ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.08.20 - “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,”

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ  56:1, 6-7

ಸರ್ವೇಶ್ವರ ಸ್ವಾಮಿ ಹೇಳುವುದು ಏನೆಂದರೆ : ನ್ಯಾಯವನ್ನು ಅನುಸರಿಸಿರಿ. ನೀತಿಯನ್ನು ಆಚರಿಸಿರಿ. ಏಕೆಂದರೆ ನಾನೀಡುವ ಮುಕ್ತಿಯು ಬೇಗನೆ ಬರುವುದು; ನಾನು ತರುವ ಸತ್ಸಂಬಂಧವು ಕೂಡಲೆ ಬೆಳಗುವುದು. ಅನ್ಯದೇಶೀಯರಲ್ಲಿ ಯಾರು ಯಾರು ‘ಸರ್ವೇಶ್ವರ’ ಎಂದು ನನ್ನನ್ನು ಅವಲಂಭಿಸಿ, ಪೂಜಿಸಿ, ನನ್ನ ನಾಮವನ್ನು ಪ್ರೀತಿಸಿ, ನನಗೆ ದಾಸನಾಗಿ, ಸಬ್ಬತ್ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ, ಜೊತೆಗೆ ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸುತ್ತಾರೋ, ಅವರೆಲ್ಲರನ್ನು ನನ್ನ ಪವಿತ್ರಪರ್ವತಕ್ಕೆ ಬರಮಾಡುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.”

ಕೀರ್ತನೆ: 67:2-3, 5, 6, 8

ಶ್ಲೋಕ: ನಿನ್ನ ಕೀರ್ತಿಸಲಿ ದೇವಾ ಜನರು, ಸಕೀರ್ತಿಸಲಿ ಅವರೆಲ್ಲರು

ಎರಡನೇ ವಾಚನ: ರೋಮನರಿಗೆ 11:13-15, 29-32

ಈಗ ನಾನು ಇಸ್ರಯೇಲರಲ್ಲದ ನಿಮ್ಮನ್ನು ಉದ್ದೇಶಿಸಿ ಹೇಳುತ್ತೇನೆ: ನಾನು ನಿಮ್ಮಂಥ ಅನ್ಯಜನರಿಗೆ ಪ್ರೇಷಿತನಾಗಿ ಕಳುಹಿಸಲ್ಪಟ್ಟವನು. ಇದರ ಬಗ್ಗೆ ಹೆಮ್ಮೆಪಡುತ್ತೇನೆ.  ಆದರೂ ಈ ಸೇವೆಯ ಮೂಲಕ ನನ್ನ ಸ್ವಜನರಲ್ಲಿ ಪ್ರೇಮಾಸೂಯೆಯನ್ನು ಮೂಡಿಸಿ ಅವರಲ್ಲಿ ಬಹುಶಃ ಕೆಲವರನ್ನಾದರೂ ಉದ್ಧಾರದ ಮಾರ್ಗಕ್ಕೆ ತರಲು ಸಾಧ್ಯವಾದೀತೆಂದು ನಂಬುತ್ತೇನೆ. ಇಸ್ರಯೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾಗುವಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವಕ್ಕೆ ಎದ್ದುಬಂದಂತಾಗುವುದಲ್ಲವೆ? ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆಗೆದುಕೊಳ್ಳುವವರಲ್ಲ. ಇಸ್ರಯೇಲರಲ್ಲದ ನೀವು ಹಿಂದೊಮ್ಮೆ ದೇವರಿಗೆ ಅವಿಧೇಯರಾಗಿದ್ದಿರಿ. ಆದರೆ ಈಗ ಇಸ್ರಯೇಲರ ಅವಿಧೇಯತೆಯ ನಿಮಿತ್ತ ದೇವರ ದಯೆಯನ್ನು ಹೊಂದಿದ್ದೀರಿ. ಅದೇ ಪ್ರಕಾರ ಅವರು ಈಗ ಅವಿಧೇಯರಾಗಿದ್ದರೂ ನೀವು ಹೊಂದಿದ ಕರುಣೆಯ ನಿಮಿತ್ತ ಅವರೂ ಕರುಣೆಯನ್ನು ಹೊಂದುವರು. ಏಕೆಂದರೆ, ಸರ್ವರೂ ತಮ್ಮ ಕರುಣೆಯನ್ನು ಸವಿಯುವಂತೆ ದೇವರು ಎಲ್ಲರನ್ನು ಅವಿಧೇಯತೆ ಎಂಬ ಬಂಧನಕ್ಕೆ ಒಳಪಡಿಸಿದ್ದಾರೆ.

ಶುಭಸಂದೇಶ: ಮತ್ತಾಯ 15:21-28


ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು.  ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. “ಸ್ವಾಮೀ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು.  ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, “ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ,” ಎಂದು ಕೇಳಿಕೊಂಡರು.  ಆಗ ಯೇಸು, “ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ,” ಎಂದರು.  ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ಸಹಾಯ ಮಾಡಿ,” ಎಂದು ಯಾಚಿಸಿದಳು.  ಅದಕ್ಕೆ ಯೇಸು, “ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು.  ಆಗ ಆಕೆ, “ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?’ ಎಂದು ಮರುತ್ತರ ಕೊಟ್ಟಳು.  ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.

No comments:

Post a Comment