ಮೊದಲನೆಯ ವಾಚನ: ಯಾಜಕಕಾಂಡ 13: 1-2,44-46,
ಸರ್ವೇಶ್ವರ ದೇವರು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ; ಒಬ್ಬ ವ್ಯಕ್ತಿಯ ಮೈಮೇಲೆ ಬಾವಾಗಲಿ ಗುಳ್ಳೆಯಾಗಲಿ, ಹೊಳೆಯುವ ಮಚ್ಚೆಯಾಗಲಿ ಕಾಣಿಸಿಕೊಂಡು ಅದರಲ್ಲಿ ಕುಷ್ಠರೋಗದ ಲಕ್ಷಣಗಳು ತೋರಿದರೆ ಅವನನ್ನು ಮಹಾಯಾಜಕ ಆರೋನನ ಬಳಿಗೆ, ಇಲ್ಲವೆ ಆರೋನನ ಮಕ್ಕಳಾದ ಯಾಜಕರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು. ಅವನ ತಲೆಯ ಮೇಲೆ ಕುಷ್ಠದ ಗುರುತು ಕಾಣಿಸಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಯಾರಲ್ಲಿ ಕುಷ್ಠದ ಗುರುತು ಕಾಣಬಂತೋ ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯನ್ನು ಕೆದರಿಕೊಂಡು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು - ‘ನಾನು ಅಶುದ್ದನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು. ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸ ಪಾಳೆಯದ ಹೊರಗೆ ಇರಬೇಕು.
ಪ್ರಭುವಿನ ವಾಕ್ಯ
ಕೀರ್ತನೆ: 32: 1-2, 5, 11. V. 7
ಶ್ಲೋಕ: ಪ್ರಭು ನೀನೇ ನನ್ನ ಮರೆಯು, ಆಪತ್ತಿನಲ್ಲಿ ಆಸರೆಯು I
ಯಾರ ಪಾಪ ಪರಿಹಾರವಾಗಿದೆಯೋ I
ಯಾರ ದ್ರೋಹ ವಿಮೋಚನೆಯಾಗಿದೆಯೋ - ಅವರೇ ಧನ್ಯರು II
ಯಾರಪರಾಧವನು ಪ್ರಭು ಎಣಿಸಿಲ್ಲವೋ Iಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು II
ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು I
ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು II
“ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ” ಎಂದೆನು I
ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು II
ಸಜ್ಜನರೇ ಸಂತೋಷಿಸಿರಿ, ಉಲ್ಲಾಸಿಸಿರಿ ಪ್ರಭುವಿನಲಿ I
ಯಥಾರ್ಥಚಿತ್ತರೇ, ಜಯಕಾರಮಾಡಿ ಆತನ ವಿಷಯದಲಿ II
ಎರಡನೆಯ ವಾಚನ: 1 ಕೊರಿಂಥಿಯರಿಗೆ 10: 31-11: 1
ಸಹೋದರರೇ, ನೀವು ಉಂಡರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿ. ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಧರ್ಮಸಭೆಗಾಗಲಿ ಬಾಧಕರಾಗಿರಬೇಡಿ. ನಾನಂತೂ ನನ್ನ ಸ್ವಂತ ಹಿತವನ್ನು ಲೆಕ್ಕಿಸದೆ ಸರ್ವರ ಉದ್ಧಾರಕ್ಕಾಗಿ ಅವರ ಹಿತವನ್ನು ಅಪೇಕ್ಷಿಸಿ, ಎಲ್ಲರನ್ನೂ ಎಲ್ಲದರಲ್ಲೂ ಮೆಚ್ಚಿಸಲು ಪ್ರಯತ್ನಿಸುತ್ತೇನೆ. ನಾನು ಕ್ರಿಸ್ತಯೇಸುವನ್ನು ಅನುಸರಿಸುವಂತೆ, ನೀವೂ ನನ್ನನ್ನು ಅನುಸರಿಸಿರಿ.
ಪ್ರಭುವಿನ ವಾಕ್ಯ
ಶುಭಸಂದೇಶ: ಮಾರ್ಕ 1: 40-45
ಆ ಕಾಲದಲ್ಲಿ ಕುಷ್ಠರೋಗಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, ಮೊಣಕಾಲೂರಿ, “ತಾವು ಮನಸ್ಸುಮಾಡಿದ್ದಲ್ಲಿ ನನ್ನನ್ನು ಗುಣಮಾಡಬಲ್ಲಿರಿ,” ಎಂದು ದೈನ್ಯದಿಂದ ಬೇಡಿಕೊಂಡನು. ಯೇಸುವಿನ ಮನ ಕರಗಿತು. ಅವರು ಕೈಚಾಚಿ, ಕುಷ್ಠರೋಗಿಯನ್ನು ಮುಟ್ಟಿ, “ಖಂಡಿತವಾಗಿ ನನಗೆ ಮನಸ್ಸಿದೆ, ನಿನಗೆ ಗುಣವಾಗಲಿ,” ಎಂದರು. ತಕ್ಷಣ ಅವನ ಕುಷ್ಠವು ಮಾಯವಾಯಿತು. ಅವನು ಗುಣಹೊಂದಿದನು. ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು. ಆದರೆ ಅವನು ಹೋಗಿ ಈ ಸಮಾಚಾರವನ್ನು ಎಲ್ಲೆಲ್ಲೂ ಸಾರಿದನು. ಈ ಕಾರಣ ಯೇಸು ಬಹಿರಂಗವಾಗಿ ಯಾವ ಪಟ್ಟಣದೊಳಕ್ಕೂ ಹೋಗಲು ಆಗಲಿಲ್ಲ. ಆದುದರಿಂದ ನಿರ್ಜನ ಪ್ರದೇಶಗಳಲ್ಲೇ ಇರತೊಡಗಿದರು.
ಪ್ರಭುವಿನ ಶುಭಸಂದೇಶ
No comments:
Post a Comment