14.11.20 - "ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲುರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ?"

 ಮೊದಲನೇ ವಾಚನ: 3 ಯೊಹಾನ್ನ 1:5-8

ಪ್ರಿಯನೇ, ಸಹೋದರರಿಗೆ - ಮುಖ್ಯವಾಗಿ ಅಪರಿಚಿತರಿಗೆ ಸತ್ಕಾರ್ಯವನ್ನು ಮಾಡುವುದರಲ್ಲಿ ನೀನು ತುಂಬಾ ನಿಷ್ಠಾವಂತನು. ಇಲ್ಲಿಯ ಸಭೆಯ ಮುಂದೆ ಅವರೇ ನಿನ್ನ ಪ್ರೀತ್ಯಾದರವನ್ನು ಪ್ರಶಂಶಿಸಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು. ಅವರು ಈ ಸಂಚಾರವನ್ನು ಕೈಗೊಂಡಿರುವುದು ಕ್ರಿಸ್ತಯೇಸುವಿನ ಸೇವೆಗಾಗಿಯೆ. ಅನ್ಯಧರ್ಮೀಯರಿಂದ ಅವರು ಯಾವ ಸಹಾಯವನ್ನೂ ಸ್ವೀಕರಿಸುವವರಲ್ಲ. ಆದ್ದರಿಂದ, ಇಂಥವರಿಗೆ ನಾವು ನೆರವಾಗಲೇಬೇಕು. ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು. 

ಕೀರ್ತನೆ: 112:1-2, 3-4, 5-6
ಶ್ಲೋಕ: ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು.  

ಶುಭಸಂದೇಶ: ಲೂಕ 18:1-8


ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು. ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.” ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾದೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ? ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲುರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?’ ಎಂದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...