ಮೊದಲನೇ ವಾಚನ: ಯೆಶಾಯ : 58: 1-9
ಸರ್ವೇಶ್ವರ ಸ್ವಾಮಿ ಇಂತೆನ್ನುತ್ತಾರೆ : “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು; ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೋ ಎಂಬಂತೆ, ಇವರು ದಿನದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ.” “ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ : ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣೀತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ?
“ನಾನು ಹೇಳುವುದನ್ನು ಕೇಳಿ : ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು, ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ?
“ಇದನ್ನು ಆಚರಿಸುವಾಗ ನೀವು ಉದಯಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರ ಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು.
ಕೀರ್ತನೆ: 51: 1-2, 3-4, 6-17
ಶ್ಲೋಕ: ನೊಂದ ಬೆಂದ ಮನವನಾತ ಒಲ್ಲೆಯೆನ್ನನು.
ಕೃಪಾಳು, ದೇವಾ, ಕರುಣಿಸೆನ್ನನು /
ಕರುಣಾನಿಧಿ, ಅಳಿಸೆನ್ನ ದೋಷವನು //
ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು /
ದೋಷಪರಿಹರಿಸಿ ಶುದ್ಧಗೊಳಿಸೆನ್ನನು //
ಒಪ್ಪಿಕೊಂಡೆನಿದೋ, ನಾನೇ ಅಪರಾಧಿ
ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ
ಹೌದು ದೇವಾ, ನಿನಗೆ ದ್ರೋಹವೆಸಗಿದೆ
ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ.
ಬಲಿಯರ್ಪಣೆಯಲಿ ನಿನಗೊಲವಿಲ್ಲ |
ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||
ಮುರಿದ ಮನವೇ ದೇವನೊಲಿವ ಯಜ್ಞವು /
ನೊಂದು ಬೆಂದ ಮನವನಾತ ಒಲ್ಲೆಯೆನನು
ಶುಭಸ೦ದೇಶ: ಮತ್ತಾಯ: 9: 14-15
ಯೊವಾನ್ನನ ಶಿಷ್ಯರು ಯೇಸುಸ್ವಾಮಿಯಯ ಬಳಿಗೆ ಬ೦ದರು. "ನಾವೊ ಫ಼ರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ, ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎ೦ದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದು೦ಟೇ? ಮದುವಣಿಗನು ಅವರಿ೦ದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು".
ಮನಸ್ಸಿಗೊಂದಿಷ್ಟು : ಯೇಸು ತಮ್ಮ ಸಾರ್ವಜನಿಕ ಜೀವನ ಪ್ರಾರಂಭಿಸಿದ್ದೇ ಕಠಿಣ ಉಪವಾಸದಿಂದ. ಆದರೂ ಈಗ ತಮ್ಮ ಶಿಷ್ಯರು ಉಪವಾಸವನ್ನು ಮಾಡಲೇಬೇಕು ಎಂದು ಒತ್ತಾಯ ಮಾಡುವುದಿಲ್ಲ. ತಾವೇ ಜೊತೆಗಿರುವಾಗ ಅದು ಸಂತೋಷದ ಸಮಯ, ನೆನಪಿನಲ್ಲಿ ಹಿಡಿದಿಟ್ಟುಕೊಳ್ಳಬೇಕಾದ ಕ್ಷಣಗಳು ಎನ್ನುವುದು ಅವರ ಚಿಂತನೆ. ಆದರೆ ಮುಂದೆ ಶಿಷ್ಯರ ಪರೀಕ್ಷೆಯ ಕಾಲ , ದುಃಖದ ಕಾಲ ಬರಲಿದೆ ಎನ್ನುವುದರ ಮುನ್ಸೂಚನೆಯೂ ಇಲ್ಲಿದೆ .
ಕ್ರೈಸ್ತ ಜೀವನದ ತಿರುಳು ಇಲ್ಲಿದೆ. ಕ್ರಿಸ್ತ ನಮ್ಮ ಜೊತೆಗಿರುವುದು ಸಂತಸದ ಸಂಗತಿ. ಆದರೆ ಶಿಲುಬೆ, ತ್ಯಾಗ, ಶುಭಸಂದೇಶದ ಸಲುವಾಗಿ ಪಡಬೇಕಾದ ಕಷ್ಟ ನಮ್ಮ ಜೀವನದ ಅವಿಭಾಜ್ಯ ಅಂಗ
-ಜೀವವಾಕ್ಯ
No comments:
Post a Comment