ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

23.08.20 - “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,”

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 22:15, 19-23

ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಹೀಗೆ ನುಡಿದಿದ್ದಾರೆ : “ಹೋಗು, ಅರಮನೆಯ ಮೇಲ್ವಿಚಾರಕ ಶೆಬ್ನ ಎಂಬ ಅಧ್ಯಕ್ಷನಿಗೆ ಹೀಗೆಂದು ಹೇಳು : ನಿನ್ನನ್ನು ಕೆಲಸದಿಂದ ತೆಗೆದುಬಿಡುವರು, ನಿನ್ನ ಪದವಿಯಿಂದ ತೆಗೆದುಹಾಕುವರು. “ಆ ದಿನದಂದು, ನನ್ನ ದಾಸನೂ ಹಿಲ್ಕಿಯನ ಮಗನೂ ಆದ ಎಲ್ಯಾಕೀಮನನ್ನು ಬರಮಾಡುವೆನು.  ನಿನ್ನ ವಸ್ತ್ರವನ್ನು ಅವನಿಗೆ ತೊಡಿಸುವೆನು. ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟುವೆನು. ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಜೆರುಸಲೇಮಿನ ನಿವಾಸಿಗಳಿಗೂ ಜುದೇಯದ ಮನೆತನಕ್ಕೂ ತಂದೆಯಾಗಿರುವನು.  ದಾವೀದ ಮನೆತನದ ಅಧಿಕಾರವನ್ನು ಅವನ ಹೆಗಲ ಮೇಲೆ ಹೊರಿಸುವೆನು. ಅವನು ತೆರೆದ ಬಾಗಿಲನ್ನು ಯಾರೂ ಮುಚ್ಚರು; ಅವನು ಮುಚ್ಚಿದ ಬಾಗಿಲನ್ನು ಯಾರೂ ತೆರೆಯರು.  ವಸ್ತುಗಳನ್ನು ತಗುಲಿಹಾಕುವ ಮೊಳೆಯಂತೆ ಗಟ್ಟಿಯಾದ ಸ್ಥಳದಲ್ಲಿ ಅವನನ್ನು ಬಿಗಿಯಾಗಿ ನಿಲ್ಲಿಸುವೆನು. ಅಲ್ಲದೆ, ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು."

ಕೀರ್ತನೆ: 138:1-2, 2-3, 6, 8

ಶ್ಲೋಕ: ಪ್ರಭೂ, ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು

ಎರಡನೇ ವಾಚನ: ರೋಮನರಿಗೆ 11:33-36

ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ! “ಪ್ರಭುವಿನ ಮನಸ್ಸನ್ನು ಅರಿತವರಾರು? ಅವರಿಗೆ ಉಪದೇಶಿಸುವವರಾರು? ಮೊದಲೇ ಅವರ ಬಳಿ ಕೊಟ್ಟಿಟ್ಟವರಾರು? ಹೀಗೆ ಅವರಿಂದ ಪ್ರತಿಫಲ ಪಡೆದವರಾರು?” ಸಮಸ್ತವೂ ಉಂಟಾಗುವುದು ಅವರಿಂದಲೇ; ಮುಂದುವರಿಯುವುದೂ ಅವರ ಮುಖಾಂತರವೇ; ಇರುವುದೂ ಅವರಿಗೋಸ್ಕರವೇ. ಆ ಪ್ರಭುವಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ. ಆಮೆನ್.

ಶುಭಸಂದೇಶ: ಮತ್ತಾಯ 16:13-20


ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು.  ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು.  ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು.  ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು.  ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ.  ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.  ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,”  ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ‘ಅಭಿಷಿಕ್ತರಾದ ಲೋಕೋದ್ಧಾರಕ’ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು.



No comments:

Post a Comment