ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.11.20 - "ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 63:16-17, 19 

ನೀವೇ ನಮ್ಮ ತಂದೆ. ಅಬ್ರಹಾಮನು ನಮ್ಮನ್ನು ಅರಿಯದೆ ಇರಬಹುದು, ಇಸ್ರಯೇಲನು ನಮ್ಮನ್ನು ಗುರುತಿಸದೆ ಇರಬಹುದು, ಆದರೆ ಸರ್ವೇಶ್ವರಾ, ನೀವೇ ನಮ್ಮ ತಂದೆ, ನಮ್ಮ ಉದ್ಧಾರಕ; ಆದಿಯಿಂದ ಇರಲು ಅದುವೇ ನಿಮ್ಮ ನಾಮಾಂಕಿತ. ಸ್ವಾಮೀ, ನಾವು ನಿಮ್ಮ ಮಾರ್ಗ ತಪ್ಪಿ ಅಲೆಯುವಂತೆ ಮಾಡುತ್ತೀರಿ, ಏಕೆ? ನಿಮಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿಣಪಡಿಸುವುದು ಏಕೆ? ನಿಮ್ಮ ಶರಣರ ನಿಮಿತ್ತ, ನಿಮಗೆ ಬಾಧ್ಯರಾದ ಕುಲಗಳ ನಿಮಿತ್ತ, ನಮಗೆ ಪ್ರಸನ್ನಚಿತ್ತರಾಗಿರಿ. ನಾವಾದರೋ, ನಿಮ್ಮ ದೊರೆತನಕ್ಕೆ ಎಂದಿಗೂ ಒಳಗಾಗದ, ನಿಮ್ಮ ನಾಮವನ್ನು ಧರಿಸದ, ಪರಕೀಯರಂತೆ ಆಗಿದ್ದೇವಲ್ಲಾ! ಒಣಗಿಡಕ್ಕೆ ಹಚ್ಚುವ ಕಿಚ್ಚಿನಂತೆ, ನೀರನ್ನು ಕುದಿಸುವ ಬೆಂಕಿಯಂತೆ ನೀವು ಪ್ರತ್ಯಕ್ಷರಾಗಲಾರಿರಾ? ನಮ್ಮ ನಿರೀಕ್ಷೆಗೆ ಮೀರಿದ ಮಹತ್ಕಾರ್ಯಗಳನ್ನು ನಡೆಸಿ, ನಿಮ್ಮ ನಾಮ ಮಹಿಮೆಯನ್ನು ನಿಮ್ಮ ಶತ್ರುಗಳಿಗೆ ಪ್ರದರ್ಶಿಸಿ, ಅನ್ಯರಾಷ್ಟ್ರಗಳನ್ನು ನಡುಗಿಸಲಾರಿರಾ? ಹೌದು, ನೀವು ಇಳಿದುಬಂದು, ಬೆಟ್ಟಗುಡ್ಡಗಳು ನಡುಗಿದರೆ ಎಷ್ಟೋ ಲೇಸು. ತಮ್ಮನ್ನು ಕಾದು ಎದುರು ನೋಡುವವರ ಪರವಾಗಿ ಕಾರ್ಯಗತರಾಗುವಂಥ ದೇವರು, ನಿಮ್ಮನ್ನು ಬಿಟ್ಟರೆ, ಯಾರಿದ್ದಾರೆ? ಅಂಥಾ ದೇವರನ್ನು ಲೋಕಾದಿಯಿಂದ ಯಾರೂ ಕಂಡಿಲ್ಲ, ಅಂಥವರು ಯಾರ ಕಿವಿಗೂ ಬೀಳಲಿಲ್ಲ. ಯಾವ ಕಣ್ಣಿಗೂ ಕಾಣಿಸಲಿಲ್ಲ. ಸದಾಚಾರದಲ್ಲೇ ಸಂತೋಷಪಡುತ್ತಾ, ನಿಮ್ಮ ಮಾರ್ಗದಲ್ಲಿ ನಡೆಯುತ್ತಾ, ನಿಮ್ಮನ್ನು ಸ್ಮರಿಸುತ್ತಾ ಬಂದವರಿಗೆ ಪ್ರತ್ಯಕ್ಷರಾಗುತ್ತೀರಿ. ನಮ್ಮ ಮೇಲಾದರೋ ಕೋಪಗೊಂಡಿರಿ. ಆದರೂ ನಾವು ಪಾಪದಲ್ಲೇ ಮುನ್ನಡೆದೆವು. ಬಹುಕಾಲದಿಂದ ಪಾಪದಲ್ಲಿ ಮುಳುಗಿಹೋದೆವು. ನಮ್ಮಂಥವರಿಗೆ ರಕ್ಷಣೆ ಇದೆಯೇ? ನಾವೆಲ್ಲರೂ ಅಶುದ್ಧರು, ನಮ್ಮ ಸತ್ಕಾರ್ಯಗಳೆಲ್ಲ ಕೊಳಕು, ತರಗೆಲೆಯಂತೆ ಒಣಗಿ ಹೋಗಿದ್ದೇವೆ. ಬಿರುಗಾಳಿಯಂತೆ ನಮ್ಮನ್ನು ತಳ್ಳಿಕೊಂಡು ಬಂದಿವೆ, ನಮ್ಮ ಅಪರಾಧಗಳು. ನಿಮ್ಮ ನಾಮಸ್ಮರಣೆ ಮಾಡುವವನು ಯಾರೂ ಇಲ್ಲ. ನಿಮ್ಮ ಆಶ್ರಯ ಕೋರುವ ಆಸಕ್ತನು ಎಲ್ಲಿಯೂ ಇಲ್ಲ. ಏಕೆಂದರೆ ನೀವು ನಮಗೆ ವಿಮುಖರಾಗಿದ್ದೀರಿ. ನಮ್ಮ ಪಾಪಗಳ ವಶಕ್ಕೆ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ. 

ಕೀರ್ತನೆ: 80:2-3, 15-16, 18-19

ಶ್ಲೋಕ: ಎಲೈ ದೇವನೇ, ಪುನರುದ್ದಾರಮಾಡೆಮ್ಮನು, ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು. 

ಎರಡನೇ ವಾಚನ: 1ಕೊರಿಂಥಿಯರಿಗೆ 1:3-9 

ಸಹೋದರರೇ, ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ! ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್‍ಚತುರರು ಆಗಿದ್ದೀರಿ. ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ. ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರುನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ. ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು. ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸಪಾತ್ರರು. 

ಶುಭಸಂದೇಶ: ಮಾರ್ಕ 13:33-37 


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ. ಪ್ರವಾಸಕ್ಕೆಂದು ಯಜಮಾನನೊಬ್ಬನು ಮನೆಬಿಟ್ಟು ಹೋಗುವಾಗ ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜವಾಬ್ದಾರಿಕೆಯನ್ನು ವಹಿಸಿ, ದ್ವಾರಪಾಲಕನಿಗೆ ‘ನೀನು ಎಚ್ಚರವಾಗಿರಬೇಕು,’ ಎಂದು ಅಪ್ಪಣೆಕೊಡುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ; ಯಜಮಾನನು ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿ ಕೂಗುವಾಗಲೋ ಬೆಳಕು ಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು. ಅನಿರೀಕ್ಷಿತವಾಗಿ ಅವನು ಬಂದಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು! ನಿಮಗೆ ಹೇಳುವುದನ್ನೇ ಸರ್ವರಿಗೂ ಹೇಳುತ್ತೇನೆ; ಎಚ್ಚರಿಕೆಯಿಂದಿರಿ!” ಎಂದರು.

No comments:

Post a Comment