16.02.21 - "ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,”

ಮೊದಲ ವಾಚನ - ಆದಿಕಾಂಡ 6: 5-8: 7: 1-5, 10


ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು. ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು, “ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ, ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿಕೀಟಗಳನ್ನು ಅಳಿಸಿಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದುಃಖವಾಗುತ್ತಿದೆ,” ಎಂದುಕೊಂಡರು. ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರ ಸ್ವಾಮಿಗೆ ಮೆಚ್ಚುಗೆಯಿತ್ತು. ಸರ್ವೇಶ್ವರ ಸ್ವಾಮಿ ನೋಹನಿಗೆ, "ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ.ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಹೀಗೆ ಆಯಾ ಜಾತಿಯನ್ನು ಭೂಮಿಯಲ್ಲಿ ಉಳಿಸಿ ಕಾಪಾಡಬೇಕು. ಏಳು ದಿನಗಳಾನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲ ಭೂಮಿಯಿಂದ ಅಳಿಸಿಹಾಕುವೆನು,” ಎಂದು ಹೇಳಿದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು. ಏಳು ದಿನಗಳಾದ ಬಳಿಕ ಜಲಪ್ರಳಯವಾಗತೊಡಗಿತು.
ಪ್ರಭುವಿನ ವಾಕ್ಯ

ಕೀರ್ತನೆ - 29: 1-4, 8-10
ಶ್ಲೋಕ: ಅನುಗ್ರಹಿಸಲಿ ಪ್ರಭು ತನ್ನ ಪ್ರಜೆಗೆ ಸುಕ್ಷೇಮವನು

ಸುರಪುತ್ರರೇ, ಪ್ರಭುವಿನ ಸ್ತುತಿ ಮಾಡಿರಿ
ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು I

ಪೂಜಿಸಿರಿ ಪವಿತ್ರಾಂಬರರಾಗಿ ಆತನನು II
ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ I

ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ II
ಪ್ರಭುವಿನ ಧ್ವನಿ ಶಕ್ತಿಯುತ Iಆತನ ಶಬ್ಧ ವೈಭವಯುತ II

ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ I
ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು II

ಜಲಪ್ರಳಯದೊಳು ಪ್ರಭು ಆಸೀನನಾಗಿಹನು I
ಯುಗಯುಗಾಂತರಕು ಅರಸನಾಗಿ ಆಳುವನು II

ಶುಭಸಂದೇಶ - ಮಾರ್ಕ 8: 14-21


ಆ ಕಾಲದಲ್ಲಿ ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು. ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ, “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? ನಾನು ಐದು ರೊಟ್ಟಿಗಳಿಂದ ಐದು ಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು. “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆ ತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು. ಆಗ ಯೇಸು, “ಇಷ್ಟಾದರೂ, ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು.
ಪ್ರಭುವಿನ ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...