ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

5.11.20

 ಮೊದಲನೇ ವಾಚನ: ಫಿಲಿಪ್ಪಿಯರಿಗೆ 3:3-8


ಸಹೋದರರೇ, ನಿಜವಾದ ಸುನ್ನತಿ ಪಡೆದವರು ನಾವು, ಏಕೆಂದರೆ, ನಾವು ಪವಿತ್ರಾತ್ಮ ಅವರ ಪ್ರೇರಣೆಯಿಂದ ದೇವರನ್ನು ಆರಾಧಿಸುತ್ತೇವೆ. ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಹರ್ಷಿಸುತ್ತೇವೆ. ಬಾಹ್ಯಾಚರಣೆಗಳಲ್ಲೇ ನಂಬಿಕೆಯಿಡದೆ ಬಾಳುತ್ತೇವೆ. ಇಂಥ ಬಾಹ್ಯಾಚರಣೆಯಲ್ಲಿ ನಂಬಿಕೆ ಇಡಲು ತಮಗೆ ಹಕ್ಕು ಇದೆಯೆಂದು ಯಾರಾದರೂ ಭಾವಿಸಿದರೆ, ನನ್ನ ಹಕ್ಕು ಅದಕ್ಕೂ ಮಿಗಿಲಾದುದು ಎಂದೇ ಹೇಳುತ್ತೇನೆ. ಹುಟ್ಟಿದ ಎಂಟನೆಯ ದಿನ ನನಗೆ ಸುನ್ನತಿಯಾಯಿತು; ಹುಟ್ಟಿನಿಂದ ನಾನು ಇಸ್ರಯೇಲನು, ಬೆನ್ಯಮೀನ ಕುಲದವನು; ಅಪ್ಪಟ ಹಿಬ್ರಿಯನು, ಧರ್ಮಶಾಸ್ತ್ರದ ದೃಷ್ಟಿಯಲ್ಲಿ ನಿಷ್ಠಾವಂತ ಫರಿಸಾಯನು; ಮತಾಶಕ್ತಿಯ ಹಿತದೃಷ್ಟಿಯಿಂದ ಧರ್ಮಸಭೆಯ ಹಿಂಸಕನು; ಧರ್ಮಶಾಸ್ತ್ರ ವಿಧಿನಿಯಮಗಳ ಪಾಲನೆಯಲ್ಲಿ ನಿಂದಾರಹಿತನು. ಇವನ್ನೆಲ್ಲಾ ಲಾಭವೆಂದು ಪರಿಗಣಿಸಿದ್ದ ನಾನು ಈಗ ಕ್ರಿಸ್ತಯೇಸುವಿನ ಸಲುವಾಗಿ ನಷ್ಟವೆಂದೇ ಎಣಿಸುತ್ತೇನೆ. ನಿಶ್ಚಯವಾಗಿಯೂ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನೂ ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ, ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ. 

ಕೀರ್ತನೆ: 105:2-3, 4-5, 6-7
ಶ್ಲೋಕ: ಹಿಗ್ಗಲಿ ಹೃದಯ, ಕೋರಿ ಪ್ರಭುವಿನ ದರ್ಶನ 

ಶುಭಸಂದೇಶ: ಲೂಕ 15:1-10

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: “ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ‘ಕಳೆದುಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾನೆ, ಅಲ್ಲವೆ? “ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಬತ್ತೊಂಬತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. “ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದುಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ? ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ‘ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾಳಲ್ಲವೆ? “ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ,” ಎಂದರು.

No comments:

Post a Comment