ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.08.20 - ದೋಣಿಯಲ್ಲಿದ್ದವರು “ನೀವು ನಿಜವಾಗಿಯೂ ದೇವರ ಪುತ್ರ!” ಎಂದು ಹೇಳಿ ಯೇಸುವನ್ನು ಆರಾಧಿಸಿದರು.

 ಮೊದಲನೇ ವಾಚನ: 1 ಅರಸುಗಳು 19:9, 11-13

ಎಲೀಯನು ಪ್ರಯಾಣಮಾಡಿ ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಆಗ “ನೀನು ಹೊರಗೆ ಬಂದು ಬೆಟ್ಟದ ಮೇಲೆ ಸರ್ವೇಶ್ವರನ ಮುಂದೆ ನಿಲ್ಲು,” ಎಂದು ವಾಣಿಯಾಯಿತು; ಆಹಾ! ಸರ್ವೇಶ್ವರ ಅಲ್ಲೇ ಹಾದುಹೋದರು, ಅವರ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಂಥ ದೊಡ್ಡ ಬಿರುಗಾಳಿ ಬೀಸಿತು; ಸರ್ವೇಶ್ವರ ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲೂ ಅವರಿರಲಿಲ್ಲ.  ಭೂಕಂಪವಾದನಂತರ ಸಿಡಿಲು ಉಂಟಾಯಿತು; ಅದರಲ್ಲಿಯೂ ಸರ್ವೇಶ್ವರ ಇರಲಿಲ್ಲ. ಕಡೆಗೊಂದು ಮೆಲುದನಿ!  ಅದನ್ನು ಕೇಳಿದ ಕೂಡಲೆ ಎಲೀಯನು ತನ್ನ ಕಂಬಳಿಯಿಂದ ಮುಖವನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. 

ಕೀರ್ತನೆ: 85:9, 10, 11-12, 13-14

ಶ್ಲೋಕ: ತೋರಿಸೆಮಗೆ ಪ್ರಭೂ, ಕರುಣೆಯನು

ಎರಡನೇ ವಾಚನ: ರೋಮನರಿಗೆ 9:1-5

ನನ್ನ ಜನರಾದ ಯೆಹೂದ್ಯರ ವಿಷಯವಾಗಿ ನನಗೆ ಅತೀವ ದುಃಖವೂ ನಿರಂತರ ಮನೋವೇದನೆಯೂ ಉಂಟಾಗುತ್ತಿದೆ.  ಇದು ಸುಳ್ಳಲ್ಲ, ಕ್ರಿಸ್ತಯೇಸುವಿನಲ್ಲಿ ಸತ್ಯವಾಗಿಯೇ ಹೇಳುತ್ತಿದ್ದೇನೆ. ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಇದಕ್ಕೆ ಸಾಕ್ಷಿಯಾಗಿದೆ. 3ಸ್ವದೇಶಿಯರೂ ರಕ್ತಸಂಬಂಧಿಕರೂ ಆದ ನನ್ನ ಸಹೋದರರ ಪರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕೃತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ.  ಅವರೇ ಇಸ್ರಯೇಲರು. ದೇವರೇ ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡರು; ಇವರಿಗೆ ತಮ್ಮ ಮಹಿಮೆಯನ್ನು ವ್ಯಕ್ತಪಡಿಸಿದರು; ಇವರೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಇವರಿಗೆ ಧರ್ಮಶಾಸ್ತ್ರವನ್ನೂ ಸಭಾರಾಧನೆಯನ್ನೂ ವಾಗ್ದಾನಗಳನ್ನೂ ದಯಪಾಲಿಸಿದರು.  ಅಬ್ರಹಾಮ್, ಇಸಾಕ್ ಮತ್ತು ಯಕೋಬ ಎಂಬ ಪಿತಾಮಹರೂ ಸಹ ಇವರಿಗೆ ಸೇರಿದವರೇ. ಶಾರೀರಿಕವಾಗಿ ಕ್ರಿಸ್ತಯೇಸುವೂ ಇವರ ವಂಶದಲ್ಲಿ ಹುಟ್ಟಿದವರೇ. ಸಕಲಕ್ಕೂ ಒಡೆಯರಾದ ದೇವರಿಗೆ ನಿರಂತರ ಸ್ತುತಿಸ್ತೋತ್ರ ಸಲ್ಲಲಿ, ಆಮೆನ್.

ಶುಭಸಂದೇಶ: ಮತ್ತಾಯ 14:22-33


ಯೇಸುಸ್ವಾಮಿ ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಹೋಗಬೇಕೆಂದು ಆಜ್ಞಾಪಿಸಿದರು.  ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು.  ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು.  ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು.  ಹೀಗೆ ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, “ಭೂತ, ಭೂತ!” ಎಂದು ಚೀರಿದರು.  ತಕ್ಷಣವೇ ಯೇಸು, “ಭಯಪಡಬೇಡಿ, ನಾನೇ ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ,” ಎಂದು ಅವರೊಡನೆ ಮಾತನಾಡಿದರು.  ಆಗ ಪೇತ್ರನು, “ಸ್ವಾಮೀ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ,” ಎಂದನು. ಯೇಸು, “ಬಾ” ಎಂದು ಕರೆಯಲು ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು.  ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿಹೋಗಲಾರಂಭಿಸಿದನು. ಆಗ, “ಸ್ವಾಮೀ, ಕಾಪಾಡಿ, ಕಾಪಾಡಿ,” ಎಂದು ಕೂಗಿಕೊಂಡನು.  ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದರು.  ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು.  ದೋಣಿಯಲ್ಲಿದ್ದವರು, “ನೀವು ನಿಜವಾಗಿಯೂ ದೇವರ ಪುತ್ರ!” ಎಂದು ಹೇಳಿ ಯೇಸುವನ್ನು ಆರಾಧಿಸಿದರು.

No comments:

Post a Comment