ಮೊದಲ ವಾಚನ: 2 ಕೊರಿಂಥಿಯರಿಗೆ 12:1-10
ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಆದುದರಿಂದ ಪ್ರಭು ನನಗಿತ್ತ ದರ್ಶನಗಳನ್ನು ಮತ್ತು ಶ್ರುತಪಡಿಸಿದ ಸತ್ಯಗಳನ್ನು ಕುರಿತು ಹೇಳುತ್ತೇನೆ. ಕ್ರೈಸ್ತನಾದ ಒಬ್ಬ ವೆಕ್ತಿಯನ್ನು ನಾನು ಬಲ್ಲೆ. ಅವನು ಹದಿನಾಲ್ಕು ವರ್ಷಗಳಿಗೆ ಹಿಂದೆ ಮಹೋನ್ನತ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ದೇಹಸಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು. ಅವನು ಪರಂಧಾಮಕ್ಕೆ ಒಯ್ಯಲ್ಪಟ್ಟನೆಂಬುದು ನಿಶ್ಚಯ. ದೇಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು. ಅಲ್ಲಿ ಅವನಿಗೆ ಕೇಳಿ ಬಂದ ವಿಷಯಗಳು ಮಾನವನ ವರ್ಣನೆಗೆ ಎಟುಕದವು. ಮಾನವನ ನುಡಿಗೆ ನಿಲುಕದವು. ಅವನನ್ನು ಕುರಿತು ನಾನು ಹೆಮ್ಮೆಪಡುತ್ತೇನೆ. ಆದರೆ ನನ್ನನ್ನು ಕುರಿತು ನಾನು ಹೊಗಳಿಕೊಳ್ಳುವುದಿಲ್ಲ. ನನ್ನ ದೌರ್ಬಲ್ಯವೇ ನನ್ನ ಹೊಗಳಿಕೆ. ಹಾಗೇನಾದರೂ ನಾನು ಹೊಗಳಿಸಿಕೊಳ್ಳಲು ಆಶಿಸಿದರೆ ಅದೇನು ಹುಚ್ಚುತನವಲ್ಲ. ಏಕೆಂದರೆ, ನಾನು ನುಡಿಯುತ್ತಿರುವುದು ಸತ್ಯವನ್ನೇ. ಆದರೂ ನಾನು ಹಾಗೆ ಹೊಗಳಿಕೊಳ್ಳುವುದಿಲ್ಲ. ಕಾರಣ, ಯಾರೂ ನನ್ನಲ್ಲಿ ಕಾಣುವುದಕಿಂತಲೂ ನನ್ನಿಂದ ಕೇಳುವುದಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು. ನನಗೆ ತಿಳಿಸಲಾದ ಗಹನ ಸತ್ಯಗಳಿಂದ ನಾನು ಉಬ್ಬಿಹೋಗದ ಹಾಗೆ ನನ್ನ ದೇಹದಲ್ಲಿ ಶೂಲದಂತೆ ನಾಟಿರುವ ಬೇನೆಯೊಂದನ್ನು ನನಗೆ ಕೊಡಲಾಯಿತು. ನಾನು ಆಹಂಕಾರ ಪಡದಹಾಗೆ ಇದು ನನ್ನನ್ನು ತಿವಿತಿವಿದು ಸೃತಾನನ ದೂತನಂತೆ ಕಾಡಿಸುತ್ತಿತ್ತು. ಈ ಪೀಡೆ ನನ್ನನ್ನು ಬಿಟ್ಟು ತೊಲಗಲೆಂದು ನಾನು ಮೂರು ಸಾರಿ ಪ್ರಭುವಿನಲ್ಲಿ ಬೇಡಿಕೊಂಡೆ. ಅದಕ್ಕವರು, "ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ," ಎಂದು ಹೇಳಿದರು. ಕ್ರಿಸ್ತ ಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಹೆಮ್ಮೆಪಡುತ್ತೇನೆ. ದುರ್ಬಲತೆಗಳಲ್ಲೂ ದುರವಸ್ಥೆಗಳಲ್ಲೂ ಮಾನನಷ್ಟದಲ್ಲೂ ಕಷ್ಟಹಿಂಸೆಗಳಲ್ಲೂ, ಆಪತ್ತುವಿಪತ್ತುಗಳಲ್ಲೂ ನಾನು ಕ್ರಿಸ್ತಯೇಸುವಿನ ನಿಮಿತ್ತ ಸಂತುಷ್ಟನಾಗಿದ್ದೇನೆ. ನಾನು ಬಲಶಾಲಿಯಾಗಿರುವುದು ಬಲಹೀನನಾಗಿರುವಾಗಲೇ.
ಕೀರ್ತನೆ: 34:8-9, 10-11, 12-13
ಶ್ಲೋಕ: ಸವಿದು ನೋಡು ಪ್ರಭುವಿನ ಮಾಧುರ್ಯವನು
ಶುಭಸಂದೇಶ: ಮತ್ತಾಯ 6:24-34
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಯಾರೂ ಇಬ್ಬರು ಯಜಮಾನರಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು. ನಾನು ಹೇಳುವುದನ್ನು ಕೇಳಿ; "ಪ್ರಾಣಧಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು" ಎಂದು ಚಿಂತೆಮಾಡಬೇಡಿ. ಊಟಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೇ? ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಗಮನಿಸಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕುಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೆ? ಚಿಂತಿಸಿ, ಚಿಂತಿಸಿ ನಿಮ್ಮ ಜೀವನಾವಧಿಯನ್ನು ಕೊಂಚ ಕಾಲವಾದರೂ ದೀರ್ಘ ಮಾಡಲು ನಿಮ್ಮಲ್ಲಿ ಯಾರಿಂದಾದೀತು? ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಲಿಲ್ಲ. ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ? ಅದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ. ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ ಎಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂದಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ; ಇಂದಿನ ಪಾಡೇ ಇಂದಿಗೆ ಸಾಕು."
Very Nice
ReplyDelete