24.08.20 - “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,”

 ಮೊದಲನೇ ವಾಚನ: ಪ್ರಕಟನೆ 21:9-14

ದೇವದೂತರುಗಳಲ್ಲಿ  ಒಬ್ಬನು ಬಂದು, ನನ್ನೊಡನೆ ಮಾತನಾಡಿ ಇಂತೆಂದನು: “ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ,” ಎಂದನು.  ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು;  ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು.  ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು.  ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು.  ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.

ಕೀರ್ತನೆ: 145:10-11, 12-13, 17-18

ಶ್ಲೋಕ: ಪ್ರಭೂ, ಭಕ್ತಸಮೂಹವು ಪ್ರಸಿದ್ಧಪಡಿಸುವುದು ನಿನ್ನ ರಾಜ್ಯದ ಮಹತ್ವವನು

ಶುಭಸಂದೇಶ: ಯೊವಾನ್ನ 1:45-51


ಫಿಲಿಪ್ಪನು ನತಾನಿಯೇಲನನ್ನು ಕಂಡು, “ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು,” ಎಂದು ಹೇಳಿದನು.  ಅದಕ್ಕೆ ನತಾನಿಯೇಲನು, “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ?” ಎಂದು ಕೇಳಲು, “ಬಂದು ನೀನೇ ನೋಡು,” ಎಂದು ಫಿಲಿಪ್ಪನು ಉತ್ತರಕೊಟ್ಟನು.  ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು.  ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು.  ಅದಕ್ಕೆ ನತಾನಿಯೇಲನು, “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು.  ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,” ಎಂದು ನುಡಿದರು. ತಮ್ಮ ಮಾತನ್ನು ಮುಂದುವರೆಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.



No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...