ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.11.20 - “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾಗದು;

 ಮೊದಲನೇ ವಾಚನ: ಫಿಲಿಪ್ಪಿಯರಿಗೆ 4:10-19

ಸಹೋದರರೇ, ನನ್ನ ಬಗ್ಗೆ ನಿಮಗಿರುವ ಮಮತೆಯು ಇಷ್ಟು ದಿನಗಳಾದ ಮೇಲೆ ಪುನಃ ಅರಳಿದ್ದಕ್ಕೆ ಪ್ರಭುವಿನಲ್ಲಿ ನಾನು ಬಹಳ ಸಂತೋಷಪಡುತ್ತೇನೆ. ಇಂಥ ಮಮತೆ ನಿಮಗೆ ಮೊದಲಿನಿಂದ ಇತ್ತಾದರೂ ಅದನ್ನು ವ್ಯಕ್ತಪಡಿಲು ನಿಮಗೆ ಸೂಕ್ತ ಸಂದರ್ಭ ಒದಗಿರಲಿಲ್ಲ. ನಾನು ಯಾವುದೋ ಕೊರತೆಯಲ್ಲಿರುವೆನೆಂದು ಸೂಚಿಸಲು ಇದನ್ನು ಹೇಳುತ್ತಿಲ್ಲ. ನಾನು ಯಾವ ಸ್ಥಿತಿಯಲ್ಲಿದ್ದರೂ ತೃಪ್ತಿಯಿಂದಿರಲು ಕಲಿತುಕೊಂಡಿದ್ದೇನೆ. ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ. ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮರ್ಥ್ಯ ನನಗಿದೆ. ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯ ಮಾಡಿದುದು ನಿಮ್ಮ ಸೌಜನ್ಯವೇ ಸರಿ. ಫಿಲಿಪ್ಪಿಯ ಸಹೋದರರೇ, ನಾನು ಶುಭಸಂದೇಶವನ್ನು ಸಾರಲು ಹೊರಟ ಪ್ರಾರಂಭದ ದಿನಗಳಲ್ಲಿ ಮಕೆದೋನಿಯವನ್ನು ಬಿಟ್ಟುಹೋದಾಗ ನೀವಲ್ಲದೆ ಬೇರೆ ಯಾವ ಸಭೆಯೂ ನನ್ನ ಆಯ-ವ್ಯಯಗಳಲ್ಲಿ ನೆರವಾಗಿರಲಿಲ್ಲ. ಇದು ನಿಮಗೆ ತಿಳಿದ ವಿಷಯ. ನಾನು ಥೆಸಲೋನಿಕದಲ್ಲಿದ್ದಾಗಲೂ ನನ್ನ ಕೊರತೆಯನ್ನು ನೀಗಿಸಲು ಒಂದೆರಡು ಬಾರಿ ಧನಸಹಾಯವನ್ನು ಕಳುಹಿಸಿದಿರಿ. ನಿಮ್ಮಿಂದ ಸಹಾಯ ಪಡೆಯಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಈ ಸಹಾಯದಿಂದ ನಿಮಗೆ ಮುಂದೆ ದೊರಕುವ ಪ್ರತಿಫಲವು ಸಮೃದ್ಧಿಯಾಗಲೆಂದೇ ನನ್ನ ಇಚ್ಛೆ. ನೀವು ಕಳುಹಿಸಿಕೊಟ್ಟಿದ್ದೆಲ್ಲವೂ ನನಗೆ ಸಂದಾಯವಾಗಿದೆ. ಈಗ ಅಗತ್ಯಕ್ಕಿಂತಲೂ ಅಧಿಕವಾಗಿದೆ, ಯಥೇಚ್ಛವಾಗಿದೆ. ಎಪಫ್ರೋದಿತನ ಮೂಲಕ ನೀವು ಕಳುಹಿಸಿದ್ದೆಲ್ಲವೂ ನನಗೆ ತಲುಪಿದೆ. ನಿಮ್ಮ ಕೊಡುಗೆ ಸುಗಂಧ ಕಾಣಿಕೆಯಾಗಿದೆ, ದೇವರಿಗೆ ಮೆಚ್ಚಿಗೆಯಾದ ಇಷ್ಟಾರ್ಥ ಬಲಿಯಾಗಿದೆ. ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತಯೇಸುವಿನ ಮುಖಾಂತರ ಪೂರೈಸುವರು. ನಮ್ಮ ತಂದೆಯಾದ ದೇವರಿಗೆ ನಿರಂತವೂ ಮಹಿಮೆ ಸಲ್ಲಲಿ!

ಕೀರ್ತನೆ: 112:1-2, 5-6, 8, 9

ಶ್ಲೋಕ: ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು 

ಶುಭಸಂದೇಶ: ಲೂಕ 16:9-15

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ಹೇಳುವುದನ್ನು ಗಮನಿಸಿರಿ; ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು? “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾಗದು; ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು,” ಎಂದರು. ಹಣದಾಶೆಯಿಂದ ಕೂಡಿದ್ದ ಫರಿಸಾಯರು ಈ ಮಾತುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯಮಾಡಿದರು. ಅದಕ್ಕೆ ಯೇಸು, “ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ; ದೇವರಾದರೋ ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು,” ಎಂದರು.

No comments:

Post a Comment