17.08.20 - "ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ"

ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 24:15-24

ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು -  “ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದುಬಿಡುವೆನು. ಆದರೂ ನೀನು ಗೋಳಾಡಬೇಡ, ಅಳಬೇಡ, ಕಣ್ಣೀರು ಸುರಿಸಬೇಡ.  ಸದ್ದಿಲ್ಲದೆ ಮೊರೆಯಿಡು, ವಿಯೋಗದುಃಖ ತೋರಿಸಬೇಡ. ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ.” “ಹೀಗೆ ಆಜ್ಞೆಯಾಗಲು, ನಾನು ಪ್ರಾತಃಕಾಲದಲ್ಲಿ ಜನರಿಗೆ ಪ್ರವಾದಿಸಿದೆನು; ಸಾಯಂಕಾಲಕ್ಕೆ ನನ್ನ ಪತ್ನಿ ತೀರಿಹೋದಳು; ಮಾರನೆಯ ಬೆಳಿಗ್ಗೆ ನನಗೆ ಅಪ್ಪಣೆಯಾದಂತೆ ನಡೆದುಕೊಂಡೆನು.  ಜನರು, “ನೀನು ಹೀಗೆ ಮಾಡುವುದರಿಂದ ನಾವು ತಿಳಿಯತಕ್ಕದ್ದೇನು? ತಿಳಿಸುವುದಿಲ್ಲವೋ?’ ಎಂದು ನನ್ನನ್ನು ಕೇಳಿದರು. ಅದಕ್ಕೆ ನಾನು ಹೀಗೆ ಹೇಳಿದೆ: “ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದ್ದಾರೆ - ಇಸ್ರಯೇಲ್ ವಂಶದವರಿಗೆ ಹೀಗೆ ಸಾರು - ಹಾ, ನಿಮಗೆ ಮುಖ್ಯಬಲ, ನೇತ್ರಾನಂದ ಹಾಗು ಪ್ರಾಣಪ್ರಿಯ ಆದ ನನ್ನ ಪವಿತ್ರಾಲಯವನ್ನು ನಾನು ಅಪವಿತ್ರಮಾಡಿಸುವೆನು; ನೀವು ಬಿಟ್ಟುಬಂದಿರುವ ನಿಮ್ಮ ಗಂಡು ಹೆಣ್ಣುಮಕ್ಕಳು ಖಡ್ಗಕ್ಕೆ ತುತ್ತಾಗುವರು, ಎಂಬುದಾಗಿ ಸರ್ವೇಶ್ವರನಾದ ದೇವರು ನುಡಿದಿದ್ದಾರೆ.  ನಾನು ಮಾಡಿದಂತೆ ಆಗ ನೀವೂ ಮಾಡುವಿರಿ, ಅಂದರೆ ಬಟ್ಟೆಯಿಂದ ಬಾಯನ್ನು ಮುಚ್ಚಿಕೊಳ್ಳದೆ,  ಗಾರಿಗೆಯನ್ನು ತಿನ್ನದೆ, ರುಮಾಲನ್ನು ಸುತ್ತಿಕೊಂಡು, ಕೆರಗಳನ್ನು ಮೆಟ್ಟಿಕೊಂಡು ಇರುವಿರಿ; ನೀವು ಗೋಳಾಡುವುದಿಲ್ಲ, ಅಳುವುದಿಲ್ಲ. ಆದರೆ ನಿಮ್ಮ ಅಧರ್ಮದಿಂದ ಕ್ಷೀಣವಾಗಿ ನರಳುವಿರಿ. ಒಬ್ಬರೆದುರಿಗೆ ಒಬ್ಬರು ನರಳುವಿರಿ.  ಈ ವಿಷಯದಲ್ಲಿ ಯೆಜೆಕಿಯೇಲನು ನಿಮಗೆ ಮುಂಗುರುತಾಗಿರುವನು. ಅವನು ಮಾಡಿದಂತೆಯೇ ಎಲ್ಲವನ್ನು ಮಾಡುವಿರಿ; ಇದು ಸಂಭವಿಸುವಾಗ ನಾನೇ ಸರ್ವೇಶ್ವರನಾದ ದೇವರು ಎಂದು ನಿಮಗೆ ಗೊತ್ತಾಗುವುದು."

ಧರ್ಮೋಪದೇಶಕಾಂಡ: 32:18-19, 20, 21

ಶ್ಲೋಕ: ಸ್ಮರಿಸಲಿಲ್ಲ ನೀವು, ಹೆತ್ತ ತಾಯಂತಿದ್ದ ದೇವರನು

ಶುಭಸಂದೇಶ: ಮತ್ತಾಯ 19:16-22


ಒಮ್ಮೆ ಯೇಸುಸ್ವಾಮಿಯ ಬಳಿಗೆ ಒಬ್ಬ ಯುವಕನು ಬಂದು, “ಗುರುದೇವಾ, ಅಮರ ಜೀವವನ್ನು ಪಡೆಯಲು ನಾನು ಒಳ್ಳೆಯದೇನನ್ನು ಮಾಡಬೇಕು?” ಎಂದು ಕೇಳಿದನು.  ಅದಕ್ಕೆ ಅವರು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ವಿಚಾರಿಸುವುದು ಏಕೆ? ಒಳ್ಳೆಯವರು ಒಬ್ಚರೇ. ನೀನು ಆ ಜೀವಕ್ಕೆ ಪ್ರವೇಶಿಸಬೇಕಾದರೆ ದೈವಾಜ್ಞೆಗಳನ್ನು ಅನುಸರಿಸು,” ಎಂದರು.  “ಅವು ಯಾವುವು?” ಎಂದು ಮರುಪ್ರಶ್ನೆ ಹಾಕಿದ. ಅವನಿಗೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸಬೇಕು,” ಎಂದರು.  ಅದಕ್ಕೆ ಆ ಯುವಕ, “ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಇನ್ನೇನು ಕೊರತೆ ಇದೆ?” ಎಂದು ಮತ್ತೆ ಕೇಳಿದ.  ಆಗ ಯೇಸು, “ನೀನು ಸಂಪೂರ್ಣನಾಗಬೇಕು ಎಂದಿದ್ದರೆ ಹೋಗು, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.  ಇದನ್ನು ಕೇಳಿದ್ದೇ ಆ ಯುವಕ ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟೇಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು.



No comments:

Post a Comment

15.07.2026 - ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ

  ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9 ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮ...