ಮೊದಲನೆಯ ವಾಚನ : ದಾನಿಯೇಲ 9: 4-10
“ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ.
“ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞಾವಿಧಿಗಳನ್ನು ತೊರೆದುಬಿಟ್ಟಿದ್ದೇವೆ. ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ. ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆ. ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ. ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು. ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.
ಶುಭಸಂದೇಶ : ಲೂಕ 6: 36-38
ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. “ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ. ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿ ಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿ ಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು,” ಎಂದರು.
No comments:
Post a Comment