ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 19:1-8
ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು, "ನೀವು ವಿಶ್ವಾಸಿಸಿದಾಗ ಪವಿತ್ರಾತ್ಮ ಅವರನ್ನು ಪಡೆದಿರೋ?" ಎಂದು ಕೇಳಿದನು. ಅದಕ್ಕೆ ಅವರು, "ಪವಿತ್ರಾತ್ಮ ಎಂಬುವರು ಇದ್ದಾರೆಂದು ನಾವು ಕೇಳಿಯೇ ಇಲ್ಲ," ಎಂದು ಉತ್ತರಿಸಿದರು. "ಹಾಗಾದರೆ ನೀವು ಯಾವ ಸ್ನಾನದೀಕ್ಷೆಯನ್ನು ಪಡೆದಿರಿ?" ಎಂದು ಪೌಲನು ಕೇಳಲು, "ನಾವು ಯೊವಾನ್ನನ ಸ್ನಾನದೀಕ್ಷೆಯನ್ನು ಪಡೆದೆವು," ಎಂದರು. ಆಗ ಪೌಲನು, "ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ "ನನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೆ ಯೇಸು ಎಂದು ಇಸ್ರಯೇಲರಿಗೆ ಬೋಧಿಸಿದ್ದನು," ಎಂದನು. ಇದನ್ನು ಕೇಳಿದಾಗ ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದರು. ಪೌಲನು ಅವರ ಮೇಲೆ ಹಸ್ತನಿಕ್ಷೇಪ ಮಾಡಲು, ಪವಿತ್ರಾತ್ಮ ಅವರ ಮೇಲೆ ಬಂದರು. ಆಗ ಅವರೆಲ್ಲರೂ ನಾನಾ ಭಾಷೆಗಳನ್ನು ಮಾತನಾಡುತ್ತಾ ಪ್ರವಾದಿಸಿದರು. ಇವರು ಸುಮಾರು ಹನ್ನೆರಡು ಮಂದಿ ಇದ್ದಿರಬಹುದು. ಅನಂತರ ಮೂರು ತಿಂಗಳ ಕಾಲ ಪೌಲನು ಪ್ರಾರ್ಥನಾಮಂದಿರಕ್ಕೆ ಹೋಗಿ ಧೈರ್ಯದಿಂದ ಮಾತನಾಡಿದನು. ದೇವರ ಸಾಮ್ರಾಜ್ಯದ ಬಗ್ಗೆ ಅಲ್ಲಿದ್ದವರೊಡನೆ ಚರ್ಚಿಸುತ್ತಾ ಅವರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸಿದನು.
ಕೀರ್ತನೆ: 68:--3, 4-5, 6-7
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು!
ಶುಭಸಂದೇಶ: ಯೊವಾನ್ನ 16:29-33
ಶಿಷ್ಯರು ಯೇಸುವಿಗೆ, "ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮತನಾಡುತ್ತಿದ್ದೀರಿ. ನೀವು ಎಲ್ಲವನ್ನೂ ಬಲ್ಲವರು. ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದು ನಾವು ವಿಶ್ವಾಸಿಸುತ್ತೇವೆ," ಎಂದರು. ಆಗ ಯೇಸುಸ್ವಾಮಿ, "ಈಗ ನೀವು ವಿಶ್ವಾಸಿಸುತ್ತೀರೋ? ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮ ನಿಮ್ಮ ಮನೆಗೆ ಚದರಿ ಹೋಗುವ ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಬ್ಬಂಟಿಗನಲ್ಲ. ನಿಮಗೆ ನನ್ನಲ್ಲಿ ಶಾಂತಿಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಷ್ಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ," ಎಂದು ಹೇಳಿದರು.
No comments:
Post a Comment