ಮೊದಲನೇ ವಾಚನ: ಎಸ್ತೇರಳು 14:12, 14-16, 23-25
ಮರಣ ಭಯದಿಂದ ಕಂಗೆಟ್ಟ ರಾಣಿ ಎಸ್ತೇರಳು ಸರ್ವೇಶ್ವರನ ಆಶ್ರಯವನ್ನು ಕೋರಿದಳು. ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತಾ ಈ ಪರಿ ಮೊರೆಯಿಟ್ಟಳು: "ನನ್ನ ಸರ್ವೇಶ್ವರ, ಅರಸನೇ, ತಾವೊಬ್ಬರೇ ದೇವರು, ಒಬ್ಬಂಟಿಗಳು ನಾನು, ತಾವೇ ನನಗೆ ನೆರವು. ನನ್ನ ಪ್ರಾಣಕ್ಕೆ ಗಂಡಾಂತರ ಬಂದಿಹ ಈ ವೇಳೆಯಲಿ ತಮ್ಮನ್ನಲ್ಲದೆ ಯಾರನ್ನು ಆಶ್ರಯಿಸಲಿ? ತಾವಾರಿಸಿಕೊಂಡಿರಿ ಸಕಲ ರಾಷ್ಟ್ರಗಳಿಂದ ಇಸ್ರಯೇಲನ್ನು ತಮ್ಮ ಪ್ರಜೆಯಾಗಲು ಪ್ರತ್ಯೇಕಿಸಿದಿರಿ, ನಮ್ಮ ಪೂರ್ವಜರನ್ನು. ತಪ್ಪದೆ ಈಡೇರಿಸಿದಿರಿ. ತಮ್ಮ ವಾಗ್ದಾನಗಳನ್ನು ಕುಟುಂಬದವರಿಂದ ಬಾಲ್ಯದಿಂದಲೇ ನಾ ಕಲಿತ ಈ ಪಾಠವನ್ನು. ಸರ್ವೇಶ್ವರಾ, ನಮ್ಮನ್ನು ತಂದುಕೊಳ್ಳಿ ನೆನಪಿಗೆ ಆಪತ್ತಿನಲ್ಲಿ ನೆರವಿತ್ತು ಧೈರ್ಯನೀಡಿ ನಮಗೆ ರಾಜಾಧಿರಾಜ, ಒಡೆಯ ತಾವು ಸಕಲ ದೇವರುಗಳಿಗೆ. ಕರುಣಿಸಿ, ಸಿಂಹರಾಜನ ಮುಂದೆ ನಿಂತು ನಾ ವಾದಿಸುವಂತೆ ಈ ರಾಜನು ಶತ್ರು ಹಾಮಾನನನ್ನು ದ್ವೇಷಿಸುವಂತೆ ಆ ಶತ್ರು ಹಾಗು ಅವನ ಸಂಗಡಿಗರು ನಾಶವಾಗುವಂತೆ. ಸರ್ವೇಶ್ವರಾ, ರಕ್ಷಿಸಿ ನೆರವಿತ್ತು ಈ ಒಬ್ಬಂಟಿಗಳಿಗೆ, ಯಾರನ್ನು ಆಶ್ರಯಿಸಲಿ ನಾನು, ತಮ್ಮನ್ನಲ್ಲದೆ?
ಕೀರ್ತನೆ: 138:1-2, 2-3, 7-8
ಶ್ಲೋಕ:ಸರ್ವೇಶ್ವರಾ, ಮೊರೆಯಿಟ್ಟಾಗ ದಯಪಾಲಿಸಿದೆ ಎನಗೆ ಸದುತ್ತರವನು
ಶುಭಸಂದೇಶ: ಮತ್ತಾಯ 7:7-12
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡಲಾಗುವುದು, ಹುಡುಕುವವನಿಗೆ ಸಿಗುವುದು, ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. ನಿಮ್ಮಲ್ಲಿ ಯಾವನು ತಾನೇ ತನ್ನ ಮಗ ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಟ್ಟಾನು? ವಿೂನನ್ನು ಕೇಳಿದರೆ ಹಾವನ್ನು ಕೊಟ್ಟಾನು? ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅದಕ್ಕಿಂತಲೂ ಎಷ್ಟೋ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಒಳ್ಳೆಯ ಕೊಡುಗೆಗಳನ್ನು ಕೊಡಬಲ್ಲರು!" "ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ."
🎵 ತುಂತುರು: ಮಗನು ತನ್ನ. . .
No comments:
Post a Comment