ಮೊದಲನೇ ವಾಚನ: ಯೋನ 3: 1-10
ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ – ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು. ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.” ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.
ಕೀರ್ತನೆ: 51:1-2, 10-11, 16-17
ಶ್ಲೋಕ: ನೊಂದ ಬೆಂದ ಮಾನವನಾತ ಒಲ್ಲೆಯೆನನು.
ಶುಭಸಂದೇಶ: ಲೂಕ 11: 29-32
ಆ ಕಾಲದಲ್ಲಿ ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
No comments:
Post a Comment