ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

26.06.22 - "ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,"

ಮೊದಲನೇ ವಾಚನ: 1 ಅರಸುಗಳು  19:16, 19-21

ಸರ್ವೇಶ್ವರ ಎಲೀಯನಿಗೆ: "ನಿಂಷಿಯ ಮಗ ಯೇಹುವನ್ನು ಇಸ್ರಯೇಲರ ಅರಸನನ್ನಾಗಿ ಅಭಿಷೇಕಿಸು. ಆಬೇಲ್ ಮಹೋಲದವನೂ ಶಾಫಾಟನ ಮಗನೂ ಆದ ಎಲೀಷನನ್ನು ನಿನ್ನ  ಉತ್ತರಾಧಿಕಾರಿಯಾದ ಪ್ರವಾದಿಯನ್ನಾಗಿ ಅಭಿಷೇಕಿಸು" ಎಂದರು. ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಕೂಡಲೆ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, "ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ; ಆನಂತರ ನಿನ್ನನ್ನು ಹಿಂಬಾಲಿಸುವೆನು," ಎಂದನು. ಅದಕ್ಕೆ ಎಲೀಯನು, "ಹೋಗಿ ಬಾ; ನಾನು ನಿನಗೆ ಮಾಡಬೇಕಾದ್ದನ್ನು ಮಾಡಿದ್ದೇನೆ," ಎಂದು ಉತ್ತರಕೊಟ್ಟನು. ಎಲೀಷನು ಹಿಂದಿರುಗಿ ಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ವಧಿಸಿ ಮಾಂಸವನ್ನು ನೊಗದ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣ ಮಾಡಿಸಿದನು. ಆನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಶಿಷ್ಯನಾದನು.

ಕೀರ್ತನೆ: 16:1-2, 5, 7-8, 9-10, 11

ಶ್ಲೋಕ: ಪ್ರಭೂ, ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ

ಎರಡನೇ ವಾಚನ: ಗಲಾತ್ಯರಿಗೆ  5:1, 13-18

ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ.  ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ. ಸಹೋದರರೇ, ನೀವು ಮುಕ್ತ ಸ್ವಾತಂತ್ರ ಜೀವನವನ್ನು ನಡೆಸಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾರೆ. ಆದರೆ, ಆ ಸ್ವಾತಂತ್ರ್ಯವನ್ನು ದೈಹಿಕ ಬಯಕೆಗಳಿಗೆ ಸಾಧನವಾಗಿ ಮಾಡಿಕೊಳ್ಳಬೇಡಿ. ಬದಲಾಗಿ, ನೀವು ಒಬ್ಬರಿಗೊಬ್ಬರು ಪ್ರೀತಿಯಿಂದ ಸೇವೆಮಾಡಿರಿ. "ನೀನು ನನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸು," ಎಂಬ ಒಂದೇ ವಚನದಲ್ಲಿ ಇಡೀ ಧರ್ಮಶಾಸ್ತ್ರವು ಅಡಗಿದೆ. ಆದರೆ ನೀವು ನಿಮ್ಮ ಕಚ್ಚಾಟ, ಕಿತ್ತಾಟ, ನುಗ್ಗಾಟ - ಇವುಗಳನ್ನು ನಿಲ್ಲಿಸದಿದ್ದರೆ ಒಬ್ಬರಿಂದೊಬ್ಬರು ವಿನಾಶವಾದಿರಿ, ಎಚ್ಚರಿಕೆ! ನಾನು ಹೇಳುವುದೇನೆಂದರೆ: ನೀವು ಪವಿತ್ರಾತ್ಮರ ಪ್ರೇರಣೆಗನುಸಾರವಾಗಿ ನಡೆದುಕೊಳ್ಳಬೇಕು. ಆಗ, ದೈಹಿಕ ವ್ಯಾಮೋಹಕ್ಕೆ ನೀವು ಈಡಾಗಲಾರಿರಿ. ಏಕೆಂದರೆ, ದೈಹಿಕ ವ್ಯಾಮೋಹವು ಪವಿತ್ರಾತ್ಮರಿಗೆ ವಿರುದ್ಧವಾಗಿದೆ. ಪವಿತ್ರಾತ್ಮ ಆ ವ್ಯಾಮೋಹಕ್ಕೆ ವಿರುದ್ಧವಾಗಿದ್ದಾರೆ. ಇವೆರಡೂ ಒಂದಕ್ಕೊಂದು ಕಾದಾಡುವುದರಿಂದ ನಿಮ್ಮ ಬಯಕೆ ಕೈಗೂಡುವುದಿಲ್ಲ. ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ.

ಶುಭಸಂದೇಶ: ಲೂಕ  9:51-62


ತಾವು ಸ್ವರ್ಗರೋಣವಾಗುವ ದಿನಗಳು ಸಮೀಪಿಸಲು ಯೇಸುಸ್ವಾಮಿ ಜೆರುಸಲೇಮಿಗೆ ಅಭಾಮುಖವಾಗಿ ಹೊರಡಲು  ನಿರ್ಧರಿಸಿದರು. ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದುದನ್ನು ಸಿದ್ದಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು. ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ. ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, "ಪ್ರಭೂ, ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶ ಮಾಡಲಿ ಎಂದು ನಾವು ಆಜ್ಞೆಮಾಡಬಹುದಲ್ಲವೇ?" ಎಂದರು. ಯೇಸು ಅವರ ಕಡೆ ತಿರುಗಿ, "ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ" ಎಂದು ಅವರನ್ನು ಖಂಡಿಸಿದರು. ಆನಂತರ  ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು. ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಯೇಸುವಿಗೆ, "ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ," ಎಂದನು. ಯೇಸು ಅವನಿಗೆ, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ," ಎಂದರು. ಇನ್ನೊಬ್ಬನಿಗೆ ಯೇಸು, "ನನ್ನನ್ನು ಹಿಂಬಾಲಿಸು," ಎಂದು ಹೇಳಿದಾಗ ಅವನು, ಸ್ವಾಮೀ, ಮೊದಲು ನನ್ನ ತಂದೆಯ ಉತ್ತರಕ್ರಿಯೇಗಳನ್ನು ಮುಗಿಸುವ ತನಕ ಸಮಯಕೊಡಿ," ಎಂದನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು," ಎಂದು ಹೇಳಿದರು. ಮತ್ತೊಬ್ಬನು, "ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆ ಆಗಬೇಕು," ಎಂದನು. ಯೇಸು ಅವನನ್ನು ನೋಡಿ, "ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ," ಎಂದರು.

No comments:

Post a Comment