27.08.20 - ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ, ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:1-9

ಕ್ರಿಸ್ತಯೇಸುವಿನಲ್ಲಿ ಪುನೀತರಾಗಿ ದೇವಜನರಾಗಲು ಕರೆಹೊಂದಿರುವ ಕೊರಿಂಥದ ಶ್ರೀಸಭೆಯವರಿಗೂ ಹಾಗೂ ಪ್ರಭು ಯೇಸುಕ್ರಿಸ್ತರನ್ನು ಎಲ್ಲೆಡೆಯೂ ನಾಮಸ್ಮರಣೆ ಮಾಡುವ ಸರ್ವಜನರಿಗೂ - ದೇವರಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಲು ಕರೆಹೊಂದಿದ ಪೌಲನಾದ ನಾನು ಸಹೋದರ ಸೊಸ್ಥೆನನೊಂದಿಗೆ ಸೇರಿ ಬರೆಯುವ ಪತ್ರ. ಯೇಸುಕ್ರಿಸ್ತರು ನಮಗೂ ಸಮಸ್ತ ದೇವಜನರಿಗೂ ಪ್ರಭುವಾಗಿದ್ದಾರೆ. ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ! ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್ಚತುರರು ಆಗಿದ್ದೀರಿ. 6ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ. ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರುನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ. ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು. ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸಪಾತ್ರರು.

ಕೀರ್ತನೆ: 145:2-3, 4-5, 6-7

ಶ್ಲೋಕ: ದೇವಾ, ಮಾಡುವೆ ನಿನ್ನ ನಾಮಕ್ಕೆ ನಮನ ಯುಗಯುಗಾಂತರಕೂ

ಶುಭಸಂದೇಶ: ಮತ್ತಾಯ 24:42-51 


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಎಚ್ಚರಿಕೆಯಿಂದಿರಿ, ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.  ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?  ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು. “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು. ಯಜಮಾನನು ಮನೆಗೆ ಹಿಂದಿರುಗಿಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.  ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ.  ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,  ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ,  ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.  ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು."


No comments:

Post a Comment

15.07.2026 - ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ

  ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9 ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮ...