ಮೊದಲನೇ ವಾಚನ: 2 ಕೊರಿಂಥಿಯರಿಗೆ
8:1--9
ಸಹೋದರರೇ,
ಮಕೆದೋನಿಯ ಸಭೆಗಳಿಗೆ ದೇವರು ದಯಪಾಲಿಸಿದ ಕೃಪಾತಿಶಯಗಳನ್ನು ನಾನು ನಿಮಗೆ ತಿಳಿಸಬಯಸುತ್ತೇನೆ. ಈ ಸಭೆಗಳವರು ಕಷ್ಟಸಂಕಟಗಳ ಕುಲುಮೆಯಲ್ಲಿ ಬೆಂದಿದ್ದರೂ ಹರ್ಷಭರಿತರಾಗಿದ್ದಾರೆ.
ಕಡುಬಡತನದಲ್ಲಿ ನರಳುತ್ತಿದ್ದರೂ ಅಪಾರ ಔದಾರ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಶಕ್ತಿಗನುಸಾರವಾಗಿ ಮಾತ್ರವಲ್ಲ,
ಕೆಲವೊಮ್ಮೆ ಶಕ್ತಿ ಮೀರಿಯೂ ನೀಡಿದ್ದಾರೆಂದು ನಾನು ಖಂಡಿತವಾಗಿ ಹೇಳುತ್ತೇನೆ.
ದೇವಜನರಿಗೆ ನೆರವಾಗುವ ಸೌಭಾಗ್ಯದಲ್ಲಿ ತಾವೂ ಭಾಗಿಗಳಾಗಬೇಕೆಂದು,
ಸ್ವಂತ ಇಷ್ಟದಿಂದ ನಮ್ಮನ್ನು ಅವರು ಬಹುವಾಗಿ ಬೇಡಿಕೊಂಡರು. ಇದನ್ನು, ನಾವು ನಿರೀಕ್ಷಿಸಲೇ ಇಲ್ಲ! ಮೊಟ್ಟಮೊದಲು ಅವರು ತಮ್ಮನ್ನೇ ಪ್ರಭುವಿಗೆ ಸಮರ್ಪಿಸಿದರು. ಆನಂತರ ದೈವಚಿತ್ತಕ್ಕೆ ಅನುಗುಣವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.
ಇಂಥ ಪ್ರೀತಿಮಯ ಸೇವಾಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ತೀತನು ಅದನ್ನು ಮುಂದುವರಿಸಿ, ಪೂರ್ಣಗೊಳಿಸಬೇಕೆಂದು ನಾವು ಆತನನ್ನು ಕೇಳಿಕೊಂಡಿದ್ದೇವೆ.
ವಿಶ್ವಾಸ, ವಾಕ್ಚಾತುರ್ಯ, ಜ್ಞಾನ, ಶ್ರದ್ಧೆ,
ನಮ್ಮ ಬಗ್ಗೆ ನಿಮಗಿರುವ ಪ್ರೀತಿ ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ಧರಾಗಿದ್ದೀರಿ. ಹಾಗೆಯೇ ಈ ಸೇವಾಕಾರ್ಯದಲ್ಲೂ ಸಮೃದ್ಧರಾಗಿರಿ.
ಇದನ್ನು ನಾನು ಆಜ್ಞಾರೂಪವಾಗಿ ಹೇಳುತ್ತಿಲ್ಲ. ಬೇರೆಯವರಿಗೆ
ಈ ಸೇವಾಕಾರ್ಯದಲ್ಲಿ ಇರುವ ಶ್ರದ್ಧೆಯನ್ನು ಆದರ್ಶವಾಗಿ ಹಿಡಿದು ನಿಮ್ಮ ಪ್ರೀತಿ ಎಷ್ಟು ಯಥಾರ್ಥವಾದುದೆಂದು ಕಂಡುಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇನೆ.
ಪ್ರಭು ಯೇಸುಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ.
ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು,
ತಾವು ಶ್ರೀಮಂತರಾಗಿದ್ದರೂ ನಿಮಗೊಸ್ಕರ ಬಡವರಾದರು.
ಕೀರ್ತನೆ: 146: 2, 5--6, 6--7, 8--9
ಶ್ಲೋಕ:
ನನ್ನ ಮನವೇ, ವಂದಿಸು ಪ್ರಭುವನು
ಶುಭಸಂದೇಶ:
ಮತ್ತಾಯ 5:43--48
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ: 'ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು' ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗೆರೆಯುತ್ತಾರೆ.ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.
ಮನಸಿಗೊಂದಿಷ್ಟು : ಕ್ರೈಸ್ತರಾದ ನಾವು ನಮ್ಮ ಮನಷ್ಯತ್ವವು ಪರಿಪೂರ್ಣಗೊಳ್ಳಬೇಕಾದರೆ ದೈವತ್ವದತ್ತ ಮನಸು ಮಾಡಬೇಕು ಎನ್ನುತ್ತಾರೆ ಚಿಂತಕನೊಬ್ಬ. ದೈವತ್ವದಲ್ಲಿ ಕ್ಷಮೆ ಇದೆ, ಸರ್ವರಿಗೂ ಪ್ರೀತಿ ಇದೆ. ಆ ಗುಣಗಳು ನಮಗೆ ಅತ್ಯವಶ್ಯಕ ಎಂದು ಯೇಸು ಹೇಳುತ್ತಾರೆ. ತಂದೆಯಂತೆ ಪರಿಪೂರ್ಣರಾಗಿರಿ ಎನ್ನುತ್ತಾ ಮಾನವತೆ ಹಾಗೂ ದೈವತ್ವದ ಅಂತರವನ್ನು ತಗ್ಗಿಸುತ್ತಿದ್ದಾರೆ.
ಪ್ರಶ್ನೆ : ಪರಿಪೂರ್ಣತೆಯೆಡೆಗಿನ ದಾರಿಯಲ್ಲಿ ನಾವೆಷ್ಟು ಕ್ರಮಿಸಿದ್ದೇವೆ.
No comments:
Post a Comment