ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 20:17-27
ಪೌಲನು ಮಿಲೇತದಿಂದ ಎಫೆಸಕ್ಕೆ ಸಮಾಚಾರ ಕಳುಹಿಸಿ, ಅಲ್ಲಿನ ಧರ್ಮಸಭೆಯ ಪ್ರಮುಖರನ್ನು ಬರಮಾಡಿಕೊಂಡನು. ಬಂದಮೇಲೆ ಅವರಿಗೆ ಹೀಗೆಂದನು: "ನಾನು ಏಷ್ಯ ಪ್ರಾಂತ್ಯದಲ್ಲಿ ಕಾಲಿಟ್ಟ ದಿನ ಮೊದಲ್ಗೊಂಡು ಇಂದಿನವರೆಗೆ ನಿಮ್ಮ ಮಧ್ಯೆ ಹೇಗೆ ಬಾಳಿದೆನೆಂದು ನಿಮಗೆ ತಿಳಿದಿದೆ. ಯೆಹೂದ್ಯರ ಕುತಂತ್ರಗಳಿಂದ ನನಗೆ ಬಂದೊದಗಿದ ಸಂಕಷ್ಟಗಳಲ್ಲಿ, ನಾನು ಅತಿ ನಮ್ರತೆಯಿಂದಲೂ ಕಣ್ಣೀರಿಡುತ್ತಲೂ ಪ್ರಭುವಿನ ಸೇವೆಮಾಡಿಕೊಂಡು ಬಂದೆನು. ನಿಮಗೆ ಹಿತಕರವಾದುದೆಲ್ಲವನ್ನು ಬಹಿರಂಗದಲ್ಲೂ ಮನೆಗಳಲ್ಲೂ ಹಿಂಜರಿಯದೆ ಬೋಧಿಸಿದ್ದೇನೆ ಹಾಗೂ ಕಲಿಸಿದ್ದೇನೆ. ಪಾಪಕ್ಕೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಬೇಕು, ನಮ್ಮ ಪ್ರಭು ಯೇಸುವಿನಲ್ಲಿ ವಿಶ್ವಾಸವಿಡಬೇಕು, ಎಂದು ಯೆಹೂದ್ಯರಿಗೂ ಗ್ರೀಕರಿಗೂ ಸ್ಪಷ್ಟವಾದ ಎಚ್ಚರಿಕೆಯನ್ನು ಕೊಟ್ಟಿದ್ದೇನೆ. ಈಗಲಾದರೋ, ಪವಿತ್ರಾತ್ಮಪರವಶನಾಗಿ ನಾನು ಜೆರುಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೇನು ಸಂಭವಿಸುವುದೋ ತಿಳಿಯದು. ಸೆರೆಮನೆಯ ಹಾಗೂ ಸಂಕಷ್ಟಗಳು ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ಪ್ರತಿಯೊಂದು ಪಟ್ಟಣದಲ್ಲೂ ಕೊಟ್ಟ ಎಚ್ಚರಿಕೆ ಮಾತ್ರ ಸ್ಪಷ್ಟವಾಗಿದೆ. ನನಗಾದರೋ, ನನ್ನ ಪ್ರಾಣವು ತೃಣಕ್ಕೆ ಸಮಾನ. ಪ್ರಭು ಯೇಸು ನನಗೆ ವಿಧಿಸಿದ ಆಯೋಗವನ್ನು, ಅಂದರೆ ದೈವಾನುಗ್ರಹ ಕುರಿತಾದ ಶುಭಸಂದೇಶವನ್ನ ಸಾಕ್ಷ್ಯಪೂರ್ವಕವಾಗಿ ಸಾರುವ ಆಯೋಗವನ್ನು, ಪೂರೈಸುತ್ತಾ ನನ್ನ ಬಾಳಿನ ಗುರಿಯನ್ನು ಮುಟ್ಟುವೆನಾದರೆ, ನನಗೆ ಅಷ್ಟೇ ಸಾಕಾಗಿದೆ. ಇಗೋ, ಇಷ್ಟು ದಿನ ದೇವರ ಸಾಮ್ರಾಜ್ಯವನ್ನು ಪ್ರಕಟಿಸುತ್ತಾ ನಿಮ್ಮ ಮಧೈ ಸಂಚರಿಸಿದ ನನ್ನ ಮುಖವನ್ನು ಇನ್ನು ಮುಂದೆ ನೀವು ಯಾರೂ ಕಾಣಲಾರಿರಿ ಎಂದು ನಾನು ಬಲ್ಲೆ. ಇಂತಿರಲು ನಾನು ನಿಮಗೆ ಸಾರಿ ಹೇಳುವುದೇನೆಂದರೆ - ನಿಮ್ಮಲ್ಲಿ ಯಾರಾದರು ನಾಶವಾದರೆ, ಅದಕ್ಕೆ ನಾನು ಹೊಣೆಯಲ್ಲ. ಏಕೆಂದರೆ ದೈವ ಯೋಜನೆಯನ್ನು ಕಿಂಚಿತ್ತೂ ಮರೆಮಾಚದೆ ತಿಳಿಯಪಡಿಸಿದ್ದೇನೆ."
ಕೀರ್ತನೆ: 68:10, 11, 20, 21
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು
ಶುಭಸಂದೇಶ: ಯೊವಾನ್ನ 17:1-11
ಯೇಸುಸ್ವಾಮಿ ಅವರೊಡನೆ ಹೀಗೆ ಮಾತನಾಡಿದ ಮೇಲೆ ಆಕಾಶದತ್ತ ಕಣ್ಣೆತ್ತಿ ನೋಡಿ, "ಪಿತನೇ, ನಿರೀಕ್ಷಿಸಿದ ಗಳಿಗೆ ಬಂದಿದೆ ನಿಮ್ಮ ಪುತ್ರನು ನಿಮ್ಮ ಮಹಿಮೆಯನ್ನು ಬೆಳಗಿಸುವಂತೆ ನೀವು ಆತನ ಮಹಿಮೆಯನ್ನು ಬೆಳಗಿಸಿರಿ. ನರಮಾನವರೆಲ್ಲರ ಮೇಲೆ ನೀವು ಆತನಿಗೆ ಅಧಿಕಾರವನ್ನು ಕೊಟ್ಟಿರುವಿರಿ ಇದರಿಂದಾಗಿ ನೀವು ಆತನಿಗೆ ಒಪ್ಪಿಸಿರುವ ಎಲ್ಲರಿಗೆ ನಿತ್ಯಜೀವವನ್ನು ಆತನು ನೀಡುವನು. ಏಕೈಕ ನಿಜ ದೇವರಾದ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸುಕ್ರಿಸ್ತನನ್ನೂ ಅರಿತುಕೊಳ್ಳುವುದೇ ನಿತ್ಯಜೀವ. ನೀವು ನನಗೆ ಕೊಟ್ಟ ಕಾರ್ಯವನ್ನುನಾನು ಮಾಡಿ ಮುಗಿಸಿ ನಿಮ್ಮ ಮಹಿಮೆಯನ್ನು ಜಗತ್ತಿಗೆಲ್ಲ ತೋರ್ಪಡಿಸಿದೆನು. ಪಿತನೇ, ಈ ಜಗತ್ತು ಉಂಟಾಗುವ ಮೊದಲೇ ನಿಮ್ಮೊಡನೆ ನನಗಿದ್ದ ಅದೇ ಮಹಿಮೆಯನ್ನು ಕೊಟ್ಟು ನನ್ನನ್ನು ಈಗ ನಿಮ್ಮ ಸನ್ನಿಧಿಯಲ್ಲಿ ಮಹಿಮೆಪಡಿಸಿರಿ. "ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ಆದರೂ ಇವರನ್ನು ನನಗೆ ಕೊಟ್ಟಿರಿ ನಿಮ್ಮ ಮಾತಿಗೆ ವಿಧೇಯರಾಗಿ ಇವರು ನುಡಿದಿದ್ದಾರೆ. ನೀವು ನನಗೆ ಕೊಟ್ಟಿದೆಲ್ಲವೂ ನಿಜವಾಗಿ ನಿಮ್ಮಿಂದಲೇ ಬಂದಿರುವುದೆಂದು ಈಗ ಅವರಿಗೆ ತಿಳಿದಿದೆ. ನಿಮ್ಮಿಂದ ನಾನು ಕಲಿತುದೆಲ್ಲವನ್ನೂ ಇವರಿಗೆ ತಿಳಿಯಪಡಿಸಿದ್ದೇನೆ, ಅವುಗಳನ್ನು ಅವರು ಅಂಗೀಕರಿಸಿ ನಿಮ್ಮಿಂದಲೇ ನಾನು ಬಂದುದು ನಿಜವೆಂದು ಅರಿತುಕೊಂಡಿದ್ದಾರೆ. ನನ್ನನ್ನು ಕಳುಹಿಸಿದ್ದು ನೀವೇ ಎಂದು ವಿಶ್ವಾಸಿಸಿದ್ದಾರೆ. "ನಾನು ಪ್ರಾರ್ಥಿಸುವುದು ಇವರಿಗಾಗಿ, ಲೋಕಕ್ಕಾಗಿ ಅಲ್ಲ. ನೀವೇ ನನಗೆ ಕೊಟ್ಟವರಿಗಾಗಿ ಪ್ರಾರ್ಥಿಸುತ್ತೇನೆ. ಏಕೆಂದರೆ, ಇವರು ನಿಮ್ಮವರು; ಇವರಿಂದ ನನಗೆ ಮಹಿಮೆ ಉಂಟಾಗಿದೆ. ನನ್ನದೆಲ್ಲವೂ ನಿಮ್ಮದೇ; ನಿಮ್ಮದು ಎಲ್ಲವೂ ನನ್ನದೇ. ನಾನಿನ್ನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ.
No comments:
Post a Comment