವಿಯಾಗಿರಲಿ! ' ಎಂದು ಜಯಕಾರ ಮಾಡಿದರು. ಅತಲ್ಯಲು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ, ಅವರು ಕೂಡಿದ್ದ ಸರ್ವೇಶ್ವರನ ಆಲಯಕ್ಕೆ ಬಂದಳು. ಅಲ್ಲಿ ಅರಸನು ಪದ್ಧತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು; ಅಧಿಪತಿಗಳೂ ತುತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು. ಜನಸಾಮ್ಯಾರೆಲ್ಲರು ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡಕೂಡಲೆ ಆಕೆ ಕೋಪದಿಂದ ಬಟ್ಟೆಗಳನ್ನು ಹರಿದುಕೊಂಡು, " ದ್ರೋಹ! ದ್ರೋಹ! " ಎಂದು ಕೂಗಿದಳು. ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ ಶತಾಧಿಪತಿಗಳಿಗೆ, " ಈಕೆಯನ್ನು ಸರ್ವೇಶ್ವರನ ಆಲಯದಲ್ಲಿ ಕೊಲ್ಲಬೇಡಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಮಾಡಿ, ಹೊರಗೆ ಕರೆದುಕೊಂಡು ಹೋಗಲಿ;. ಮತ್ತು ಈಕೆಯನ್ನು ಹಿಂಬಾಲಿಸುವಂಥವರನ್ನು ಕತ್ತಿಯಿಂದ ಕೊಲ್ಲಿರಿ, " ಎಂದು ಆಜ್ಞಾಪಿಸಿದನು. ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ಅರಮನೆಗೆ ಒಯ್ದು ಅಲ್ಲಿ ಹತಿಸಿದರು. ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಸರ್ವೇಶ್ವರನ ಪ್ರಜೆಗಳಾಗಿರುವುದಾಗಿ ಪ್ರಮಾಣಮಾಡಿದರು. ಇದಲ್ಲದೆ, ರಾಜನಿಗೂ ಪ್ರಜೆಗಳಿಗೂ ಒಂದು ಒಪ್ಪಂದವಾಯಿತು. ಯೆಹೂದ್ಯರೆಲ್ಲರೂ ಬಾಳ್ ದೇವತೆಯ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಪೀಠಗಳ ಮುಂದೆಯೇ ಕೊಂದು, ಆ ದೇವಸ್ಥಾನವನ್ನೂ ಅದರಲ್ಲಿದ್ದ ಪೀಠ ಹಾಗು ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ದೇವಾಲಯಕ್ಕೆ ಕಾವಲಿಟ್ಟನು. ನಾಡಿನವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿಯಿತ್ತು ; ಅತಲ್ಯಳನ್ನು ಅರಭನೆಯಲ್ಲೇ ಕತ್ತಿಯಿಂದ ಸಂಹರಿಸಿದರು.

ಕೀರ್ತನೆ 132:11, 12, 13-14, 17-18
ಶ್ಲೋಕ: ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು.

ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ:|
ಆಣೆಯಿಟ್ಟು ಕೊಟ್ಟಾ, ಮಾತಿಗೆ ತಪ್ರಲಾರನಾತ:|
ನಿನ್ನ ಸಿಂಹಾಸನರಲಿ ಕೂರಿಸುವೆನು ನಿನ್ನ ತನುಜನೊಬ್ಬನನು||

ನನ್ನ ನೇಮನಿಯಮಗಳನು ನಿನ್ನ ಮಕ್ಕಳು ಅನುಸರಿಸುವರಾದರೆ|
ಕೂರುವರು ಸದಾಕಾಲ ಅವರ ಮಕ್ಕಳು ನಿನ್ನಾ ಸಿಂಹಾಸನದ ಮೇಲೆ||

ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು|
ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು||
ಎಂದೆಂದಿಗು ಇದೇ ನನ್ನ ನಿವಾಸ|
ಇರುವೆನಿಲ್ಲೇ, ಇದು ನನ್ನ ಅಭಿಲಾಶ||

ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೇ|
ನಂದಾದೀಪ ಬೆಳಗುವಂತೆ ಮಾಡುವೆ ನಿನ್ನ ಅಭಿಷಿಕ್ತನಿಗಿಲ್ಲೇ||
ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು|
ಮುಡಿಸುವೆನು ಅವನಿಗಾದರೋ ಪ್ರಜ್ವಲ ಕೀರಿಟವನು||

ಶುಭಸಂದೇಶ: ಮತ್ತಾಯ 6:19-23


"ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಕರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದ್ದಾರು. ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ. ಅಲ್ಲಿ ತುಕ್ಕು ಹಿಡಿಯದು,. ನುಸಿ ಹೊಡೆಯದು, ಕಳ್ಳರು ಕನ್ನ ಕೊರೆದು ಕದಿಯರು. ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ. ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ ನಿನ್ನ ದೇಹವೆಲ್ಲ ಕತ್ತಲೆಮಯವಾಗುವುದು. ನಿನ್ನೊಳಗಿರುವ ಬೆಳಕೇ ಕತ್ತಲೆಯಾದಲ್ಲಿ ಅದೆಂತಹ ಕರಾಳ ಕತ್ತಲೆಯಾಗಿರಬಹುದು!"

No comments:

Post a Comment