ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.11.20 - "ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,"

ಮೊದಲನೇ ವಾಚನ: ಜ್ಞಾನೋಕ್ತಿಗಳು 31:10-13, 19-20, 30-31

ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಆಕೆ ಹವಳಕ್ಕಿಂತಲೂ ಬಹು ಮೌಲ್ಯಳು. ಗಂಡನು ಆಕೆಯಲ್ಲಿ ಹೃತ್ಪೂರ್ವಕ ನಂಬಿಕೆಯಿಡುವನು; ಅವನಿಗೆ ಆದಾಯದ ಕೊರತೆ ಇರದು. ಜೀವಮಾನವಿಡೀ ಆಕೆ ಅವನಿಗೆ ಒಳ್ಳೆಯದನ್ನೆ ಮಾಡುವಳು; ಎಂದಿಗೂ ಆಕೆ ಅವನಿಗೆ ಕೇಡನ್ನು ಬಗೆಯಳು. ಉಣ್ಣೆಯನ್ನೂ ಸೆಣಬನ್ನೂ ಹುಡುಕಿ ತರುವಳು; ತನ್ನ ಕೈಗಳಿಂದಲೇ ಬಟ್ಟೆಯನ್ನು ನೇಯುವಳು. ರಾಟೆಯನ್ನು ತಾನೆ ಆಡಿಸುತ್ತಾಳೆ; ಕದಿರನ್ನು ಕೈಯಿಂದ ಹಿಡಿಯುತ್ತಾಳೆ. ಬಡವರಿಗೆ ಕೈಬಿಚ್ಚಿ ಕೊಡುತ್ತಾಳೆ; ದಿಕ್ಕಿಲ್ಲದವರಿಗೆ ಕೈಚಾಚಿ ನೀಡುತ್ತಾಳೆ. ಆಕರ್ಷಣೆ ನೆಚ್ಚತಕ್ಕದಲ್ಲ. ಅಲಂಕಾರ ನೆಲೆಯಾದುದಲ್ಲ; ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವಳೆ ಸ್ತುತ್ಯಾರ್ಹಳು. ಆಕೆಯ ಕೈ ಕೆಲಸಕ್ಕೆ ತಕ್ಕ ಪ್ರತಿಫಲ ಲಭಿಸಲಿ; ಆಕೆಯ ಕಾರ್ಯಗಳೇ ಆಕೆಯನ್ನು ಪುರದ್ವಾರಗಳಲ್ಲಿ ಹೊಗಳಲಿ!

ಕೀರ್ತನೆ: 128:1-2, 3, 4-5
ಶ್ಲೋಕ: ಧನ್ಯನು ಪ್ರಭುವಿನಲಿ ಭಯಭಕ್ತಿಯುಳ್ಳವನು. 

ಎರಡನೇ ವಾಚನ: 1 ಥೆಸೆಲೋನಿಯರಿಗೆ 5:1-6


ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.  ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ. ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು. ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ. ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.

ಶುಭಸಂದೇಶ:, ಮತ್ತಾಯ 25:14-30



ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ. ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನು ಒಪ್ಪಿಸಿದ. ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು - ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ. ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ. ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ. ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ. ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿಬಂದ. ಸೇವಕರಿಂದ ಲೆಕ್ಕಾಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, ‘ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ತಲೆಂತು ಸಂಪಾದಿಸಿದ್ದೇನೆ,’ ಎಂದ. ಅದಕ್ಕೆ ಆ ಧಣಿ, “ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ, ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,’ ಎಂದ. ಎರಡು ತಲೆಂತು ಪಡೆದಿದ್ದವನೂ ಮುಂದೆ ಬಂದು, ‘ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು ಒಪ್ಪಿಸಿದಿರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ,’ ಎಂದ. ಧಣಿ ಅವನಿಗೂ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು,’ ಎಂದ. ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದ; ‘ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ. ನೀವು ಬಿತ್ತದ ಎಡೆಯಲ್ಲಿ ಕೊಯ್ಲುಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು; ಆದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ. ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸಂದಿದೆ,’ ಎಂದ. “ಆಗ ಧಣಿ ಅವನಿಗೆ, ‘ಎಲವೋ, ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲುಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ? ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತ್ತಿದ್ದೆ,’ ಎಂದ. ಅನಂತರ ಪರಿಚಾರಕರಿಗೆ, ‘ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ. ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು,’ ಎಂದು ಹೇಳಿದ."

No comments:

Post a Comment