ಮೊದಲನೇಯ ವಾಚನ : ಯೆಜಿಕಿಯೇಲ 18:21-28
ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲವಿಧಿಗಳನ್ನು ಕೈಗೊಂಡು, ನ್ಯಾಯನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು. ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು. ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು.“ಆದರೆ ನೀವು,‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ. ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು. ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು
ಕೀರ್ತನೆ : 130:1-2.3-4,5-7,7-8
ಶ್ಲೋಕ : ಪಾಪಗಳ ನೀ ಪಟ್ಟಿ ಮಾಡಿದೆಯಾದರೆ ಪ್ರಭೂ,
ನಿನ್ನ ಮುಂದೆ ಯಾರೂ ತಾನೆ ನಿಲ್ಲಬಲ್ಲರು ವಿಭೂ?
ಶುಭಸಂದೇಶ : ಮತ್ತಾಯ 5:20-26
ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ.” “ ‘ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು’ ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ; ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು;‘ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲಿ ಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ’ ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು.” “ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸಮಾಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೊಲೀಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು.”
ಮನಸ್ಸಿಗೊಂದಿಷ್ಟು : ಕೋಪ, ಮನಸ್ತಾಪ, ಹಗೆ ನಮ್ಮ ಅಂತರಂಗವನ್ನೇ ಸುಟ್ಟು ನೆಮ್ಮದಿ ಇಲ್ಲದಂತೆ ಮಾಡಿಕೊಳ್ಳುವುದಕ್ಕಿಂತ ಅದನ್ನೇ ಮೊಳಕೆಯಲ್ಲಿ ಚಿವುಟುವ ಪರಿಹಾರವನ್ನು ಯೇಸು ನೀಡುತ್ತಾರೆ. ದೇವರ ಮುಂದೆ ನಿಲ್ಲುವಾಗ ನಮ್ಮ ಮನಸ್ಸು ತಿಳಿಯಾಗಿರಬೇಕಾದ ಅವಶ್ಯಕತೆಯನ್ನು ಇಲ್ಲಿ ಸ್ಪಷ್ಟಪಡಿಸುತ್ತಾರೆ. ಕಠಿಣ ಆದರೆ ನಿಜಕ್ಕೂ ಫಲದಾಯಕವಾದ ಪರಿಹಾರವಿದು.
ಪ್ರಶ್ನೆ : ನಮ್ಮಲ್ಲಿನ ಮನಸ್ತಾಪಗಳು ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಟ್ಟಿವಿಯೇ?
ಪ್ರಭುವೇ,
ನನ್ನೊಳಗಿನ ಹಗೆತನ ಕೋಪ
ನನ್ನ ಬಾಳಿಗಾಗಿದೆ ಶಾಪ
ಅಂತರಂಗದ ನನ್ನೀ ಕದನ
ನಿನ್ನ ಕೃಪೆಯಲ್ಲಿ ಕಾಣಲಿ ಶಮನ
-ಚಿತ್ತ
No comments:
Post a Comment