ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.06.19 - ಈ ನಂಬಿಕೆ ನಿರಿಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ

ಮೊದಲನೇ ವಾಚನ: ಜ್ಞಾನೋಕ್ತಿಗಳು 8:22--31
ಜ್ಞಾನವೆಂಬಾಕೆ ಇಂತೆನ್ನುತ್ತಾಳೆ: ತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ  ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳು. ನಾನು ಸ್ಥಾಪಿಸಲ್ಪಟ್ಟೆ ಪ್ರಾರಂಭದಲ್ಲೇ ಜಗದುತ್ಪತ್ತಿಗೆ ಮುಂಚೆಯೇ, ಅನಾದಿಕಾಲದಲ್ಲೇ. ಜಲನಿಧಿಗಳಾಗಲಿ, ನೀರಿನ ಬುಗ್ಗೆಗಳಾಗಲಿ ಇಲ್ಲದಿರುವಾಗಲೇ ನಾ ಬಂದೆ ಜನ್ಮತಾಳಿ. ನಾನು ಹುಟ್ಟಿದೆ ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮೊದಲೇ ನಾನು ಜನಿಸಿದೆ ಭೂಮಿಯನ್ನಾಗಲಿ, ಬೈಲನ್ನಾಗಲಿ ನೆಲದ ಅಣುರೇಣನ್ನಾಗಲಿ ಆತ ನಿರ್ಮಿಸದೆ ಇರುವಾಗಲೇ. ನಾನು ಅಲ್ಲಿದ್ದೆ ಆತ ಆಕಾಶಮಂಡಲವನ್ನು ಸ್ಥಪಿಸುವಾಗ ಸಾಗರದ ಮೇಲೆ ಚಕ್ರಾಕಾರದ ಗೆರೆಯನ್ನು ಎಳೆಯುವಾಗ, ಗಗನವನ್ನು ಮೇಲೆ ಸ್ಥಿರಪಡಿಸುವಾಗ ಸಾಗರದ ಸೆಲೆಗಳನ್ನು ನೆಲೆಗೊಳಿಸಿದಾಗ, ಜಲಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಸಮೂದ್ರಕ್ಕೆ ಎಲ್ಲೆಕಟ್ಟನ್ನು ನೇಮಿಸುವಾಗ ಭೂಮಿಯ ಅಸ್ತಿಭಾರವನ್ನು ಗೊತ್ತುಮಾಡುವಾಗ, ನಾನು ಆತನ ಬಳಿ ಕುಶಲ ಶಿಲ್ಪಿಯಂತಿದ್ದೆ ಅನುದಿನವೂ ಆತನಿಗೆ ಆನಂದವನ್ನೀಯುತ್ತಿದ್ದೆ ಸದಾ ಆತನ ಮುಂದೆ ಸಂತೋಷಪಡುತ್ತಿದ್ದೆ. ಉಲ್ಲಾಸಿಸುತ್ತಿದ್ದೆ ಆತನ ಭುಲೋಕದಲ್ಲಿ ಹರ್ಷಿಸುತ್ತಾ ಇದ್ದೆ ಮಾನವ ಸಂತಾನದಲ್ಲಿ.

ಕೀರ್ತನೆ: 8:4--5, 6--7, 8--9

ಶ್ಲೋಕ: ಪ್ರಭೂ, ಎಮ್ಮ ಪ್ರಭೂ, ನಿನ್ನ ನಾಮಾಮೃತ, ಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ

ಎರಡನೇ ವಾಚನ: ರೋಮನರಿಗೆ 5:1--5
ಸಹೋದರರೇ, ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧದಲ್ಲಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರೊಡನೆ ಶಾಂತಿಸಮಾಧಾನದಿಂದಿರುತ್ತೆವೆ. ವಿಶ್ವಾಸದ ಮೂಲಕ ನಾವು ದೈವಾನುಗ್ರಹವನ್ನು ಸವಿಯುವಂತೆ ಯೇಸುಕ್ರಿಸ್ತರು ದಾರಿ ತೋರಿಸಿದರು. ನಾವೀಗ ನೆಲೆಗೊಂಡಿರುವುದು ಅನುಗ್ರಹದಲ್ಲಿಯೇ. ಆದ್ದರಿಂದಲೇ, ದೇವರ ಮಹಿಮೆಯಲ್ಲಿ ನಾವೂ ಪಾಲುಗೊಳ್ಳುತ್ತೇವೆಂಬ ಭರವಸೆಯಿಂದ ಹೆಮ್ಮೆಪಡುತ್ತೇವೆ. ಅಷ್ಟೇ ಅಲ್ಲ, ನಮಗೆ ಬಂದೊದುಗುವ ಕಷ್ಟಸಂಕಟಗಳಲ್ಲೂ  ಹೆಮ್ಮೆಪಡುತ್ತೇವೆ. ಏಕೆಂದರೆ, ಕಷ್ಟಸಂಕಟಗಳು ಸಹನೆಯನ್ನು, ಸಹನೆಯು ಸದ್ಗುಣವನ್ನು, ಸದ್ಗುಣವು ನಂಬಿಕೆ ನಿರಿಕ್ಷೆಯನ್ನು ಬೆಳೆಸುತ್ತವೆಂದು ನಾವು ಬಲ್ಲೆವು. ನಂಬಿಕೆ ನಿರಿಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ.

ಶುಭಸಂದೇಶ: ಯೊವಾನ್ನ 16:12--15


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸಧ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದು. ಹೇಗೂ ಸತ್ಯಸ್ವರೂಪಿಯಾದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲ್ಲಿರುವುದನ್ನೂ ನಿಮಗೆ ತಿಳಿಸುವರು. ಅವರು, ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು. ಪಿತನಿಗೆ ಇರುವುದೆಲ್ಲವೂ ನನ್ನದೇ, ಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು."

ಮನಸಿಗೊಂದಿಷ್ಟು : ನಮ್ಮ ಬುದ್ಧಿಯನ್ನು ವಿಕಾಸಗೊಳಿಸುವ ಪವಿತ್ರಾತ್ಮರ ಮಹತ್ವವನು ಯೇಸು ಇಂದು ನಮಗೆ ತಿಳಿಸುತ್ತಾರೆ. ಪವಿತ್ರಾತ್ಮರಿಗೆ ನಮ್ಮ ಬದುಕಿನಲ್ಲಿ ನಾವು ದೊಡ್ಡ ಪಾತ್ರ ಸ್ಥಳ ಕೊಟ್ಟಾಗ ನಮ್ಮ ಬದುಕು ಪಡೆದುಕೊಳ್ಳುವ ಪಾವಿತ್ರತೆ, ಸಾರ್ಥಕತೆ ಅಗಾಧ. ಪವಿತ್ರಾತ್ಮರ ವರಕ್ಕಾಗಿ ನಮ್ಮ ಹೃದಯ ಸದಾ ಹಾತೊರೆಯಲಿ.

ಪ್ರಶ್ನೆ : ಪವಿತ್ರಾತ್ಮರಿಗಾಗಿ ನಾವೆಷ್ಟು ಹಾತೊರೆದಿದ್ದೇವೆ.

No comments:

Post a Comment