ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

22.11.20 - " ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ,"

 ಮೊದಲನೇ ವಾಚನ: ಪ್ರವಾದಿ ಯೇಜೆಕಿಯಲ್ 34:11-12, 15-17 


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. ಮಂದೆಯ ಕುರುಬನು ಸುತ್ತಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು; ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿನ ಕುರಿಗಳನ್ನಾದರೋ ಧ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.” ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು. 

ಕೀರ್ತನೆ: 23:1-2, 2-3, 5, 6

ಎರಡನೇ ವಾಚನ: ಕೊರಿಂಥ 15:20-26, 28


ಕ್ರಿಸ್ತಯೇಸು
ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು. ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು. ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ. ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. ಎಲ್ಲವೂ ಕ್ರಿಸ್ತಯೇಸುವಿಗೆ ಅಧೀನವಾದಾಗ ಪುತ್ರನಾದ ಅವರೇ, ಎಲ್ಲವನ್ನು ತನಗೆ ಅಧೀನಪಡಿಸಿದ ದೇವರಿಗೆ ಅಧೀನರಾಗುತ್ತಾರೆ. ಆಗ ದೇವರು ಸರ್ವರಿಗೆ ಸರ್ವಸ್ವವೂ ಆಗುತ್ತಾರೆ

ಶುಭಸಂದೇಶ: ಮತ್ತಾಯ 25:31-46


ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು. ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು. ಅದಕ್ಕೆ ಸಜ್ಜನರು, ‘ಸ್ವಾಮೀ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು? ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು? ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು

ಆಗ ಅರಸನು ಪ್ರತ್ಯುತ್ತರವಾಗಿ, ‘ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು. ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ; ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು. ಅದಕ್ಕೆ ಅವರು ಕೂಡ, ‘ಸ್ವಾಮೀ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಮತ್ತು ಬಂಧಿಯಾಗಿ ಇದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆಹೋದೆವು? ಎಂದು ಪ್ರಶ್ನಿಸುವರು

ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವರು ಹೀಗೆ ದುರ್ಜನರು ನಿತ್ಯಶಿಕ್ಷೆಗೂ, ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.

No comments:

Post a Comment